Site icon Vistara News

ಕಾಂಗ್ರೆಸ್‌ ನಲ್ಲಿ ಯುವಕರು V/s ಹಿರಿಯರು, 50% ಯುವ ಮೀಸಲಿಗೆ ಸೀನಿಯರ್ಸ್‌ ಗರಂ

ಕಾಂಗ್ರೆಸ್‌

ಹೊಸದಿಲ್ಲಿ: ಚುನಾವಣೆಗೆ ಸ್ಪರ್ಧಿಸಲು ವಯೋಮಿತಿಯ ಮಾನದಂಡವನ್ನು ಜಾರಿಗೊಳಿಸುವ ಕಾಂಗ್ರೆಸ್‌ ಹೈಕಮಾಂಡ್‌ ಪ್ರಸ್ತಾವಕ್ಕೆ ಪಕ್ಷದ ಹಿರಿಯ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ. ಪಕ್ಷದಲ್ಲಿ ಹೆಚ್ಚಿನ ಸ್ಥಾನಗಳಿಗೆ ಯುವಪಡೆಯನ್ನೇ ನಿಯೋಜಿಸುವ ಮೂಲಕ ಸಾಂಸ್ಥಿಕ ಶ್ರೇಣಿಯಲ್ಲಿ ಯುವಶಕ್ತಿಯನ್ನು ತುಂಬುವ ಪ್ರಯತ್ನ ಜಾರಿಯಾದರೆ, ಮೊದಲೇ ಕುಗ್ಗಿ ಹೋಗುವ ತಮ್ಮ ರಾಜಕೀಯ ಸ್ಥಾನಮಾನಗಳು ಮತ್ತಷ್ಟು ಕುಂದುವ ಭೀತಿ ಈ ಹಿರಿಯ ಮುಖಂಡರಿಗೆ ಎದುರಾಗಿದೆ. ಹೀಗಾಗಿ ನಿರ್ದಿಷ್ಟ ವಯಸ್ಸು ದಾಟಿದವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ಪ್ರಸ್ತಾವವನ್ನು ಅವರು ವಿರೋಧಿಸಿದ್ದಾರೆ.

ಯುವಕರಿಗೆ ನಿರ್ದಿಷ್ಟ ಕೋಟಾ ನಿಗದಿ ಮತ್ತು ಹೊಸ ಸಮಿತಿಗಳ ರಚನೆ ಸೇರಿದಂತೆ ಪಕ್ಷದಲ್ಲಿ ಹಲವು ಆಂತರಿಕ ಸುಧಾರಣೆಗಳು ಆಗಸ್ಟ್-ಸೆಪ್ಟೆಂಬರ್‌ನಲ್ಲಿ ನಡೆಯುವ ಸಾಂಸ್ಥಿಕ ಚುನಾವಣೆಗಳ ನಂತರವೇ ಜಾರಿಗೆ ಬರುವ ಸಾಧ್ಯತೆಯಿದೆ ಎಂದು ಈ ಬೆಳವಣಿಗೆಗಳ ಅರಿವಿರುವ ಪಕ್ಷದ ನಾಯಕರು ಮಂಗಳವಾರ ತಿಳಿಸಿದ್ದಾರೆ. ಹೊಸ ಸಲಹಾ ಸಮಿತಿ ಮತ್ತು ಕಾರ್ಯಕಾರಿ ಸಮಿತಿಯಲ್ಲಿ ಯುವ ಕೋಟಾ ಸೇರಿದಂತೆ ಕೆಲವು ಹೊಸ ಪ್ರಸ್ತಾಪಗಳು ಸಾಂಸ್ಥಿಕ ಚುನಾವಣೆಗಳು ಮುಗಿದ ನಂತರವೇ ಜಾರಿಗೆ ಬರುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.‌

ಕಾಂಗ್ರೆಸ್‌ಗೆ ಹಾರ್ದಿಕ್‌ ಪಟೇಲ್‌ ಗುಡ್‌ಬೈ, ಮುಂದಿನ ನಿಲ್ದಾಣ ಬಿಜೆಪಿ?

