ನವ ದೆಹಲಿ: ನ್ಯಾಷನಲ್ ಹೆರಾಲ್ಡ್ ಕೇಸ್ (National Herald Case) ಗೆ ಸಂಬಂಧಪಟ್ಟು ಇಂದು ಸುಮಾರು 12 ಕಡೆಗಳಲ್ಲಿ ಇ ಡಿ ಅಧಿಕಾರಿಗಳು ರೇಡ್ ಮಾಡಿದ್ದಾರೆ. ನ್ಯಾಷನಲ್ ಹೆರಾಲ್ಡ್ ಕಚೇರಿ ಮೇಲೆ ಕೂಡ ದಾಳಿಯಾಗಿದೆ. ಹಾಗೇ ಮತ್ತೆ ಕಾಂಗ್ರೆಸ್ ನಾಯಕರ ಪ್ರತಿಭಟನೆಯೂ ಪ್ರಾರಂಭವಾಗಿದೆ. ದೆಹಲಿಯಲ್ಲಿರುವ ನ್ಯಾಷನಲ್ ಹೆರಾಲ್ಡ್ ಆಫೀಸ್ ಎದುರು ನೂರಾರು ಕಾಂಗ್ರೆಸ್ ಕಾರ್ಯಕರ್ತರು ಗುಂಪುಗೂಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಮತ್ತು ತನಿಖಾ ಏಜೆನ್ಸಿ ವಿರುದ್ಧ ಘೋಷಣೆಗಳನ್ನು ಕೂಗಿ, ಫಲಕಗಳನ್ನು ಪ್ರದರ್ಶನ ಮಾಡಿದ್ದಾರೆ. ‘ಇಡಿ ಶೇಮ್ ಶೇಮ್ ಎಂದು ದೊಡ್ಡದಾಗಿ ಕೂಗಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಕೇಸ್ನಡಿ ಕಳೆದ ತಿಂಗಳು ರಾಹುಲ್ ಗಾಂಧಿಯನ್ನು ವಿಚಾರಣೆಗೆ ಒಳಪಡಿಸಿದ್ದ ಇಡಿ ಅಧಿಕಾರಿಗಳು ಜುಲೈನಲ್ಲಿ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿಯನ್ನು ಮೂರು ಸುತ್ತುಗಳ ವಿಚಾರಣೆಗೆ ಒಳಪಡಿಸಿದ್ದಾರೆ. ಇವರಿಬ್ಬರ ವಿಚಾರಣೆ ವೇಳೆಗೂ ಕೂಡ ಕಾಂಗ್ರೆಸ್ ಕಾರ್ಯಕರ್ತರು, ಪ್ರಮುಖರು ತೀವ್ರ ಪ್ರತಿಭಟನೆ ನಡೆಸಿದ್ದರು. ಇಂದು 12 ಸ್ಥಳಗಳಲ್ಲಿ ರೇಡ್ ಆದ ಬಳಿಕವೂ ಅದನ್ನೇ ಮುಂದುವರಿಸಿದ್ದಾರೆ.
ಹೀಗೆ ಪ್ರತಿಪಕ್ಷಗಳ ಹಲವು ನಾಯಕರ ವಿರುದ್ಧ ಇ ಡಿ ತನಿಖೆ ಆಗುತ್ತಿರುವುದನ್ನು ಅನೇಕರು ಖಂಡಿಸಿದ್ದಾರೆ. ಹಣದುಬ್ಬರ, ನಿರುದ್ಯೋಗ ಸೇರಿ ಅನೇಕ ವಿಚಾರಗಳ ಬಗ್ಗೆ ನಾವೆಲ್ಲ ಧ್ವನಿ ಎತ್ತುತ್ತಿದ್ದೇವೆ. ನಾವು ಕೇಳುವ ಪ್ರಶ್ನೆಗಳಿಗಾಗಲಿ, ಜನಸಾಮಾನ್ಯರಿಗಾಗಲೀ ಉತ್ತರ ಕೊಡಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ತನಿಖಾ ಏಜೆನ್ಸಿಗಳ ಮೂಲಕ ಬಾಯಿ ಮುಚ್ಚಿಸುತ್ತಿದೆ. ಬರೀ ಕಾಂಗ್ರೆಸ್ ನಾಯಕರನ್ನಷ್ಟೇ ಅಲ್ಲ, ಎಲ್ಲ ವಿಪಕ್ಷಗಳ ನಾಯಕರ ಮೇಲೆಯೂ ದೌರ್ಜನ್ಯ ನಡೆಯುತ್ತಿದೆ. ಆದರೆ ನಾವ್ಯಾರೂ ತಲೆಬಾಗುವುದಿಲ್ಲ ಎಂದು ಕಾಂಗ್ರೆಸ್ ವಕ್ತಾರ ಸೈಯದ್ ನಸೀರ್ ಹುಸ್ಸೇನ್ ತಿಳಿಸಿದ್ದಾರೆ.
ಟ್ವೀಟ್ ಮಾಡಿದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ‘ಪ್ರಮುಖ ಸೈದ್ಧಾಂತಿಕ ಪ್ರತಿಪಕ್ಷವಾದ ಕಾಂಗ್ರೆಸ್ ಮೇಲಿನ ದಾಳಿಯನ್ನು ಕೇಂದ್ರ ಸರ್ಕಾರ ಮುಂದುವರಿಸಿದೆ. ಈಗ ಬಹದ್ದೂರ್ ಶಾ ಜಾಫರ್ ಮಾರ್ಗ್ನಲ್ಲಿರುವ ಹೆರಾಲ್ಡ್ ಹೌಸ್ ಮೇಲೆ ಕೂಡ ಇಡಿ ದಾಳಿಯಾಗಿದೆ. ಇಷ್ಟರ ಮಟ್ಟಿಗಿನ ದ್ವೇಷದ ರಾಜಕಾರಣವನ್ನು ನಾವು ಖಂಡಿಸುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಮಾತನಾಡಿದರೆ ಇದು ಸಾಮಾನ್ಯ ಎಂಬಂತಾಗಿದೆ. ಆದರೆ ನಮ್ಮ ಬಾಯಿಮುಚ್ಚಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: National Herald Case | ನ್ಯಾಷನಲ್ ಹೆರಾಲ್ಡ್ ಕಚೇರಿ ಸೇರಿ 10 ಪ್ರದೇಶಗಳಲ್ಲಿ ಇಡಿ ದಾಳಿ