ಹೊಸದಿಲ್ಲಿ: ದಿಲ್ಲಿಯಲ್ಲಿ ಎಲ್ಲರಿಗೂ ಉಚಿತ ವಿದ್ಯುತ್ ವಿತರಣೆಯನ್ನು ನೀಡುವ ಆಶ್ವಾಸನೆ ನೀಡಿದ್ದ ಕೇಜ್ರಿವಾಲ್ ನೇತೃತ್ವದ ರಾಜ್ಯ ಸರಕಾರ ಇದೀಗ ರಾಗ ಬದಲಿಸಿದ್ದು, ಅನುಕೂಲವಂತ ಗ್ರಾಹಕರು ಸಬ್ಸಿಡಿಯನ್ನು ಅಕ್ಟೋಬರ್ 1ರಿಂದ ತ್ಯಜಿಸಬಹುದು ಎಂದು ಸಿಎಂ ಕೇಜ್ರಿವಾಲ್ ಹೇಳಿದ್ದಾರೆ.
” ದಿಲ್ಲಿಯಲ್ಲಿ ಗ್ರಾಹಕರು ಪ್ರಸ್ತುತ 200 ಯುನಿಟ್ ತನಕ ವಿದ್ಯುತ್ ಅನ್ನು ಉಚಿತವಾಗಿ ಪಡೆಯುತ್ತಿದ್ದಾರೆ.
ಶ್ರೀಮಂತರಿಗೆ ವಿದ್ಯುತ್ ಸಬ್ಸಿಡಿ ನೀಡುವ ಬದಲಿಗೆ ಆಸ್ಪತ್ರೆ ಮತ್ತು ಶಿಕ್ಷಣಕ್ಕೆ ಆ ದುಡ್ಡನ್ನು ಬಳಸಬಹುದು ಎಂದು ಸಾವಜನಿಕರು ಸಲಹೆ ನೀಡುತ್ತಿದ್ದಾರೆ. ಈ ಬೇಡಿಕೆಯನ್ನು ಪರಿಶೀಲಿಸಿ ಗ್ರಾಹಕರಿಗೆ ಅಕ್ಟೋಬರ್ 1ರಿಂದ ಸಬ್ಸಿಡಿಯನ್ನು ತ್ಯಜಿಸಲೂ ಅವಕಾಶ ನೀಡಲಾಗುವುದು. ಅಗತ್ಯ ಇರುವವರು ಮಾತ್ರ ಸಬ್ಸಿಡಿ ಪಡೆಯಬಹುದುʼʼ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
ಈ ರೀತಿಯಾಗಿ ನಿರ್ದಿಷ್ಟ ಜನತೆಗೆ ಮಾತ್ರ ಉಚಿತ ವಿದ್ಯುತ್ ವಿತರಿಸಲಾಗುವುದು ಎಂದು ಕೇಜ್ರಿವಾಲ್ ಹೇಳಿದ್ದರೂ, ದಿಲ್ಲಿ ಸರಕಾರದ ಸಚಿವ ಸಂಪುಟವು ಗುರುವಾರ ಸಬ್ಸಿಡಿ ಯೋಜನೆಯನ್ನು ಮುಂದುವರಿಸಲು ಅನುಮೋದಿಸಿದೆ. ಇದರಿಂದ 47,11,176 ಗ್ರಾಹಕರಿಗೆ ಪ್ರಯೋಜನವಾಗಲಿದೆ. ದಿಲ್ಲಿಯಲ್ಲಿ 58,18,231 ಗ್ರಾಹಕರು ವಿದ್ಯುತ್ ಸಂಪರ್ಕ ಪಡೆದಿದ್ದಾರೆ. ದಿಲ್ಲಿ ಸರಕಾರವು 5 ವರ್ಗಗಳ ಗ್ರಾಹಕರಿಗೆ ವಿದ್ಯುತ್ ಸಬ್ಸಿಡಿ ವಿತರಿಸುತ್ತಿದೆ. ಗೃಹ ವಲಯ, ಸಿಖ್ ವಿರೋಧಿ ಗಲಭೆಯ ಸಂತ್ರಸ್ತರು, ಕೃಷಿ ಬಳಕೆದಾರರು, ವಕೀಲರು ಪ್ರಯೋಜನ ಪಡೆಯಬಹುದು. ಕಲ್ಲಿದ್ದಲು ಕೊರತೆಯಿಂದ ಉಷ್ಣ ವಿದ್ಯುತ್ ಸ್ಥಾವರಗಳು ಬಿಕ್ಕಟ್ಟಿನಲ್ಲಿರುವ ಸಂದರ್ಭದಲ್ಲಿ ಕೇಜ್ರಿವಾಲ್ ಈ ಹೇಳಿಕೆ ನೀಡಿದ್ದಾರೆ. ಉಚಿತ ವಿದ್ಯುತ್ ವಿತರಣೆ ಸರಕಾರದ ಬೊಕ್ಕಸಕ್ಕೆ ಹೊರೆಯಾಗುತ್ತಿರುವುದೂ ಹೌದು.
