Site icon Vistara News

ಪ್ರವಾದಿ ಅವಹೇಳನ ವಿವಾದ: ಪ್ರಯಾಗರಾಜ್‌ ಹಿಂಸಾಚಾರ ಆರೋಪಿ ಮನೆಗೆ ಬುಲ್ಡೋಜರ್‌!

prayag raj

ಪ್ರಯಾಗರಾಜ್‌: ಬಿಜೆಪಿ ವಕ್ತಾರೆ ನೂಪುರ್‌ ಶರ್ಮಾ ಅವರು ಪ್ರವಾದಿ ಮಹಮ್ಮದ್‌ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದನ್ನು ಖಂಡಿಸಿ ಮತ್ತು ಬಂಧನಕ್ಕೆ ಆಗ್ರಹಿಸಿ ಶುಕ್ರವಾರ ಮತ್ತು ಶನಿವಾರ ದೇಶಾದ್ಯಂತ ಹಲವೆಡೆ ಪ್ರತಿಭಟನೆ ಹಿಂಸಾಚಾರಗಳು ನಡೆದಿವೆ. ಕಾನ್ಪುರ, ರಾಂಚಿ, ಹೌರಾ, ಪ್ರಯಾಗರಾಜ್‌ಗಳಲ್ಲಿ ದೊಡ್ಡ ಮಟ್ಟದ ಗಲಭೆಗಳು ನಡೆದು ಭಾರಿ ಪ್ರಮಾಣದಲ್ಲಿ ನಾಶ ನಷ್ಟ ಉಂಟಾಗಿದೆ. ಈ ನಡುವೆ, ಪ್ರಯಾಗರಾಜ್‌ನಲ್ಲಿ ಹಿಂಸೆ ಭುಗಿಲೇಳುವಲ್ಲಿ ಪ್ರಧಾನ ಪಾತ್ರ ವಹಿಸಿದ ಪ್ರಧಾನ ಆರೋಪಿ ಜಾವೇದ್‌ ಅಹಮದ್‌ನ ಮನೆಯನ್ನು ಭಾನುವಾರ ಬುಲ್ಡೋಜರ್‌ ಬಳಸಿ ಕೆಡವಿ ಹಾಕಲಾಗಿದೆ.
ಉತ್ತರ ಪ್ರದೇಶದಲ್ಲಿ ಕೋಮು ಗಲಭೆಯಲ್ಲಿ ಪಾಲ್ಗೊಳ್ಳುವವರು ಮತ್ತು ಕುಮ್ಮಕ್ಕು ನೀಡುವವರನ್ನು ಕಠಿಣವಾಗಿ ದಂಡಿಸಲಾಗುತ್ತಿದೆ. ದುಷ್ಕರ್ಮಿ ಕೃತ್ಯಗಳಲ್ಲಿ ಪಾಲ್ಗೊಳ್ಳುವವರ ಮನೆಗಳಿಗೆ ಬುಲ್ಡೋಜರ್‌ ನುಗ್ಗಿಸುವ ಹೊಸ ಕ್ರಮ ಚಾಲ್ತಿಯಲ್ಲಿದೆ. ಇದರ ಭಾಗವಾಗಿಯೇ ಈಗ ಪ್ರಧಾನ ಆರೋಪಿ ಜಾವೇದ್‌ನ ಮನೆಯನ್ನು ಪುಡಿಗಟ್ಟಲಾಗುತ್ತಿದೆ.

ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದವರಲ್ಲಿ ಪ್ರಮುಖನಾಗಿರುವ ಜಾವೇದ್‌ ಅಹಮದ್‌ನ ಮನೆ ಅಕ್ರಮವಾಗಿ, ಒತ್ತುವರಿ ಮಾಡಿ ಕಟ್ಟಿದ ಕಟ್ಟಡವಾಗಿದ್ದು ಅದರನ್ನು ಒಡೆದು ಹಾಕಲಾಗುತ್ತಿದೆ ಎಂದು ಪ್ರಯಾಗರಾಜ್‌ ಅಭಿವೃದ್ಧಿ ಪ್ರಾಧಿಕಾರ ಮನೆಗೆ ನೋಟಿಸ್‌ ಜಾರಿ ಮಾಡಿತ್ತು.

ಪ್ರಯಾಗರಾಜ್‌ನಲ್ಲಿ ಶುಕ್ರವಾರ ಮಧ್ಯಾಹ್ನದ ಬಳಿಕ ದೊಡ್ಡ ಮಟ್ಟದಲ್ಲಿ ಗಲಭೆ ನಡೆದಿದ್ದು, ದುಷ್ಕರ್ಮಿಗಳು ಪೊಲೀಸರ ಮೇಲೆಯೂ ದಾಳಿ ನಡೆಸಿದ್ದರು. ಜಾವೇದ್‌ ಅಹಮದ್‌ನ ಸೂಚನೆಯಂತೆ ಸಣ್ಣ ಸಣ್ಣ ಮಕ್ಕಳು ಕೂಡಾ ಗಲಭೆಯಲ್ಲಿ ಶಾಮೀಲಾಗಿದ್ದರು ಎಂದು ಹೇಳಲಾಗಿದೆ.