ಪದಾಧಿಕಾರಿಯ ಅಧಿಕಾರಾವಧಿಯನ್ನು ಐದು ವರ್ಷಕ್ಕೆ ನಿಗದಿಪಡಿಸುವುದು ಸೇರಿದಂತೆ ಎಲ್ಲಾ ಹೊಸ ಕ್ರಮಗಳಿಂದ ಕಾಂಗ್ರೆಸ್ ಅಧ್ಯಕ್ಷರ ಹುದ್ದೆಗೆ ವಿನಾಯಿತಿ ನೀಡಲಾಗುತ್ತದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಜಯ್ ಮಾಕೆನ್ ಅವರು ಘೋಷಿಸಿದರು. ಆದರೆ ಸುಧಾರಣೆ ಕ್ರಮಗಳನ್ನು ಜಾರಿಗೊಳಿಸುವ ವಿಶ್ವಾಸವನ್ನು ಪಕ್ಷ ವ್ಯಕ್ತಪಡಿಸಿದೆ. “ಇದು ನವ ಸಂಕಲ್ಪ, ಹಾಗೆಯೇ ನಮಗೆ ಇದು ದೃಢ ಸಂಕಲ್ಪ” ಎಂದು ಮಾಕೆನ್ ಹೇಳಿದರು.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ ನೇತೃತ್ವದ ಸಂಘಟನಾ ಸಮಿತಿಯು ಚುನಾವಣೆಯಲ್ಲಿ ಸ್ಪರ್ಧಿಸುವ ಮತ್ತು ಸಾಂಸ್ಥಿಕ ಹುದ್ದೆಗಳಲ್ಲಿ ಉಳಿಯುವ ನಾಯಕರಿಗೆ ಗರಿಷ್ಠ 70 ವರ್ಷ ವಯಸ್ಸಿನ ಮಿತಿಯನ್ನು ಸೂಚಿಸಿದೆ. ಭಾರತೀಯ ಯುವ ಕಾಂಗ್ರೆಸ್ ಕೂಡ ಈ ಸುಧಾರಣೆಯನ್ನು ಜಾರಿಗೆ ತರಲು ಒತ್ತಡ ಹೇರುತ್ತಿದೆ. ಪಕ್ಷದ ಎಲ್ಲಾ ಹುದ್ದೆಗಳಲ್ಲಿ ಅರ್ಧದಷ್ಟನ್ನು 50 ವರ್ಷ ಅಥವಾ ಅದರ ಒಳಗಿನ ವಯೋಮಾನದ ನಾಯಕರಿಗೆ ಮೀಸಲಿಡುವುದು ಮತ್ತು 2024ರ ಲೋಕಸಭೆ ಚುನಾವಣೆಯಿಂದ ಪ್ರಾರಂಭಿಸಿ, ಈ ವಯೋಮಾನದ ಒಳಗಿನವರಿಗೆ ಲೋಕಸಭೆ ಮತ್ತು ವಿಧಾನಸಭೆಯ ಸೀಟುಗಳಲ್ಲಿ ಶೇ. 50ರಷ್ಟನ್ನು ಮೀಸಲಿಡುವುದು ಸೇರಿದಂತೆ ಇತರ ಸುಧಾರಣೆಗಳ ಸಲಹೆಗಳೊಂದಿಗೆ ಈ ಪ್ರಸ್ತಾಪವು ಕಾಂಗ್ರೆಸ್ ಸಭೆಯ ಮುಂದೆ ಬಂದಿತು.

ಸಂಘಟನೆ ಮತ್ತು ಮತದಾನದಲ್ಲಿ ಯುವ ಕೋಟಾವನ್ನು ಅನುಮೋದಿಸಿದರೂ ಸಹ, ಹಿರಿಯ ನಾಯಕರು ವಯಸ್ಸಿನ ಮಿತಿಯನ್ನು ವಿರೋಧಿಸಿದರು ಮತ್ತು ಕೋಟಾ ಮತ್ತು ವಯೋಮಿತಿ ಎರಡನ್ನೂ ಒಟ್ಟಿಗೆ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ವಾದಿಸಿದರು.

ಬಿಜೆಪಿಯಿಂದ ಭಯದ ವಾತಾವರಣ ಸೃಷ್ಟಿ, ಕಾಂಗ್ರೆಸ್‌ ಚಿಂತನಾ ಶಿಬಿರದಲ್ಲಿ ಸೋನಿಯಾ

‘ನೀವು ಈಗಾಗಲೇ ಕೋಟಾವನ್ನು ಹೊಂದಿರುವಾಗ, ವಯಸ್ಸಿನ ಮಿತಿಯನ್ನು ಹೇರುವುದರ ಅರ್ಥವೇನು? ಯುವ ನಾಯಕರಿಗೆ ಮಾರ್ಗದರ್ಶನ ನೀಡಲು ಹಿರಿಯರೂ ಬೇಕು’ ಎಂದು ಹೆಸರು ಹೇಳಲು ಬಯಸದ ಹಿರಿಯ ಮುಖಂಡರೊಬ್ಬರು ಪ್ರಶ್ನಿಸುತ್ತಾರೆ. ವಯಸ್ಸಿನ ಮಿತಿ ಜಾರಿಯಾದರೆ ಪಕ್ಷದಲ್ಲಿ ಯುವಕರು ಮತ್ತು ಅನುಭವಿಗಳ ನಡುವಿನ ಸಮತೋಲನವನ್ನು ಕಾಯ್ದುಕೊಳ್ಳಲು ಸಾಧ್ಯವಾಗದು ಎಂದು ಸಭೆಯಲ್ಲಿ ಅನೇಕ ನಾಯಕರು ವಾದಿಸಿದರು ಎಂದು ಅವರು ತಿಳಿಸಿದರು.