ಬಿಜೆಪಿ ಇದನ್ನು ಜನತೆಗೆ ಎಸೆದ ದ್ರೋಹ ಎಂದು ಆರೋಪಿಸಿದೆ. ಆಯ್ಕೆಯಾದರೆ ಪ್ರತಿ ರಾಜ್ಯದಲ್ಲೂ ಉಚಿತ ವಿದ್ಯುತ್ ವಿತರಿಸುವೆ ಎನ್ನುವ ಆಪ್ ಪಕ್ಷವು ಇದೀಗ ದಿಲ್ಲಿಯಲ್ಲಿ ಈ ಸೌಲಭ್ಯವನ್ನು ಹಿಂತೆಗೆದುಕೊಳ್ಳುತ್ತಿರುವುದು ಆಘಾತಕಾರಿ ಎಂದು ಬಿಜೆಪಿ ವಕ್ತಾರ ಪ್ರವೀಣ್ ಶಂಕರ್ ಕಪೂರ್ ತಿಳಿಸಿದ್ದಾರೆ. ದಿಲ್ಲಿ ಸರಕಾರದ ಹಣಕಾಸು ಪರಿಸ್ಥಿತಿ ಕುಸಿಯುತ್ತಿರುವುದರಿಂದ ಉಚಿತ ವಿದ್ಯುತ್ ಮತ್ತು ನೀರು ಕೊಡುವ ಕೇಜ್ರಿವಾಲ್ ಮಾದರಿಯ ಬಂಡವಾಳ ಬಯಲಾಗಿದೆ. ದಿಲ್ಲಿಯಲ್ಲಿ ಉಚಿತ ಕೊಡುಗೆಗಳ ಕಾಲ ಅಂತ್ಯವಾಗುತ್ತಿದೆ ಎಂದು ಅವರು ಹೇಳಿದ್ದಾರೆ.
200 ಯುನಿಟ್ ಉಚಿತ
ದಿಲ್ಲಿಯಲ್ಲಿ ಎರಡು ವಿಧದದಲ್ಲಿ ಗ್ರಾಹಕರಿಗೆ ಸಬ್ಸಿಡಿ ನೀಡಲಾಗುತ್ತಿದೆ. ಮಾಸಿಕ 200 ಯುನಿಟ್ ತನಕ ಬಳಸುವವರಿಗೆ ಸಂಪೂರ್ಣ ಉಚಿತ. ಅಂಥ ಮಂದಿ 30 ಲಕ್ಷ ಮಂದಿ ಇದ್ದಾರೆ. 201-400 ಯುನಿಟ್ ಬಳಸುವವರಿಗೆ 800 ರೂ. ಸಬ್ಸಿಡಿ ನೀಡಲಾಗುತ್ತದೆ. ಅಂಥ ಗ್ರಾಹಕರ ಸಂಖ್ಯೆ 16 ಲಕ್ಷ ಇದೆ.