ಬಿಗಿ ಭದ್ರತೆ
ಪ್ರಯಾಗರಾಜ್‌ನಲ್ಲಿ ಬುಲ್ಡೋಜರ್‌ ಕಾರ್ಯಾಚರಣೆ ಆರಂಭಕ್ಕೆ ಮೊದಲೇ ಪರಿಸರದಲ್ಲಿ ಭಾರಿ ಪ್ರಮಾಣದಲ್ಲಿ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆಯೇ ಮನೆ ಮುಂದೆ ಬುಲ್ಡೋಜರ್‌ ತಂದು ಇಡಲಾಗಿತ್ತು. ಸಹರಣ್‌ ಪುರದಲ್ಲಿ ಕೂಡಾ ಹಿಂಸಾಚಾರದಲ್ಲಿ ಭಾಗಿಯಾದವರ ಮನೆಗಳನ್ನು ಉರುಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಉತ್ತರ ಪ್ರದೇಶದಲ್ಲಿ 304 ಮಂದಿ ಬಂಧನ

ಉತ್ತರ ಪ್ರದೇಶದ ನಾನಾ ಭಾಗಗಳಲ್ಲಿ ಶುಕ್ರವಾರ ಮತ್ತು ಶನಿವಾರ ನಡೆದ ಗಲಭೆಗೆ ಸಂಬಂಧಿಸಿ ಒಟ್ಟು 304 ಮಂದಿಯನ್ನು ಬಂಧಿಸಲಾಗಿದೆ ಎಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿ ಪ್ರಶಾಂತ್‌ ಕುಮಾರ್‌ ತಿಳಿಸಿದ್ದಾರೆ. ಪ್ರಯಾಗರಾಜ್‌ನಲ್ಲಿ 91, ಸಹರಣ್‌ ಪುರದಲ್ಲಿ 71, ಹತ್ರಾಸ್‌ನಲ್ಲಿ 51, ಮೊರಾದಾಬಾದ್‌ನಲ್ಲಿ 34 ಹಾಗೂ ಉಳಿದವರನ್ನು ಫಿರೋಜಾಬಾದ್‌, ಅಂಬೇಡ್ಕರ್‌ ನಗರ್‌ನಲ್ಲಿ ಬಂಧಿಸಲಾಗಿದೆ.

ಪಶ್ಚಿಮ ಬಂಗಾಳದಲ್ಲ ಬಿಜೆಪಿ ಪ್ರತಿಭಟನೆ
ಈ ನಡುವೆ, ನೂಪುರ್‌ ಶರ್ಮಾ ಬಂಧನ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಗೆ ಪ್ರತಿಯಾಗಿ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ದೊಡ್ಡ ಮಟ್ಟದ ಪ್ರದರ್ಶನ ನಡೆಸುತ್ತಿದೆ. ನೂಪುರ್‌ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಬಿಜೆಪಿ ಖಂಡಿಸಿದೆ.

ನೂಪುರ್‌ ವಿರುದ್ಧ ಎಫ್‌ಐಆರ್‌
ಇದೇ ವೇಳೆ, ಬಿಜೆಪಿ ವಕ್ತಾರೆ ನೂಪುರ್‌ ಶರ್ಮಾ ಅವರ ವಿರುದ್ಧ ಕ್ರಮ ಆಗ್ರಹಿಸಿ ಕೋಲ್ಕೊತಾದ ಕಾಂತಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ತೃಣಮೂಲ ಕಾಂಗ್ರೆಸ್‌ನ ಅಲ್ಪಸಂಖ್ಯಾತ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಸುಪ್ರೀಂಕೋರ್ಟ್‌ ನ್ಯಾಯವಾದಿಯಾಗಿರುವ ಅಬೂ ಸೊಹೇಲ್‌ ಈ ಪ್ರಕರಣ ದಾಖಲಿಸಿದ್ದಾರೆ.

ದೇಶಾದ್ಯಂತ ನೂಪುರ್‌ ಶರ್ಮ ಅವರ ಬಂಧನ ಆಗ್ರಹಿಸಿ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಆದರೆ, ಶುಕ್ರವಾರ ಮತ್ತು ಶನಿವಾರ ಇದ್ದಷ್ಟು ತೀವ್ರತೆ ಭಾನುವಾರ ಇರಲಿಲ್ಲ. ಭಾನುವಾರ ಆರೋಪಿಗಳ ಬಂಧನ ಸತ್ರ ಜೋರಾಗಿ ನಡೆಯುತ್ತಿದೆ.

ಇದನ್ನೂ ಓದಿ| ಬೆಳಗಾವಿಯಲ್ಲಿ ನೂಪುರ್‌ ಶರ್ಮಾ ಪ್ರತಿಕೃತಿಯನ್ನು ಗಲ್ಲಿಗೇರಿಸಿದ್ದ ಮೂವರ ಬಂಧನ

Exit mobile version