ಕೋಲ್ಕತಾ: ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗದ ನೇಮಕಾತಿ ಹಗರಣದಲ್ಲಿ ಆರೋಪಿಯಾಗಿ ಇ.ಡಿ.ಯಿಂದ ಬಂಧಿತರಾಗಿರುವ ಸಚಿವ ಪಾರ್ಥ ಚಟರ್ಜಿ ಅವರನ್ನು ಇಂದು ಭುವನೇಶ್ವರದಲ್ಲಿರುವ ಏಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗುವುದು.
ಸಚಿವರನ್ನು ಏಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸುವ ಸಲುವಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೋಲ್ಕತಾದ ಸಾರ್ವಜನಿಕ ಆಸ್ಪತ್ರೆಯಾದ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ಇಂದು ಬೆಳಗ್ಗೆ ಆಗಮಿಸಿದ್ದಾರೆ. ಪ್ರಸ್ತುತ ಎಸ್‌ಎಸ್‌ಕೆಎಂ ಆಸ್ಪತ್ರೆಯಲ್ಲಿ ಪಾರ್ಥ ಚಟರ್ಜಿ ದಾಖಲಾಗಿದ್ದಾರೆ.
ತೃಣಮೂಲ ಕಾಂಗ್ರೆಸ್ ಪಕ್ಷದ ರಾಜಕಾರಣಿಗಳು ಜಾರಿ ನಿರ್ದೇಶನಾಲಯದ ವಿಚಾರಣೆಯನ್ನು ತಪ್ಪಿಸಿಕೊಳ್ಳುವ ಸಲುವಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ ಎಂದು ಕೋಲ್ಕತಾ ಹೈಕೋರ್ಟ್ ಹೇಳಿದೆ. ಜಾರಿ ನಿರ್ದೇಶನಾಲಯವು ಬಂಧಿತ ಸಚಿವರನ್ನು ಎಸ್‌ಎಸ್‌ಕೆಎಂ ಆಸ್ಪತ್ರೆಗೆ ದಾಖಲಿಸಿರುವುದಕ್ಕೆ ಆಕ್ಷೇಪಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಎಸ್‌ಎಸ್‌ಕೆಎಂ ಆಸ್ಪತ್ರೆ ಬದಲಿಗೆ ಕಮಾಂಡ್ ಆಸ್ಪತ್ರೆಗೆ ಸ್ಥಳಾಂತರಿಸಲು ಅನುಮತಿ ನೀಡಬೇಕು ಎಂದು ಇ.ಡಿ ಕೋರ್ಟ್‌ಗೆ ಮನವಿ ಸಲ್ಲಿಸಿತ್ತು. ಸಚಿವ ಪಾರ್ಥ ಚಟರ್ಜಿ ಅವರು ಸರ್ಕಾರಿ ಆಸ್ಪತ್ರೆಯ ವಲಯದಲ್ಲಿ ಪ್ರಭಾವಿ ಆಗಿರುವುದರಿಂದ ಅಧಿಕಾರದ ದುರ್ಬಳಕೆ ಮಾಡುವ ಸಾಧ್ಯತೆ ಇದೆ ಎಂದು ಇ.ಡಿ, ಹೈಕೋರ್ಟ್‌ಗೆ ವಿವರಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಪಾರ್ಥ ಚಟರ್ಜಿ ಅವರನ್ನು ಏಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲು ಸೂಚಿಸಿದೆ.
ಅರೆಸ್ಟ್ ಆದ ಬಳಿಕ ಮಮತಾ ಬ್ಯಾನರ್ಜಿಗೆ ೪ ಸಲ ಕರೆ: ಸಚಿವ ಪಾರ್ಥ ಸಾರಥಿ ಅವರು ಜಾರಿ ನಿರ್ದೇಶನಾಲಯದಿಂದ ಶನಿವಾರ ಬಂಧನಕ್ಕೀಡಾದ ಬಳಿಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ೪ ಸಲ ದೂರವಾಣಿ ಕರೆ ಮಾಡಿದ್ದರು. ಆದರೆ ಮಮತಾ ಬ್ಯಾನರ್ಜಿ ಅವರು ಉತ್ತರಿಸಿರಲಿಲ್ಲ.
ಪಾರ್ಥ ಸಾರಥಿ ಅವರು ಶನಿವಾರ ಮಧ್ಯಾಹ್ನ ೨.೩೧, ೨.೩೩, ೩,೩೭ ಮತ್ತು ಭಾನುವಾರ ಬೆಳಗ್ಗೆ ೯.೩೫ಕ್ಕೆ ಫೋನ್ ಕರೆ ಮಾಡಿದರೂ, ಮಮತಾ ಬ್ಯಾನರ್ಜಿ ಕರೆಯನ್ನು ಸ್ವೀಕರಿಸಲಿಲ್ಲ.