ನವ ದೆಹಲಿ: ದ್ರೌಪದಿ ಮುರ್ಮುರಿಗೆ ರಾಷ್ಟ್ರಪತ್ನಿ ಎಂದು ಹೇಳಿದ ಕಾಂಗ್ರೆಸ್ ನಾಯಕ ಅಧೀರ್ ಚೌಧರಿ ಈಗ ಪ್ರತಿಪಕ್ಷಗಳ ಹೋರಾಟಕ್ಕೆ ಸ್ವಲ್ಪ ಮಣಿದಂತೆ ಇದೆ. ʼಇದು ನನ್ನ ಬಾಯ್ತಪ್ಪಿನಿಂದ ಆದ ಎಡವಟ್ಟು. ದ್ರೌಪದಿ ಮುರ್ಮು ಅವರಿಗೆ ನೋಯಿಸುವ ಉದ್ದೇಶ ನನಗಿರಲಿಲ್ಲ. ನಿಜ ಹೇಳಬೇಕು ಎಂದರೆ ನನ್ನ ಭಾಷೆ ಬೆಂಗಾಳಿ. ಹಿಂದಿ ಮಾತನಾಡಲು ನನಗೆ ಕಷ್ಟ. ಹಾಗಾಗಿ ಕೆಲವು ಶಬ್ದಗಳನ್ನು ಹೇಳುವಾಗ ನಾನು ತಪ್ಪು ಮಾಡುತ್ತಿರುತ್ತೇನೆʼ ಎಂದು ಹೇಳಿದ್ದಾರೆ. ಅಲ್ಲದೆ, ʼಈ ವಿವಾದದಲ್ಲಿ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿಯವರ ಹೆಸರನ್ನು ಎಳೆಯಬೇಡಿ. ಅವರು ಯಾಕೆ ಕ್ಷಮೆ ಕೇಳಬೇಕು?ʼ ಎಂದೂ ಪ್ರಶ್ನಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅಧೀರ್ ಚೌಧರಿ, ʼನಾನು ದ್ರೌಪದಿ ಮುರ್ಮುಗೆ ಅವಮಾನ ಮಾಡಬೇಕು ಎಂದು ಎಂದಿಗೂ ಯೋಚಿಸಲಿಲ್ಲ. ಹಾಗೊಮ್ಮೆ ನನ್ನ ಮಾತಿನಿಂದ ದ್ರೌಪದಿ ಮುರ್ಮುರಿಗೆ ನೋವಾಗಿದ್ದರೆ, ನಾನು ಅವರನ್ನು ಭೇಟಿಯಾಗಿ ಕ್ಷಮೆ ಕೇಳುತೇನೆ. ನನ್ನ ತಪ್ಪೇ ಎಂದಾದರೆ ಶಿಕ್ಷೆ ಅನುಭವಿಸಲು ಸಿದ್ಧನಿದ್ದೇನೆ. ಆದರೆ ಯಾವ ಕಾರಣಕ್ಕೂ ಸೋನಿಯಾ ಗಾಂಧಿ ಹೆಸರು ಎಳೆದು ತರಬೇಡಿʼ ಎಂದು ಹೇಳಿದ್ದಾರೆ.
ದ್ರೌಪದಿ ಮುರ್ಮುರಿಗೆ ಅಧೀರ್ ರಂಜನ್ ಚೌಧರಿ ರಾಷ್ಟ್ರಪತ್ನಿ ಎಂದು ಸಂಬೋಧಿಸಿದ್ದಕ್ಕೆ ಬಿಜೆಪಿಯವರು ಇಂದು ಲೋಕಸಭೆಯಲ್ಲಿ ದೊಡ್ಡಮಟ್ಟದ ಗಲಾಟೆ ಸೃಷ್ಟಿಸಿದ್ದಾರೆ. ಸೋನಿಯಾ ಗಾಂಧಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರು. ಕಾಂಗ್ರೆಸ್‌ಗೆ ಮಹಿಳೆಯರ ಬಗ್ಗೆ ಗೌರವ ಇಲ್ಲ, ಒಬ್ಬ ಆದಿವಾಸಿ ಹೆಣ್ಣುಮಗಳನ್ನು ಅವಹೇಳ ಮಾಡುವುದು ಸರಿಯಲ್ಲ ಎಂದೆಲ್ಲ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಸೋನಿಯಾ ಗಾಂಧಿ ಮತ್ತು ಸ್ಮೃತಿ ಇರಾನಿ ನಡುವೆ ಮಾತಿನ ಚಕಮಕಿ ನಡೆದು, ʼನೀವು ನನ್ನ ಬಳಿ ಮಾತನಾಡಲೇಬೇಡಿʼ ಎಂದು ಸೋನಿಯಾ ಗಾಂಧಿ, ಸ್ಮೃತಿ ಇರಾನಿಗೆ ಖಡಕ್ ಆಗಿ ಹೇಳಿದ್ದಾರೆ.
ಭಾರತದ ರಾಷ್ಟ್ರಪತಿ ಯಾರೇ ಆಗಿರಲಿ, ಅವರು ಬ್ರಾಹ್ಮಣರೇ ಆಗಲಿ, ಬುಡಕಟ್ಟು ಜನಾಂಗದವರೇ ಆಗಿರಲಿ ರಾಷ್ಟ್ರಪತಿ ರಾಷ್ಟ್ರಪತಿಯೇ..ಅದು ಈ ದೇಶದ ಅತ್ಯುನ್ನತ ಘನತೆ ಮತ್ತು ಗೌರವದ ಹುದ್ದೆ. ನಿನ್ನೆ ನಾನು ಮಾಧ್ಯಮಗಳೊಂದಿಗೆ ಮಾತನಾಡುತ್ತ, ʼನಾವು ರಾಷ್ಟ್ರಪತಿ ದ್ರೌಪದಿ ಮುರ್ಮುರನ್ನು ಭೇಟಿಯಾಗಲು ರಾಷ್ಟ್ರಪತಿ ಭವನಕ್ಕೆ ಹೋಗುತ್ತೇವೆʼ ಎಂದು ಹೇಳುತ್ತಿದ್ದೆ. ಆಗ ಒಂದು ಬಾರಿ ನನ್ನ ಬಾಯಿಂದ ರಾಷ್ಟ್ರಪತ್ನಿ ಎಂಬ ಪದ ಹೊರಬಿತ್ತು. ಅದು ಖಂಡಿತವಾಗಿಯೂ ಉದ್ದೇಶಪೂರ್ವಕವಾಗಿ ಹೇಳಿದ್ದಲ್ಲ ಎಂದೂ ಸ್ಪಷ್ಟನೆ ಕೊಟ್ಟಿದ್ದಾರೆ.
ಇದನ್ನೂ ಓದಿ: ದ್ರೌಪದಿ ಮುರ್ಮುಗೆ ರಾಷ್ಟ್ರಪತ್ನಿ ಎಂದ ಕಾಂಗ್ರೆಸ್ ನಾಯಕ ಅಧೀರ್ ಚೌಧರಿ; ಬಿಜೆಪಿ ಆಕ್ರೋಶ