Site icon Vistara News

ದುಡ್ಡಿನಾಸೆಗೆ ಹೆಂಡತಿಯನ್ನೇ ಮರು ಮದುವೆ ಆಗಲು ಹೋಗಿ ಸಿಕ್ಕಿಬಿದ್ದ ಕಾಂಗ್ರೆಸ್‌ ನಾಯಕ!

ಸಿಕ್ಕಿಬಿದ್ದ ಕಾಂಗ್ರೆಸ್‌ ನಾಯಕ

ಭೋಪಾಲ್‌: ಕಟ್ಟಿಕೊಂಡ ಹೆಂಡತಿಯನ್ನು ಬಿಟ್ಟು ಬೇರೊಬ್ಬಳನ್ನು ಮದುವೆಯಾಗುವ ವಿದ್ಯಮಾನವನ್ನು ನೋಡುತ್ತೇವೆ. ಆದರೆ, ಇಲ್ಲೊಬ್ಬ ಕಾಂಗ್ರೆಸ್‌ ನಾಯಕ ಹೆಂಡತಿಯನ್ನೇ ಮರು ಮದುವೆ ಮಾಡಿಕೊಳ್ಳಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಅವರು ಈ ಪ್ರಯತ್ನಕ್ಕೆ ಇಳಿದಿದ್ದು ದುಡ್ಡಿಗಾಗಿ! ಹಾಗಿದ್ದರೆ ಏನಿದು ಕಿತಾಪತಿ, ಈ ವರದಿ ಓದಿ.

ಈ ಘಟನೆ ನಡೆದಿರುವುದು ಮಧ್ಯಪ್ರದೇಶದ ಸಾಗರ್‌ ಜಿಲ್ಲೆಯಲ್ಲಿ. ಕಾಂಗ್ರೆಸ್‌ ಪಕ್ಷದ ವಿದ್ಯಾರ್ಥಿ ಸಂಘಟನೆಯಾಗಿರುವ ಎನ್‌ಎಸ್‌ಯುಐನ ಸಂಚಾಲಕನಾಗಿರುವ ನೇತಿಕ್‌ ಚೌಧರಿಗೆ 15 ದಿನಗಳ ಹಿಂದೆ ಮದುವೆಯಾಗಿತ್ತು. ಈ ನಡುವೆ, ಅಲ್ಲಿನ ಬಾಲಾಜಿ ದೇವಸ್ಥಾನದಲ್ಲಿ ಸಾಮೂಹಿಕ ವಿವಾಹವೊಂದು ಏರ್ಪಾಡಾಗಿದೆ. ಈ ಸಾಮೂಹಿಕ ವಿವಾಹದಲ್ಲಿ ಮದುವೆಯಾದರೆ ಮುಖ್ಯಮಂತ್ರಿ ಕನ್ಯಾದಾನ್‌ ಯೋಜನೆಯಡಿ ಒಂದಿಷ್ಟು ಹಣ ಮತ್ತು ಇತರ ಸವಲತ್ತುಗಳು ದೊರೆಯುತ್ತವೆ. ಇದನ್ನು ತಿಳಿದ ನೇತಿಕ್‌ ಚೌಧರಿ ತಾನು ಅದೇ ಕಾರ್ಯಕ್ರಮದಲ್ಲಿ ಮತ್ತೊಮ್ಮೆ ಮದುವೆ ಮಾಡಿಕೊಂಡು ಹಣ ಪಡೆಯುವ ಪ್ಲ್ಯಾನ್‌ ರೂಪಿಸಿದ.

ಮೇ 26ರಂದು ಸಾಮೂಹಿಕ ವಿವಾಹಕ್ಕೆ ಸಕಲ ಸಿದ್ಧತೆಗಳು ನಡೆದಿದ್ದವು. ಕಾರ್ಯಕ್ರಮಕ್ಕೆ ನೋಂದಣಿ ಮಾಡಿಕೊಂಡ ಎಲ್ಲರೂ ಆಗಮಿಸಿದ್ದರು. ಅವರ ನಡುವೆ ನೇತಿಕ್‌ ಚೌಧರಿ ಮತ್ತು ಅವನ ಹೆಂಡತಿಯೂ ಇದ್ದರು. ಅವರನ್ನು ಅಲ್ಲಿ ಗಮನಿಸಿದ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಮತ್ತು ಸಂಘಟಕರು ತಕ್ಷಣವೇ ಪೊಲೀಸರಿಗೆ ತಿಳಿಸಿದರು. ಪೊಲೀಸರು ಬಂದು ಆತನನ್ನು ಬಂಧಿಸಿ ಬಿಡುಗಡೆಗೊಳಿಸಿದರು.

ಬಿಜೆಪಿ ನಾಯಕರು ಹಂಚಿಕೊಂಡ ದಾಖಲೆ

ಮಧ್ಯ ಪ್ರದೇಶದಲ್ಲಿ ಮುಖ್ಯಮಂತ್ರಿ ಕನ್ಯಾದಾನ್‌ ಯೋಜನೆ 2006ರಲ್ಲಿ ಜಾರಿಗೆ ಬಂದಿತ್ತು. ಬಡವರ ಮದುವೆಗೆ ನೆರವಾಗುವ ಈ ಯೋಜನೆಯಡಿ ವಿವಾಹವಾದ ದಂಪತಿಗೆ 51000 ರೂ. ಸಹಾಯಧನವನ್ನು ನೀಡಲಾಗುತ್ತದೆ. ನೇತಿಕ್‌ ಚೌಧರಿ ಈ ದುಡ್ಡಿನಾಸೆಗಾಗಿ ಮೊದಲೇ ಮದುವೆಯಾಗಿದ್ದರೂ ಇಲ್ಲಿ ಮದುವೆ ಮಾಡಿಕೊಳ್ಳಲು ಮುಂದಾಗಿದ್ದ ಎನ್ನಲಾಗಿದೆ. ರಾಜಕಾರಣಿಗಳು ಎಲ್ಲೆಲ್ಲ ದುಡ್ಡು ಹೊಡೆಯಬಹುದೋ ಅಲ್ಲೆಲ್ಲ ಹಾಜರಿರುತ್ತಾರೆ ಎನ್ನುವ ವ್ಯಂಗ್ಯಕ್ಕೂ ಇದೊಂದು ಉದಾಹರಣೆ.

ಈ ನಡುವೆ ಸ್ಥಳೀಯ ಬಿಜೆಪಿ ನಾಯಕರು ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿ ಸುದ್ದಿ ಮಾಡಿದ್ದಾರೆ. ಕೇವಲ 51000 ರೂ. ಆಸೆಗೆ ಬಿದ್ದು ಮಾನ ಕಳೆದುಹೋಗುವಂತಾಯಿತು!

Exit mobile version