Site icon Vistara News

ದುರ್ಗಾಪುರದ ಯುವಕರಿಗೆ ನಿತ್ಯವೂ ಬೇಕು ರಾಶಿ ರಾಶಿ ಕಾಂಡೊಮ್‌; ಇವರಿಗೆ ನಶೆಯ ಚಟ !

Condoms

ಕೋಲ್ಕತ್ತ: ಪಶ್ಚಿಮ ಬಂಗಾಳದ ದುರ್ಗಾಪುರ ಮತ್ತು ಸುತ್ತಲಿನ ನಗರಗಳ ಒಂದಷ್ಟು ಯುವಕರು, ಮದುವೆಯೇ ಆಗದ ಸಣ್ಣ ವಯಸ್ಸಿನ ಹುಡುಗರು ಕಾಂಡೊಮ್‌ಗೆ ವಿಪರೀತ ಎನ್ನುವಷ್ಟು ಅಡಿಕ್ಟ್‌ ಆಗಿದ್ದಾರಂತೆ. ಪ್ರತಿದಿನ ಹೋಗಿ ಒಂದೊಂದು ಪ್ಯಾಕ್‌ ಕಾಂಡೊಮ್‌ ಖರೀದಿ ಮಾಡುತ್ತಿದ್ದಾರಂತೆ. ಸ್ಥಳೀಯವಾಗಿ ಇರುವ ಕೆಲವು ಅಂಗಡಿಗಳ ಮಾಲೀಕರೇ ಅದನ್ನು ನೋಡಿ ಅಚ್ಚರಿ ಪಡುತ್ತಿದ್ದಾರೆ ಎಂಬ ಒಂದು ವಿಚಿತ್ರ ಸುದ್ದಿ ವರದಿಯಾಗಿದೆ. ಕಾಂಡೊಮ್‌ ಎಂದರೆ ಅದು ಸುರಕ್ಷಿತ ಲೈಂಗಿಕ ಕ್ರಿಯೆಗಾಗಿ ಬಳಸುವ ಸಾಧನ ಮತ್ತು ಅದನ್ನು ಖರೀದಿಸುವುದೇ ಈ ಕಾರಣಕ್ಕಾಗಿ ಎಂದುಕೊಳ್ಳುವುದು ಸಹಜ. ಆದರೆ ಈ ಯುವಕರು ಅಷ್ಟೆಲ್ಲ ಕಾಂಡೊಮ್‌ ಖರೀದಿ ಮಾಡುತ್ತಿರುವುದು ಸೆಕ್ಸ್‌ಗಾಗಿ ಅಲ್ಲ..ಬದಲಾಗಿ ನೀರು ಕುಡಿಯಲು !

ಏನಿದು ಕಾಂಡೊಮ್‌ ನೀರು?
ದುರ್ಗಾಪುರ ನಗರ ಕೇಂದ್ರ ಭಾಗ. ಬಿಧಾನ್ನಗರ, ಬೇನಾಚಿಟಿ, ಮುಚಿಪಾರಾ, ಸಿ ಝೋನ್‌ ಮತ್ತು ಎ ಝೋನ್‌ಗಳಲ್ಲಿ ಹೀಗೆ ಕಾಂಡೋಮ್‌ ಖರೀದಿ ಹೆಚ್ಚಾಗಿದೆ. ಅದರಲ್ಲೂ ಕೂಡ ಸುವಾಸನೆ ಭರಿತ ಕಾಂಡೊಮ್‌ಗಳೇ ಬೇಕು ಎಂದು ಬೇಡಿಕೆ ಇಡುತ್ತಿದ್ದಾರಂತೆ. ಅದಕ್ಕೆ ಕಾರಣ ಸುವಾಸನಾಯುಕ್ತ ಕಾಂಡೊಮ್‌ಗಳ ನೀರು ಕುಡಿಯುವುದರಿಂದ ಅದೊಂದು ವಿಧದ ಮತ್ತು ಬರುತ್ತದೆಯಂತೆ. ಮದ್ಯ ಸೇವನೆ ಮಾಡಿದಾಗ ಏರುವ ಅಮಲನ್ನು ಈ ಕಾಂಡೊಮ್‌ಗಳೂ ಕೊಡುತ್ತವೆ ಎಂದು ಅದನ್ನು ಪ್ರತಿದಿನ ಕೊಳ್ಳುವ ಒಬ್ಬ ಹುಡುಗನೇ ಹೇಳಿದ್ದಾನೆ. ಪ್ರತಿದಿನ ತನ್ನ ಅಂಗಡಿಗೆ ಬಂದು ಕಾಂಡೊಮ್‌ ಕೇಳುತ್ತಿದ್ದ ಎಳೆ ಹುಡುಗನೊಬ್ಬನಲ್ಲಿ ಮಾಲೀಕ ತುಸು ಖಡಕ್‌ ಆಗಿ ಪ್ರಶ್ನಿಸಿದಾಗ ಆತ ಇದೇ ಉತ್ತರವನ್ನೇ ಕೊಟ್ಟಿದ್ದಾನೆ.

