ದೋಹಾ: ಪ್ರವಾದಿ ಮೊಹಮ್ಮದ್ ಬಗ್ಗೆ ನೂಪುರ್ ಶರ್ಮಾ ಆಡಿದ ಮಾತು ಕೋಲಾಹಲ ಸೃಷ್ಟಿಸಿದೆ. ಮುಸ್ಲಿಂ ರಾಷ್ಟ್ರಗಳು ತಾ ಮುಂದು..ನಾ ಮುಂದು ಎಂದು ಭಾರತದ ವಿರುದ್ಧ ಟೀಕೆ ಮಾಡುತ್ತಿವೆ. ಅದರೊಂದಿಗೆ ಈಗ ಭಾರತದ ಉತ್ಪನ್ನಗಳನ್ನು ಬಹಿಷ್ಕರಿಸಿ (Boycott of the Indian products) ಎಂಬ ಆನ್‌ಲೈನ್ ಅಭಿಯಾನವೂ ಅರಬ್ ರಾಷ್ಟ್ರಗಳಲ್ಲಿ (Arab Countries) ಪ್ರಾರಂಭವಾಗಿದೆ. ಅಂದರೆ ಅರಬ್ ರಾಷ್ಟ್ರಗಳ ಜನರು ಭಾರತದಿಂದ ಆಮದಾಗಿ ಬರುವ ಯಾವುದೇ ಉತ್ಪನ್ನಗಳನ್ನು ಬಳಸಬಾರದು ಎಂದು ಸೋಷಿಯಲ್ ಮೀಡಿಯಾದ ಪೋಸ್ಟ್‌ಗಳ ಮೂಲಕ ಕರೆಕೊಡಲಾಗುತ್ತಿದೆ.
ಕತಾರ್, ಕುವೈತ್, ಇರಾನ್ ಸೇರಿ ವಿವಿಧ ಮುಸ್ಲಿಂ ರಾಷ್ಟ್ರಗಳು ಈಗಾಗಲೇ ನೂಪುರ್ ಶರ್ಮಾ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೆ, ಅಲ್ಲಿರುವ ಭಾರತೀಯ ರಾಯಭಾರಿಗೆ ಸಮನ್ಸ್ ಕೂಡ ನೀಡಿವೆ. ಅದೆಲ್ಲದರ ಬಳಿಕ ಸೌದಿ ಅರೇಬಿಯಾ ಪ್ರತಿಕ್ರಿಯೆ ನೀಡಿ, ಭಾರತದಲ್ಲಿ ಬಿಜೆಪಿ ವಕ್ತಾರರೊಬ್ಬರು ಪ್ರವಾದಿ ಮೊಹಮ್ಮದರ ವಿರುದ್ಧ ನೀಡಿದ್ದು ಅವಮಾನಕರ ಹೇಳಿಕೆ ಎಂದಿದೆ. ಹಾಗೇ, ಎಲ್ಲ ಧರ್ಮವನ್ನೂ ಗೌರವಿಸಿ ಎಂದೂ ಹೇಳಿದೆ.
ಸೋಷಿಯಲ್ ಮೀಡಿಯಾದಲ್ಲಿ Boycott Indian Products ಮತ್ತು Boycott Hindutva ಎಂಬ ಹ್ಯಾಷ್‌ಟ್ಯಾಗ್‌ಗಳು ಟ್ರೆಂಡ್‌ನಲ್ಲಿವೆ. ಸೌದಿ ಅರೇಬಿಯಾದಲ್ಲಿ ಈಗಾಗಲೇ ಹಲವು ಸೂಪರ್ ಸ್ಟೋರ್‌ಗಳಿಂದ ಭಾರತದ ಉತ್ಪನ್ನಗಳನ್ನು ತೆಗೆದುಹಾಕಲಾಗಿದೆ. ಇನ್ನೊಂದೆಡೆ ಕುವೈತ್‌ನಲ್ಲೂ ಕೂಡ ಸೂಪರ್ ಮಾರ್ಕೆಟ್‌ಗಳಿಂದ ಭಾರತೀಯ ಉತ್ಪನ್ನಗಳನ್ನು ತೆಗೆಯಲಾಗುತ್ತಿದೆ. ಭಾರತದ ಚಹಾ, ಅಕ್ಕಿ, ಮಸಾಲೆಗಳು, ಮೆಣಸಿನಕಾಯಿಗಳನ್ನೆಲ್ಲ ದೊಡ್ಡದೊಡ್ಡ ಚೀಲಗಳಲ್ಲಿ ತುಂಬಿ ಪ್ಯಾಕ್ ಮಾಡಿ, ಅದರ ಮೇಲೆ ʼನಾವು ಭಾರತೀಯ ಉತ್ಪನ್ನಗಳನ್ನು ಮಾರಾಟ ಮಾಡುವುದಿಲ್ಲʼ ಎಂದು ದೊಡ್ಡದಾಗಿ ಬರೆದ ಪೋಸ್ಟರ್ ಅಂಟಿಸಲಾಗಿದೆ. ಆ ಪ್ಯಾಕ್‌ಗಳನ್ನು ಟ್ರೇಗಳಲ್ಲಿ ಇಟ್ಟು ಸಾಗಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಫೋಟೋವನ್ನು ಕಸದ ತೊಟ್ಟಿಗಳಿಗೆ ಕೂಡ ಅಂಟಿಸಲಾಗಿದೆ.
ಇದನ್ನೂ ಓದಿ: ಉಳಿದ ಧರ್ಮಗಳನ್ನೂ ಗೌರವಿಸಿ: ಇಸ್ಲಾಮಿಕ್ ಸಹಕಾರ ಸಂಘಟನೆಗೆ ಭಾರತ ಸರ್ಕಾರದ ಖಡಕ್ ಪ್ರತಿಕ್ರಿಯೆ