Site icon Vistara News

ಭಾರತ-ಜಪಾನ್‌ ಮೈತ್ರಿಯ ಸುಧಾರಕ, ಪದ್ಮವಿಭೂಷಣ ಪುರಸ್ಕೃತ ಶಿಂಜೊ ಅಬೆ

shinjo abe

ನವ ದೆಹಲಿ: ಭಾರತ ಮತ್ತು ಜಪಾನ್‌ ನಡುವೆ ಮೊದಲಿನಿಂದಲೂ ಉತ್ತಮ ಬಾಂಧವ್ಯ ಇತ್ತು. ಆದರೆ ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ ಅವರು ಈ ಮೈತ್ರಿಯನ್ನು ಅಭೂತಪೂರ್ವವಾಗಿ ಹೊಸ ಎತ್ತರದ ಮಟ್ಟಕ್ಕೆ ಕೊಂಡೊಯ್ದರು. ಇದಕ್ಕಾಗಿ ೨೦೨೧ರಲ್ಲಿ ಭಾರತ ತನ್ನ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣವನ್ನು ನೀಡಿ ಗೌರವಿಸಿತ್ತು.

ಸಾರ್ವಜನಿಕ ವ್ಯವಹಾರಗಳಲ್ಲಿ ಸಲ್ಲಿಸಿದ ಉತ್ಕೃಷ್ಟ ಕೊಡುಗೆಗೋಸ್ಕರ ಶಿಂಬೊ ಅಬೆ ಅವರಿಗೆ ಭಾರತ ಪದ್ಮ ವಿಭೂಷಣವನ್ನು ನೀಡಿತ್ತು. ಈ ಪುರಸ್ಕಾರವನ್ನು ಗಳಿಸಿದ ಎರಡನೇ ಜಪಾನ್‌ನ ಎರಡನೇ ಗಣ್ಯ ವ್ಯಕ್ತಿ ಅವರಾಗಿದ್ದರು. ಈ ಹಿಂದೆ ೨೦೦೧ರಲ್ಲಿ ಜಪಾನ್‌ನ ರಕ್ಷಣಾ ಸಚಿವರಾದ ಹೊಸೈ ನೊರೊಟಾ ಅವರಿಗೆ ನೀಡಲಾಗಿತ್ತು.

ಚೀನಾದ ಪ್ರಾಬಲ್ಯ ಮತ್ತು ಬೆದರಿಕೆಯ ಎದುರು ಭಾರತ-ಜಪಾನ್‌ ಮೈತ್ರಿಯನ್ನು ಸುಧಾರಿಸುವ ಮೂಲಕ ಇಂಡೊ-ಪೆಸಿಫಿಕ್ ವಲಯದಲ್ಲಿ ಸಮತೋಲನ ಸಾಧಿಸಲು ಶಿಂಜೊ ಅಬೆ ಶ್ರಮಿಸಿದ್ದರು.‌

೨೦೦೭ರ ಆಗಸ್ಟ್‌ನಲ್ಲಿ ಭಾರತದ ಸಂಸತ್ತಿನಲ್ಲಿ ಮಾತನಾಡಿದ್ದ ಶಿಂಬೊ ಅಬೆ, ಮುಕ್ತ ಇಂಡೊ-ಪೆಸಿಫಿಕ್‌ ವಲಯದ ಅಭಿವೃದ್ಧಿಗೆ ಭಾರತ-ಜಪಾನ್‌ ಮೈತ್ರಿ ನಿರ್ಣಾಯಕ ಎಂದಿದ್ದರು. ಜಪಾನ್‌ನಲ್ಲಿ ಅತಿ ಹೆಚ್ಚು ಕಾಲ ಪ್ರಧಾನಿ ಹುದ್ದೆಯಲ್ಲಿದ್ದ ಶಿಂಜೊ ಅಬೆ, ಭಾರತದ ಜತೆ ಆಪ್ತ ನಂಟನ್ನು ಹೊಂದಿದ್ದರು.

ಕ್ವಾಡ್‌ ಮೈತ್ರಿಕೂಟದ ರೂವಾರಿ

ಕಳೆದ ೨೦೦೭ರಲ್ಲಿ ಅಮೆರಿಕ, ಜಪಾನ್‌, ಆಸ್ಟ್ರೇಲಿಯಾ, ಬಾರತವನ್ನು ಒಳಗೊಂಡಿರುವ ಕ್ವಾಡ್‌ ಮೈತ್ರಿಕೂಟದ ಪರಿಕಲ್ಪನೆಯನ್ನು ಶಿಂಜೊ ಅಬೆ ಮಂಡಿಸಿದ್ದರು.