ಅದು ಹೇಗೆ ಅಮಲೇರುತ್ತದೆ?
ಸಾಮಾನ್ಯವಾಗಿ ಓರಲ್‌ ಸೆಕ್ಸ್‌ಗೆ ಸಹಾಯವಾಗಲಿ ಎಂದು ಹೀಗೆ ಸುವಾಸನಾಯುಕ್ತ ಕಾಂಡೊಮ್‌ಗಳನ್ನು ತಯಾರಿಸಲಾಗುತ್ತದೆ. ಚಾಕಲೇಟ್‌, ವೆನಿಲ್ಲಾ, ಮ್ಯಾಂಗೋ, ಬಬಲ್‌ಗಮ್‌, ಅಚಾರಿ, ಅಡ್ರಾಕ್‌ (ಶುಂಠಿ) ಹೀಗೆ ಹಲವು ಬಗೆಯ ಸುವಾಸನೆಯುಕ್ತ ಕಾಂಡೊಮ್‌ಗಳು ಮಾರ್ಕೆಟ್‌ನಲ್ಲಿ ಲಭ್ಯ ಇವೆ. ಆದರೆ ಇಂಥ ಸುವಾಸನಾಯುಕ್ತ ಕಾಂಡೊಮ್‌ಗಳಲ್ಲಿರುವ ಕೆಲವು ಅಂಶಗಳು ಅಮಲು ತರಿಸುತ್ತದೆಯಂತೆ. ಅದು ಹೇಗೆ ಎಂಬುದನ್ನು ದುರ್ಗಾಪುರ ಆರ್‌ಇ ಕಾಲೇಜಿನ ರಸಾಯನ ಶಾಸ್ತ್ರ ಶಿಕ್ಷಕ ನುರುಲ್‌ ಹಕ್‌ ವಿವರಿಸಿದ್ದಾರೆ. ʼಈ ಸುವಾಸನಾಯುಕ್ತ ಕಾಂಡೊಮ್‌ಗಳನ್ನು ದೀರ್ಘ ಸಮಯದವರೆಗೆ ಬಿಸಿ ನೀರಿನಲ್ಲಿ ನೆನೆಸಿಟ್ಟರೆ ಅದರಲ್ಲಿನ ಸಾವಯವ ಅಣುಗಳು ಹೊರಬೀಳುತ್ತವೆ. ಅವು ನೀರಿನೊಂದಿಗೆ ಸೇರಿ ಅಲ್ಕೋಹಾಲಿಕ್‌ ಸಂಯುಕ್ತವನ್ನು ಉಂಟುಮಾಡುತ್ತವೆ. ಹೀಗಾಗಿ ಈ ನೀರನ್ನು ಸೇವಿಸಿದಾಗ ಅಮಲೇರುತ್ತದೆʼ ಎಂದು ತಿಳಿಸಿದ್ದಾರೆ. ಈಗ ಈ ಹುಡುಗರೂ ಕೂಡ ಕಾಂಡೊಮ್‌ ಖರೀದಿಸಿ ರಾತ್ರಿಯೆಲ್ಲ ಬಿಸಿನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಆ ನೀರನ್ನು ಕುಡಿಯುತ್ತಾರೆ ಎಂಬುದು ಬೆಳಕಿಗೆ ಬಂದಿದೆ.

ಯುವಜನರು ನಶೆ ಏರಿಸಿಕೊಳ್ಳಲು ಇಂಥ ಯಾವುದಾದರೂ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಈ ಹಿಂದೆ ಹಲವರು, ಕೆಮ್ಮಿನ ಔಷಧಿ, ಪೇಂಟ್‌ನ ಸುವಾಸನೆ, ನೇಲ್‌ ಪಾಲಿಶ್‌, ವೈಟ್ನರ್‌ಗಳು, ಹ್ಯಾಂಡ್‌ಸ್ಯಾನಿಟೈಸರ್‌, ಐಯೋಡೆಕ್ಸ್‌ ಮೂಲಕ ನಶೆ ಏರಿಸಿಕೊಂಡು, ಪೊಲೀಸರ ಬಳಿ ಸಿಕ್ಕಿಬಿದ್ದ ಪ್ರಕರಣಗಳೂ ನಡೆದಿತ್ತು.

ಇದನ್ನೂ ಓದಿ: ಹೈದರಾಬಾದ್‌ ಸಾಮೂಹಿಕ ಅತ್ಯಾಚಾರ ಆಕಸ್ಮಿಕ ಅಲ್ಲ, ಪೂರ್ವ ನಿಯೋಜಿತ: ಸಾಕ್ಷ್ಯ ಹೇಳಿದ ಕಾಂಡೊಮ್‌!

Exit mobile version