Site icon Vistara News

ಲಖನೌ, ಉನ್ನಾವೊ ಆರೆಸ್ಸೆಸ್‌ ಕಚೇರಿಗೆ ಬಾಂಬ್‌ ಬೆದರಿಕೆ, ಕನ್ನಡದಲ್ಲೂ ಇತ್ತು ವಾಟ್ಸ್ ಆ್ಯಪ್‌‌ ಮೆಸೇಜ್!

rss

ಲಖನೌ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಲಖನೌ ಮತ್ತು ಉನ್ನಾವೋ ಕಚೇರಿಗಳನ್ನು ಬಾಂಬ್‌ ಇಟ್ಟು ಸ್ಫೋಟಿಸಲಾಗುವುದು ಎಂದು ಬೆದರಿಕೆ ಹಾಕಲಾಗಿದೆ. ಸೋಮವಾರ ರಾತ್ರಿ ಎಂಟು ಗಂಟೆಯ ಹೊತ್ತಿಗೆ ಅಂತಾರಾಷ್ಟ್ರೀಯ ನಂಬರ್‌ನಿಂದ ಈ ವಾಟ್ಸ್‌ ಆ್ಯಪ್‌ ಸಂದೇಶ ಬಂದಿದೆ. ವಿಶೇಷವೆಂದರೆ ಈ ಸಂದೇಶ ಹಿಂದಿ, ಇಂಗ್ಲಿಷ್‌ ಮತ್ತು ಕನ್ನಡದಲ್ಲೂ ಇತ್ತು!‌

ಇದನ್ನೂ ಓದಿ| ಪ್ರತಿ ಮಸೀದಿಯಲ್ಲೂ ಶಿವಲಿಂಗ ಹುಡುಕುವ ಅಗತ್ಯವೇನಿದೆ? ಆರ್‌ಎಸ್‌ಎಸ್‌ ಮುಖ್ಯಸ್ಥ ಭಾಗವತ್‌

ಲಖನೌನ ಆರ್‌ಎಸ್ಸೆಸ್‌ ಕಾರ್ಯಕರ್ತ ನೀಲಕಂಠ ತಿವಾರಿ ಅವರಿಗೆ ಬೆದರಿಕೆ ಸಂದೇಶ ಬಂದಿದೆ. ಅವರು ಕೂಡಾ ಪೊಲೀಸರಿಗೆ ಮಾಹಿತಿ ನೀಡಿದರು. ʻʻಲಖನೌ ಮತ್ತು ಉನ್ನಾವೋದ ಆರೆಸ್ಸೆಸ್‌ ಕಚೇರಿಗಳಿಗೆ ಬೆದರಿಕೆ ಬಂದಿರುವ ಬಗ್ಗೆ ಮಾಡಿಯಾಂವ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಚೇರಿಗಳನ್ನು ಸ್ಪೋಟಿಸುವುದಾಗಿ ಸಂದೇಶ ಬಂದಿದ್ದು, ಸೈಬರ್‌ ಸೆಲ್‌ನ ಸಹಾಯದಿಂದ ಸಂದೇಶ ಕಳುಹಿಸಿದ್ದು ಯಾರು ಎನ್ನುವುದನ್ನು ಪತ್ತೆ ಹಚ್ಚಲಾಗುವುದುʼʼ ಎಂದು ಲಖನೌ ಪೊಲೀಸರು ತಿಳಿಸಿದ್ದಾರೆ.

ಕನ್ನಡದಲ್ಲೂ ಇತ್ತು ಸಂದೇಶ
ವಾಟ್ಸ್‌ ಆ್ಯಪ್‌ ಸಂದೇಶವನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಕಳುಹಿಸಲಾಗಿದೆ. ಆದರೆ, ಕನ್ನಡದಲ್ಲೂ ಈ ಸಂದೇಶ ಇರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಲಖನೌನಲ್ಲಿ ಕನ್ನಡ ಬಲ್ಲವರು ಹೆಚ್ಚಿಲ್ಲ. ಯಾಕಾಗಿ ಕಳುಹಿಸಿದರು ಎನ್ನುವುದು ಒಂದು ಕಡೆಯಾದರೆ ಸಂದೇಶ ಕಳುಹಿಸಿದವರು ಕನ್ನಡಿಗರೇ ಆಗಿರಬಹುದು ಎಂಬ ಸಂಶಯವೂ ಇದೆ. ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಕನ್ನಡಿಗರಿದ್ದು ಎಲ್ಲಿಂದಲೋ ಕಳುಹಿಸಿರುವ ಸಾಧ್ಯತೆ ಇದೆ. ಈ ನಡುವೆ, ಕರ್ನಾಟಕ ಮತ್ತು ಕೇರಳದಲ್ಲಿ ಪ್ರಾಬಲ್ಯ ಹೆಚ್ಚಿಸಿಕೊಳ್ಳುತ್ತಿರುವ ಪಿಎಫ್‌ ಐ ಸಂಘಟನೆಯ ಸದಸ್ಯರು ಬೇರೆ ಬೇರೆ ದೇಶಗಳಲ್ಲಿದ್ದಾರೆ. ಇವರ ಕೈವಾಡವೂ ಇದರಲ್ಲಿ ಇರುವ ಸಾಧ್ಯತೆಯೂ ಇದೆ.

ಭಾಗವತ್‌ ಸೌಹಾರ್ದತೆಯ ಮಾತಾಡಿದರೂ..
ನಿಜವೆಂದರೆ ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಕೆಲವು ದಿನಗಳ ಹಿಂದಷ್ಟೇ ಸೌಹಾರ್ದತೆಯ ಮಾತುಗಳನ್ನಾಡಿದ್ದರು. ಮೂರನೇ ಸಂಘ ಶಿಕ್ಷಾ ವರ್ಗದಲ್ಲಿ ಮಾತನಾಡುತ್ತಾ, ಎಲ್ಲಾ ಕಡೆ ಮಸೀದಿಗಳನ್ನು ಅಗೆದು ಶಿವಲಿಂಗಗಳಿಗಾಗಿ ಹುಡುಕಾಟ ನಡೆಸಬೇಕಾಗಿಲ್ಲ. ಕೆಲವು ದೇವಸ್ಥಾನಗಳಿಗೆ ಇದನ್ನು ಸೀಮಿತಗೊಳಿಸಬಹುದು. ಮುಸ್ಲಿಮರೇನೂ ಬೇರೆಲ್ಲಿಂದಲೋ ಇಳಿದುಬಂದವರಲ್ಲ. ನಮ್ಮದೇ ಪೂರ್ವಜರ ಪೀಳಿಗೆ ಅವರದು. ಅವರು ಕೂಡಾ ನಮ್ಮ ರಕ್ತ ಸಂಬಂಧಿಗಳು, ಸಹೋದರರು ಎಂದಿದ್ದರು. ಅದಾಗಿ ಕೆಲವೇ ದಿನಗಳಲ್ಲಿ ಆರೆಸ್ಸೆಸ್‌ ಕಚೇರಿಗೇ ಬಾಂಬ್‌ ಬೆದರಿಕೆ ಹಾಕಲಾಗಿದೆ! ಪ್ರತಿ ಮಸೀದಿಯಲ್ಲೂ ಶಿವಲಿಂಗ ಹುಡುಕುವ ಅಗತ್ಯವೇನಿದೆ? ಆರ್‌ಎಸ್‌ಎಸ್‌ ಮುಖ್ಯಸ್ಥ ಭಾಗವತ್‌

Exit mobile version