Site icon Vistara News

ರಾಜ ಮಾರ್ಗ ಅಂಕಣ | ನಾನು ಅವರ ವಿವೇಚನೆಗೆ ಬಿಟ್ಟಿದ್ದೇನೆ ಅಂದಿದ್ದರು ವಾಜಪೇಯಿ!

atal bihari vajapayee

1999ನೆ ಇಸವಿ ಏಪ್ರಿಲ್ 17ನೇ ತಾರೀಕು ದೇಶದ ಪಾರ್ಲಿಮೆಂಟಿನಲ್ಲಿ ಒಂದು ಅಪೂರ್ವ ವಿಶ್ವಾಸಮತದ ಘಟನೆ ನಡೆಯಿತು. ವಿಶ್ವಾಸಮತವನ್ನು ಕೇಳಿದವರು ಎನ್‌ಡಿಎ ಮೈತ್ರಿ ಕೂಟದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು! ಅವರು ಹಲವು ಸಣ್ಣ ಪುಟ್ಟ ಪಕ್ಷಗಳ ಬೆಂಬಲವನ್ನು ಪಡೆದು 13 ತಿಂಗಳ ಅಧಿಕಾರವನ್ನು ಆಗಲೇ ಪೂರೈಸಿದ್ದರು. ಅವರ ಒಕ್ಕೂಟದಲ್ಲಿ ಒಂದು ಪಕ್ಷವಾಗಿದ್ದ ಎಐಡಿಎಂಕೆ ಸರಕಾರಕ್ಕೆ ತನ್ನ ಬೆಂಬಲವನ್ನು ಹಿಂದೆ ಪಡೆದಿತ್ತು. ಆಗ ಎಐಡಿಎಂಕೆ ಮುಖ್ಯಸ್ಥೆ ಆಗಿದ್ದ ಜಯಲಲಿತಾ ಆಗಲೇ ದೆಹಲಿಗೆ ಬಂದು ಬೀಡುಬಿಟ್ಟಿದ್ದರು.

ವಿಶ್ವಾಸಮತದ ಮೇಲೆ ಆಡಳಿತ ಪಕ್ಷ ಮತ್ತು ವಿಪಕ್ಷದ ಸದಸ್ಯರ ನಡುವೆ ತೀವ್ರವಾದ ಚರ್ಚೆಯು ಮುಗಿದು ಸ್ಪೀಕರ್ ಗೊತ್ತುವಳಿಯನ್ನು ಮತಕ್ಕೆ ಹಾಕಿದ್ದರು. ಇಡೀ ದೇಶ ಆ ಘಟನೆಯನ್ನು ಭಾರಿ ಕುತೂಹಲದಿಂದ ವೀಕ್ಷಣೆ ಮಾಡುತ್ತಿತ್ತು.

ಸರಕಾರದ ಪರವಾಗಿದ್ದ ಹಲವರು ಎಂ.ಪಿಗಳು ವಾಜಪೇಯಿ ಸರಕಾರಕ್ಕೆ ಉಲ್ಟಾ ಹೊಡೆದು ಸರಕಾರದ ವಿರುದ್ಧವಾಗಿ ಮತ ಹಾಕಿದ್ದರು. ಸರಕಾರದ ಪತನ ನಿಶ್ಚಿತವಾಗಿ ಇತ್ತು. ಬಹುಮತಕ್ಕೆ ಹೆಚ್ಚು ಕಡಿಮೆ ಒಂದು ಮತದ ಕೊರತೆ ಆಗುವ ಚಾನ್ಸ್ ಇತ್ತು!

ಆಗ ಗಿರಿಧರ್ ಗೋಮಾಂಗ್ ಅವರು ಲೋಕಸಭೆಗೆ ಮತ ಹಾಕಲು ಬಂದರು. ವಿಶೇಷ ಅಂದರೆ ಗಿರಿಧರ್ ಗೊಮಾಂಗ್ ಅವರು ಹಿಂದೆ ಲೋಕಸಭಾ ಸದಸ್ಯರು ಆಗಿದ್ದವರು. ಆದರೆ ಕೆಲವು ದಿನಗಳ ಹಿಂದೆ ಒಡಿಶಾ ವಿಧಾನಸಭೆಯ ಚುನಾವಣೆಯನ್ನು ಗೆದ್ದು ರಾಜ್ಯದ ಮುಖ್ಯಮಂತ್ರಿ ಆಗಿ ಪ್ರಮಾಣ ತೆಗೆದುಕೊಂಡಿದ್ದರು. ಆದರೆ ಅವರು ತಮ್ಮ ಲೋಕಸಭೆಯ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರಲಿಲ್ಲ! ನಿಯಮದ ಪ್ರಕಾರ ಅವರು ಲೋಕಸಭೆಯ ಮತವನ್ನು ಚಲಾವಣೆ ಮಾಡುವ ಹಾಗಿರಲಿಲ್ಲ.