ಸಬ್ಸಿಡಿ ವೆಚ್ಚ ಶೇ.125 ಏರಿಕೆ
ದಿಲ್ಲಿ ಸರಕಾರದ ವಿದ್ಯುತ್ ಇಲಾಖೆಯ ಹಿರಿಯ ಅಧಿಕಾರಿಗಳ ಪ್ರಕಾರ ಸರಕಾರ ಉಚಿತ ವಿದ್ಯುತ್ ಘೋಷಿಸಿದ ಮೊದಲ ವಷ 2015-16ಕ್ಕೆ ಹೋಲಿಸಿದರೆ 2022-23ರಲ್ಲಿ ಇದಕ್ಕೆ ತಗಲುವ ಸಬ್ಸಿಡಿ ವೆಚ್ಚ ಶೇ.125ರಷ್ಟು ಹೆಚ್ಚಳವಾಗಿದೆ. 2015-16ರಲ್ಲಿ 1,443 ಕೋಟಿ ರೂ. ವೆಚ್ಚವಾಗಿದ್ದರೆ, 2022-23ರಲ್ಲಿ 2,940 ಕೋಟಿ ರೂ.ಗೆ ಜಿಗಿದಿದೆ. ದಿಲ್ಲಿಯಲ್ಲಿ 2011-21ರ ಅವಧಿಯಲ್ಲಿ ವಿದ್ಯುತ್ ಬಳಕೆದಾರರ ಸಂಖ್ಯೆ ಶೇ.82.97ರಷ್ಟು ಹೆಚ್ಚಳವಾಗಿದೆ. ಉಚಿತ ವಿದ್ಯುತ್ ಬಳಸುವವರ ಸಂಖ್ಯೆ ಹೆಚ್ಚಳವಾದ್ದರಿಂದ ಸಬ್ಸಿಡಿ ಖರ್ಚೂ ಹೆಚ್ಚುತ್ತಿದೆ.
“ಸರಕಾರದ ಹಣ ತೆರಿಗೆದಾರರ ಹಣವಾಗಿದೆ. ಭ್ರಷ್ಟಾಚಾರ ಇರುವ ಸನ್ನಿವೇಶದಲ್ಲಿ ಜನರ ಹಣವನ್ನು ಉಚಿತ ಕೊಡುಗೆಗಳ ಮೂಲಕ ಜನರಿಗೇ ಹಿಂತಿರುಗಿಸುವುದರಲ್ಲಿ ತಪ್ಪೇನಿದೆ ʼ ಎಂದು ಕೇಜ್ರಿವಾಲ್ ಅವರು ತಮ್ಮ ಚುನಾವಣಾ ಪ್ರಚಾರಗಳಲ್ಲಿ ಹೇಳಿದ್ದರು. ಪಂಜಾಬ್‌ನಲ್ಲಿ ಆಪ್ ಮುಖ್ಯಮಂತ್ರಿ ಭಗವಂತ್ ಮಾನ್ ಕೂಡ ಇಂಥಹುದೇ ವಿದ್ಯುತ್ ಸಬ್ಸಿಡಿ ಯೋಜನೆಯನ್ನು ಜುಲೈನಿಂದ ಆರಂಭಿಸುವುದಾಗಿ ತಿಳಿಸಿದ್ದಾರೆ. ಯೋಜನೆಯ ದಕ್ಷತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಪರಿಷ್ಕರಣೆ ಸೂಕ್ತ. ಅಗತ್ಯ ಇಲ್ಲದವರು ಸಬ್ಸಿಡಿ ತ್ಯಜಿಸಲು ಆಯ್ಕೆ ಇರಬೇಕು ಎಂದು ತಜ್ಞರು ಹೇಳಿದ್ದಾರೆ.
2015ರಲ್ಲಿ ಕೇಜ್ರಿವಾಲ್ ಅವರು ದಿಲ್ಲಿ ಚುನಾವಣೆ ವೇಳೆ ಉಚಿತ ವಿದ್ಯುತ್ ವಿತರಿಸುವ ಆಶ್ವಾಸನೆ ನೀಡಿ ಮತದಾರರನ್ನು ಆಕರ್ಷಿಸಿದ್ದರು. ಇದರಿಂದ ಪ್ರೇರಣೆಗೊಂಡು ಕೆಲ ಪಕ್ಷಗಳು ಅನುಸರಿಸಿದ್ದವು. ಉದಾಹರಣೆಗೆ ಪಶ್ಚಿಮ ಬಂಗಾಲ ಸರಕಾರ ಕೆಲ ಷರತ್ತುಗಳೊಂದಿಗೆ ಉಚಿತ ವಿದ್ಯುತ್ ವಿತರಣೆಯನ್ನು ಘೋಷಿಸಿತ್ತು. ಮಾಸಿಕ 75 ಯುನಿಟ್ ತನಕ ಬಳಸುವವರಿಗೆ ಮಾತ್ರ ಉಚಿತ ವಿದ್ಯುತ್ ಅನ್ನು ಘೋಷಿಸಲಾಗಿತ್ತು.