ನವದೆಹಲಿ: ವಾರಾಣಸಿಯ ಜ್ಞಾನವಾಪಿ ಮಸೀದಿ ಆವರಣದಲ್ಲಿ ಸರ್ವೆ ನಡೆಸಲು ಸ್ಥಳೀಯ ನ್ಯಾಯಾಲಯ ನೀಡಿರುವ ಆದೇಶಕ್ಕೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಆದರೆ, ಈ ಕುರಿತ ಅರ್ಜಿಯ ವಿಚಾರಣೆಗೆ ಅವಕಾಶ ನೀಡಿದೆ.
ಕಾಶಿ ವಿಶ್ವನಾಥ ಮಂದಿರದ ಪಕ್ಕದಲ್ಲೇ ಇರುವ ಜ್ಞಾನವಾಪಿ ಮಸೀದಿಯ ಆವರಣದಲ್ಲಿ ಸರ್ವೆ ನಡೆಸಲು ವಾರಾಣಸಿ ಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಮತ್ತು ಕೋರ್ಟ್ ಕಮಿಷನರ್ ಬದಲಾವಣೆ ಕೋರಿ ಮಸೀದಿ ಆಡಳಿತ ಸಮಿತಿ ಮೇಲ್ಮನವಿ ಸಲ್ಲಿಸಿತ್ತು. ಅದನ್ನು ಸ್ಥಳೀಯ ಕೋರ್ಟ್ ವಜಾ ಮಾಡಿತ್ತು. ಜತೆಗೆ ಮೇ 13ರಿಂದಲೇ ಸರ್ವೆ ಆರಂಭಿಸಿ ಮೇ 17ರಂದು ವರದಿ ಸಲ್ಲಿಸಬೇಕು ಎಂದು ತಿಳಿಸಿತ್ತು. ಜತೆಗೆ ಕೋರ್ಟ್ ಕಮೀಷನರ್ ಬದಲಾವಣೆಗೂ ಅವಕಾಶ ನೀಡಿರಲಿಲ್ಲ.
ಸ್ಥಳೀಯ ಕೋರ್ಟ್‌ನ ಈ ನಿಲುವು ಪ್ರಶ್ನಿಸಿ ಮುಸ್ಲಿಮರ ಒಂದು ವರ್ಗ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿತ್ತು. ಆದರೆ, ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಮತ್ತು ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಹಿಮಾ ಕೊಹ್ಲಿ ಅವರನ್ನು ಒಳಗೊಂಡ ಪೀಠ ತುರ್ತು ವಿಚಾರಣೆಗೆ ನಿರಾಕರಿಸಿದ್ದು, ತಡೆ ನೀಡಲೂ ಒಪ್ಪಿಲ್ಲ.
`ವಾರಾಣಸಿಯ ಆಸ್ತಿಗೆ ಸಂಬಂಧಿಸಿ ಸರ್ವೆಗೆ ಆದೇಶ ಮಾಡಲಾಗಿದೆ. ಇದು ಪೂಜಾ ಸ್ಥಳಗಳ ಕಾಯಿದೆಯಡಿ ಬರುತ್ತದೆ. ಜ್ಞಾನವಾಪಿ ಪ್ರದೇಶ ಬಹು ಹಿಂದಿನಿಂದಲೇ ಮಸೀದಿ ಎನ್ನುವುದು ಸ್ಪಷ್ಟವಾಗಿದೆ. ಇಲ್ಲಿ ಸರ್ವೆಗೆ ಆದೇಶ ನೀಡುವುದು ಪೂಜಾ ಸ್ಥಳಗಳ ಕಾಯಿದೆಗೆ ವಿರುದ್ಧವಾಗಿದೆ. ಹೀಗಾಗಿ ತಡೆ ನೀಡಬೇಕು,” ಎಂದು ಅರ್ಜಿದಾರರ ಪರವಾಗಿ ಹುಜೇಫಾ ಅಹಮದಿ ಅವರು ನ್ಯಾಯಪೀಠಕ್ಕೆ ಹೇಳಿದರು.
ಆದರೆ, “ನನಗೆ ಈಗ ಈ ವಿಚಾರವಾಗಿ ಏನೂ ತಿಳಿದಿಲ್ಲ. ನಾನು ಹೇಗೆ ತಡೆ ನೀಡಲಿ, ತೀರ್ಪನ್ನು ಓದುತ್ತೇನೆ, ನೋಡೋಣ,’ ಎಂದು ಸಿಜೆಐ ಹೇಳಿದರು.
1991ರಿಂದಲೇ ಕಾನೂನು ಹೋರಾಟ