Site icon Vistara News

ಜಮ್ಮು-ಕಾಶ್ಮೀರದಲ್ಲಿ ಮತ್ತೆ ಉಗ್ರರ ದಾಳಿ; ಪೊಲೀಸ್‌ ಅಧಿಕಾರಿ ಸಾವು, ಪುತ್ರಿಗೆ ಗಾಯ

Police Killed In Kashmir

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಮತ್ತೆ ಉಗ್ರರ ದಾಳಿಯಾಗಿದೆ. ಶ್ರೀನಗರದ ಸೌರಾ ಎಂಬಲ್ಲಿ ಭಯೋತ್ಪಾದಕರು ನಡೆಸಿದ ದಾಳಿಗೆ ಜಮ್ಮು -ಕಾಶ್ಮೀರದ ಪೊಲೀಸ್‌ ಅಧಿಕಾರಿ ಸೈಫುಲ್ಲಾ ಖಾದ್ರಿ ಎಂಬುವರು ಮೃತಪಟ್ಟಿದ್ದು (Policeman Killed in Kashmir), ಅವರ 7ವರ್ಷದ ಮಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಉಗ್ರರು ಪೊಲೀಸ್‌ ಅಧಿಕಾರಿಯೆಡೆಗೆ ಗುಂಡು ಹಾರಿಸಿದಾಗ, ಅವರೊಂದಿಗೇ ಇದ್ದ ಮಗಳು ಹೆದರಿ ಅಪ್ಪನ ತೋಳಿಗೆ ಆತುಕೊಂಡಿದ್ದಾಳೆ. ಈ ವೇಳೆ ಉಗ್ರನೊಬ್ಬ ಹಾರಿಸಿದ ಗುಂಡು ಆಕೆಯ ತೋಳಿಗೆ ತಗುಲಿದೆ. ಸದ್ಯ ಅವಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆಕೆಯ ಜೀವಕ್ಕೆ ಅಪಾಯ ಇಲ್ಲ ಎಂದು ಕಾಶ್ಮೀರ ಪೊಲೀಸರು ಟ್ವೀಟ್‌ ಮಾಡಿದ್ದಾರೆ. ಘಟನೆ ನಡೆದ ಸ್ಥಳವನ್ನು ಪೊಲೀಸರು ಸುತ್ತುವರಿದಿದ್ದು, ಬಿಗಿ ಭದ್ರತೆ ಕಲ್ಪಿಸಲಾಗಿದೆ.

ಕೆಲವೇ ದಿನಗಳ ಹಿಂದೆ ಜಮ್ಮು-ಕಾಶ್ಮೀರದ ಬದ್ಗಾಮ್‌ ಜಿಲ್ಲೆಯ ಚದೂರಾ ಪಟ್ಟಣದ ತಹಸೀಲ್‌ ಕಚೇರಿಯ ಮೇಲೆ ಉಗ್ರರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಕಾಶ್ಮೀರಿ ಪಂಡಿತ್‌ ಸಮುದಾಯಕ್ಕೆ ಸೇರಿದ್ದ ರಾಹುಲ್‌ ಭಟ್‌ (36) ಹತ್ಯೆಯಾಗಿತ್ತು. ಇವರು ತಹಸೀಲ್‌ ಕಚೇರಿಯಲ್ಲಿ ಕಂದಾಯ ವಿಭಾಗದ ಕ್ಲರ್ಕ್‌ ಆಗಿದ್ದರು. ರಾಹುಲ್‌ ಭಟ್‌ ಹತ್ಯೆಯ ಬೆನ್ನಲ್ಲೇ ಜಮ್ಮು-ಕಾಶ್ಮೀರದ ಅನೇಕ ಕಡೆ ಸರ್ಕಾರಿ ಉದ್ಯೋಗಿಗಳು ಪ್ರತಿಭಟನೆ ನಡೆಸಿದ್ದರು. ಉಗ್ರ ದಾಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದರು. ರಾಹುಲ್‌ ಭಟ್‌ ಹತ್ಯೆಯ ಬೆನ್ನಲ್ಲೇ ಈಗ ಪೊಲೀಸ್‌ ಅಧಿಕಾರಿಯೊಬ್ಬರು ಉಗ್ರರ ಗುಂಡೇಟಿಗೆ ಬಲಿಯಾಗಿದ್ದು ಆತಂಕ ಸೃಷ್ಟಿಸಿದೆ.

ಇದನ್ನೂ ಓದಿ: Kashmir pandits ಹೇಳ್ತಾರೆ, ಅಂದಿಗಿಂತಲೂ ಇಂದೇ ಕಾಶ್ಮೀರ ನಮಗೆ ಹೆಚ್ಚು ಅಪಾಯಕರ!

ಇದಕ್ಕೂ ಮೊದಲು ಫೆಬ್ರವರಿಯಲ್ಲಿ ಬಂಡಿಪೋರಾದಲ್ಲಿ ಉಗ್ರರು ನಡೆಸಿದ್ದ ಗ್ರೆನೇಡ್‌ ದಾಳಿಗೆ ಪೊಲೀಸ್‌ ಅಧಿಕಾರಿಯೊಬ್ಬರು ಮೃತಪಟ್ಟಿದ್ದರು. ಅಂದು ಪೊಲೀಸರು ಮತ್ತು ಸಿಆರ್‌ಪಿಎಫ್‌ ಸಿಬ್ಬಂದಿ ಜಂಟಿಯಾಗಿ ಗಸ್ತು ತಿರುಗುತ್ತಿದ್ದಾಗ ಉಗ್ರರು ಗ್ರೆನೇಡ್‌ ದಾಳಿ ನಡೆಸಿದ ಪರಿಣಾಮ ಅಧಿಕಾರಿಯೊಬ್ಬರು ಸಾವನ್ನಪ್ಪಿ, ಮೂವರು ಕಾನ್‌ಸ್ಟೆಬಲ್‌ಗಳು ಗಾಯಗೊಂಡಿದ್ದರು.

ಇದನ್ನೂ ಓದಿ: ಕಾಶ್ಮೀರಿ ಪಂಡಿತ್‌ ರಾಹುಲ್‌ ಭಟ್‌ ಹತ್ಯೆ; ಎಲ್ಲೆಡೆ ಪ್ರತಿಭಟನೆ, ಬಿಜೆಪಿ ವಿರುದ್ಧ ಆಕ್ರೋಶ

Exit mobile version