ಮತ್ತೊಂದು ಪ್ರಮುಖ ಸಲಹೆ ಏನೆಂದರೆ – ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ), ಒಬಿಸಿ ಮತ್ತು ಅಲ್ಪಸಂಖ್ಯಾತರಿಗೆ ಶೇ. 50ರ ಜಾತಿ ಕೋಟಾವನ್ನು ನಿಗದಿಪಡಿಸಬೇಕೆಂಬ ಸಲಹೆಯನ್ನು ಸಾರಾಸಗಟು ತಿರಸ್ಕರಿಸಲಾಗಿದೆ. “ಪ್ರಸ್ತುತ 20% ಮೀಸಲಾತಿಯ ಕೋಟಾ ಕೂಡ ಭರ್ತಿಯಾಗುವುದಿಲ್ಲ ಎಂದು ಅನೇಕ ನಾಯಕರು ವಾದಿಸಿದರು, ಹಾಗಿರುವಾಗ ಅದನ್ನು ವಿಸ್ತರಿಸುವುದರ ಅರ್ಥವೇನು? ಅಲ್ಲದೆ, ಮಹಿಳಾ ಮೀಸಲಾತಿಯೂ ಇರುವಾಗ ಅಂತಹ ಕೋಟಾವು ಸಂಘಟನೆಯಲ್ಲಿ ಸಾಮಾನ್ಯ ವಿಭಾಗದ ನಾಯಕರಿಗೆ ಇರುವ ಅವಕಾಶವನ್ನು ಬಹಳ ಕಡಿಮೆ ಮಾಡುತ್ತದೆ” ಎಂದು ಹೆಸರು ಹೇಳಲು ಬಯಸದ ಇನ್ನೊಬ್ಬ ನಾಯಕ ಹೇಳಿದರು.

ಆದರೆ ಮೇ 13 ಮತ್ತು 16 ರ ನಡುವೆ ಉದಯಪುರದಲ್ಲಿ ನಡೆದ ಚಿಂತನ ಶಿಬಿರದ ಕೆಲವು ನಿರ್ಧಾರಗಳನ್ನು ಜಾರಿಗೊಳಿಸಲು ಕಾಂಗ್ರೆಸ್‌ ತ್ವರಿತ ಹೆಜ್ಜೆ ಹಾಕುತ್ತಿದೆ. ಉದಯಪುರ ಘೋಷಣೆಯಾದ 48 ಗಂಟೆಗಳ ಒಳಗೆ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳು ಮಂಗಳವಾರ ಪಕ್ಷದ ಪ್ರಧಾನ ಕಛೇರಿಯಲ್ಲಿ ಸಭೆ ನಡೆಸಿ, ಶೃಂಗಸಭೆಯಲ್ಲಿ ಕೈಗೊಂಡ ನಿರ್ಣಯಗಳು ಜಾರಿಗೊಳಿಸಲು ಯೋಗ್ಯವೇ ಎಂಬುದನ್ನು ಚರ್ಚಿಸಿದರು.

‘ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಕರೆದಿದ್ದ ಸಭೆಯಲ್ಲಿ ಜಾರಿ ಮಾಡಬಹುದಾದ ಅಂಶಗಳನ್ನು ಗುರುತಿಸಿದ್ದೇವೆ. ಅದಕ್ಕಾಗಿ ನಾವು ಒಂದು ಗಂಟೆ ವ್ಯಯಿಸಿದ್ದೇವೆ. ನಾಳೆ ಮತ್ತೆ ಭೇಟಿಯಾಗುತ್ತೇವೆ. ಮತ್ತು ಅದರ ನಂತರ ಶೀಘ್ರದಲ್ಲೇ ರಾಜ್ಯವಾರು ಕಾರ್ಯಾಗಾರಗಳು ನಡೆಯಲಿದ್ದು, ಉದಯಪುರ ಘೋಷಣೆಯನ್ನು ಹೇಗೆ ಕಾರ್ಯಗತಗೊಳಿಸಲಾಗುತ್ತದೆ ಎಂದು ಚರ್ಚಿಸಲಾಗುವುದು ‘ ಎಂದು ಮಾಕೆನ್ ಹೇಳಿದರು.

ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡುವುದು ಮೊದಲ ಕಾರ್ಯವಾಗಿದ್ದು, ಪ್ರಸ್ತುತ ನಡೆಯುತ್ತಿರುವ ಸಂಘಟನಾ ಚುನಾವಣೆಗಳ ಜೊತೆಗೆ ಇದನ್ನು ಮಾಡಲಾಗುವುದು. ಪಕ್ಷದ ಸ್ಥಾನಗಳಿಗೆ ಯುವ ನಾಯಕರನ್ನು ಗುರುತಿಸುವ ಪ್ರಕ್ರಿಯೆಯು ತ್ವರಿತವಾಗಿ ಪ್ರಾರಂಭವಾಗಲಿದ್ದು, ಇದರಿಂದ ಅವರಿಗೆ ಸೂಕ್ತ ಪ್ರಾತಿನಿಧ್ಯ ಸಿಗುತ್ತದೆ.

ಪಿಆರ್‌ಓಗಳು, ಡಿಆರ್‌ಓಗಳು ಮತ್ತು ಬಿಆರ್‌ಓಗಳು (ಕ್ರಮವಾಗಿ ಪ್ರದೇಶ, ಜಿಲ್ಲೆ ಮತ್ತು ಬ್ಲಾಕ್ ಚುನಾವಣಾಧಿಕಾರಿಗಳು) ಶೇ. 50ರಷ್ಟು ಯುವ ಪ್ರತಿನಿಧಿಗಳನ್ನು ಹೊಂದಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಪಕ್ಷದ ಚುನಾವಣಾ ಪ್ರಾಧಿಕಾರವು ಮಾಡಬೇಕಾದ ಬದಲಾವಣೆಗಳ ಬಗ್ಗೆ ಕ್ರಿಯಾಶೀಲವಾಗಿದೆ,” ಎಂದು ಮಾಕೆನ್ ಹೇಳಿದರು. “ಆದ್ದರಿಂದ, ಕೋಟಾ ಜಾರಿಗೊಳಿಸುವುದು ಚುನಾವಣೆ ನಡೆದರೆ ಮಾತ್ರ ಸಾಧ್ಯ ಏಕೆಂದರೆ 50% ಪಿಸಿಸಿ (ಪ್ರದೇಶ ಕಾಂಗ್ರೆಸ್ ಸಮಿತಿ) ಪದಾಧಿಕಾರಿಗಳು 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು ಎಂದು ನಾವು ಬಯಸಿದರೆ, ನಮಗೆ ಪಿಸಿಸಿಯ ಅರ್ಧದಷ್ಟು ಸದಸ್ಯರು 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರುವ ಅಗತ್ಯವಿದೆ. ಎಂದು ಮಾಕನ್ ತಿಳಿಸಿದರು.

ಭಾರತ್ ಜೋಡೋ ಯಾತ್ರೆ (ಯುನೈಟ್ ಇಂಡಿಯಾ ಮಾರ್ಚ್) ಯೋಜನೆಯನ್ನು ವಿವರಿಸಿದ ಮಾಕೆನ್, ”ಭಾರತೀಯ ಜನತಾ ಪಕ್ಷದ ನಾಯಕರು, ತಮಗೆ ಅರಿವಿಲ್ಲದೆಯೇ ಅಥವಾ ಬಹುಶಃ ಪಿತೂರಿಯ ಭಾಗವಾಗಿಯೂ ಇರಬಹುದು, ದೇಶವನ್ನು ವಿಭಜಿಸುತ್ತಿದ್ದಾರೆ. ಅವರು ಧರ್ಮದ ಆಧಾರದ ಮೇಲೆ, ಜಾತಿಯ ಆಧಾರದ ಮೇಲೆ ಜನರನ್ನು ವಿಭಜಿಸಿದಾಗ, ಅವರು ದೇಶವನ್ನು ಒಡೆಯುವುದು ಖಚಿತ. ಆದರೆ, ಭಾರತವು ಕೇವಲ ಭೂಭಾಗವಲ್ಲ. ಅದಕ್ಕಾಗಿಯೇ ನಾವು- ಗಾಂಧೀವಾದಿ ಎಸ್.ಎನ್. ಸುಬ್ಬರಾವ್ ಅವರ “ಜೋಡೋ ಜೋಡೋ, ಭಾರತ್ ಜೋಡೋ” ಎಂಬ ಘೋಷಣೆಯಿಂದ ಪ್ರೇರಿತರಾಗಿ ಅದೇ ಹೆಸರಿನ ಅಭಿಯಾನ ನಡೆಸಲು ಸಜ್ಜಾಗಿದ್ದೇವೆ’ ಎಂದು ತಿಳಿಸಿದರು.

Exit mobile version