ಆದರೆ ಸ್ಪೀಕರ್ ತೀರ್ಪು ಕೊಡಲು ಭಯಪಟ್ಟು ಪ್ರಧಾನಿ ವಾಜಪೇಯಿ ಅವರಿಗೆ ಏನು ಮಾಡೋಣ ಎಂದು ಕೇಳಿದರು. ವಾಜಪೇಯಿಗೆ ಒಂದು ಮತದ ಕೊರತೆ ಆಗಬಹುದಾದ ಸೂಚನೆ ಇತ್ತು. ಆ ಮತವು ತನ್ನ ಸರಕಾರವನ್ನು ಉರುಳಿಸುವುದು ಗೊತ್ತಿತ್ತು. ಆದರೆ ಒಂದು ಕ್ಷಣ ಕೂಡ ಯೋಚನೆ ಮಾಡದೆ ವಾಜಪೇಯಿ ನೇರವಾಗಿ ಹೇಳಿದ್ದರು – ನಾನು ಅವರ ವಿವೇಚನೆಗೆ ಬಿಟ್ಟಿದ್ದೇನೆ!

ಗಿರಿಧರ್ ಗೊಮಾಂಗ್ ಸರಕಾರದ ವಿರುದ್ಧ ಮತ ಚಲಾವಣೆ ಮಾಡಿದರು. ವಾಜಪೇಯಿ ಸರಕಾರ ಒಂದೇ ಮತದ ಕೊರತೆಯಿಂದ ವಿಶ್ವಾಸಮತ ಕಳೆದುಕೊಂಡು ಪತನವಾಯಿತು!

ಅದರ ಹಿಂದೆ ಕೂಡ ಅನೇಕ ರಾಜಕೀಯ ಪಕ್ಷಗಳು ಕುದುರೆ ವ್ಯಾಪಾರ, ಕತ್ತೆ ವ್ಯಾಪಾರ ಇತ್ಯಾದಿ ನಡೆಸಿ ಬಹುಮತ ಪಡೆದ ಉದಾಹರಣೆಗಳು ಇದ್ದವು. ಒಂದು ಮತವನ್ನು ಖರೀದಿ ಮಾಡಲು ವಾಜಪೇಯಿ ಅವರಿಗೆ ಯಾವ ಸಮಸ್ಯೆಯೂ ಇರಲಿಲ್ಲ. ಅಥವಾ ಅವರು ಗಿರಿಧರ್ ಗೊಮಾಂಗ್ ಅವರಿಗೆ ನಿಯಮದ ಪ್ರಕಾರ ಮತವನ್ನು ನಿರಾಕರಣೆ ಮಾಡಿದರೂ ವಾಜಪೇಯಿ ವಿಶ್ವಾಸಮತ ಗೆಲ್ಲುತ್ತಿದ್ದರು. ಆದರೆ ವಾಜಪೇಯಿ ಹಾಗೆ ಮಾಡಲಿಲ್ಲ. ವಿಶ್ವಾಸ ಮತ ಕಳೆದುಕೊಂಡು “ಮೈ ಸತ್ತಾ ಚೋಡ್ ದೂಂಗ!” ಎಂದು ಸುದೀರ್ಘವಾಗಿ ಮಾತಾಡಿ ರಾಜೀನಾಮೆ ಕೊಟ್ಟು ಸದನದಿಂದ ನಿರ್ಗಮಿಸಿದರು. ಲೋಕಸಭೆ ವಿಸರ್ಜನೆ ಆಯಿತು!

ಮುಂದಿನ ಲೋಕಸಭಾ ಚುನಾವಣೆಯಲ್ಲಿ NDA ಪೂರ್ಣ ಪ್ರಮಾಣದ ಬಹುಮತ ಪಡೆದು ಅಧಿಕಾರಕ್ಕೆ ಬಂದಿತು. ವಾಜಪೇಯಿ ಅವರು (1999-2004) ಐದು ವರ್ಷಗಳ ಪೂರ್ಣ ಅವಧಿಗೆ ಮತ್ತೆ ಪ್ರಧಾನಿ ಆದರು.

ಆದರೆ 1999ರ ಏಪ್ರಿಲ್ 17ರ ವಿಶ್ವಾಸ ಮತಯಾಚನೆಯಲ್ಲಿ ಅವರು ತೋರಿದ ಪ್ರಬುದ್ಧತೆ ಮತ್ತು ಸಮಚಿತ್ತದ ಮನಸ್ಥಿತಿ ಭಾರತೀಯ ರಾಜಕೀಯ ಇತಿಹಾಸದಲ್ಲೊಂದು ಅಮರ ಚರಿತೆಯಾಯಿತು.

ಇದನ್ನೂ ಓದಿ| ರಾಜ ಮಾರ್ಗ ಅಂಕಣ | ವೀರ ಸಾವರ್ಕರ್ ಹೇಳಿದ ಗಜೇಂದ್ರ ಮೋಕ್ಷದ ಕತೆ

Exit mobile version