ಬುಲೆಟ್‌ ಯೋಜನೆಗೆ ಬದ್ಧರಾಗಿದ್ದ ಶಿಂಜೊ ಅಬೆ

ಭಾರತದಲ್ಲಿ ಅಹಮದಾಬಾದ್-ಮುಂಬಯಿ ನಡುವಣ ಮಹತ್ತ್ವಾಕಾಂಕ್ಷೆಯ ಬುಲೆಟ್‌ ರೈಲು ನಿರ್ಮಾಣ ಯೋಜನೆಗೆ ಸಂಪೂರ್ಣ ಬದ್ಧತೆಯನ್ನು ಜಪಾನ್‌ ಪ್ರಧಾನಿಯಾಗಿ ಶಿಂಜೊ ಅಬೆ ವ್ಯಕ್ತಪಡಿಸಿದ್ದರು. ೭೯ ಸಾವಿರ ಕೋಟಿ ರೂ.ಗಳ ಮೆಗಾ ಯೋಜನೆಗೆ ೮೦% ಸಾಲವನ್ನು ಕೇವಲ ೦.೧% ಬಡ್ಡಿ ದರಕ್ಕೆ ಜಪಾನ್‌ ನೀಡಿದೆ.

ಬುಲೆಟ್‌ ರೈಲು ಮಾತ್ರವಲ್ಲದೆ ಭಾರತದಲ್ಲಿ ಹಲವಾರು ಮೂಲ ಸೌಕರ್ಯ ಯೋಜನೆಗಳಲ್ಲಿ ಜಪಾನ್‌ ಭಾಗವಹಿಸಿದೆ. ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಧುಬ್ರಿ ಫುಲ್‌ಬಾರಿ ಸೇತುವೆ ನಿರ್ಮಾಣಕ್ಕೆ ಅಬೆ ಅವರ ಅವಧಿಯಲ್ಲಿ ಜಪಾನ್‌ ಇಂಟರ್‌ನ್ಯಾಷನಲ್‌ ಕಾರ್ಪೊರೇಷನ್‌ ಏಜೆನ್ಸಿ ನೆರವು ನೀಡಿತ್ತು.

ಕಾಶಿಗೆ ಭೇಟಿ ನೀಡಿದ್ದ ಅಬೆ

ಜಪಾನ್‌ ಪ್ರಧಾನಿಯಾಗಿದ್ದಾಗ ಶಿಂಜೊ ಅಬೆ ಅವರು ೨೦೧೫ರಲ್ಲಿ ಭಾರತ ಪ್ರವಾಸ ಕೈಗೊಂಡಾಗ ಕಾಶಿಗೂ ಭೇಟಿ ನೀಡಿದ್ದರು. ೨೦೧೬ರಲ್ಲಿ ಪ್ರಧಾನಿ ಮೋದಿ, ಜಪಾನಿಗೆ ಭೇಟಿ ಕೊಟ್ಟಿದ್ದರು. ಕಾಶಿ-ಕ್ಯೋಟೊ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಜಪಾನಿನ ಪ್ರಾಚೀನ ನಗರಿ ಕ್ಯೂಟೊ ಮಾದರಿಯಲ್ಲಿ ಕಾಶಿಯ ಅಭಿವೃದ್ಧಿಗೆ ಮೋದಿ-ಶಿಂಜೊ ಅಬೆ ಜೋಡಿ ಒಪ್ಪಂದಕ್ಕೆ ಸಹಿ ಹಾಕಿದ್ದರು.

ಮೋದಿ-ಶಿಂಜೊ ಆಪ್ತ ಗೆಳೆತನ

ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ ಸಿಎಂ ಆಗಿದ್ದಾಗಿನಿಂದಲೂ ಆಗಾಗ್ಗೆ ಜಪಾನ್‌ಗೆ ಭೇಟಿ ನೀಡುತ್ತಿದ್ದರು. ಆಗಿನಿಂದಲೂ ಅಬೆ-ಮೋದಿ ಆಪ್ತ ಸ್ನೇಹಿತರಾಗಿದ್ದರು. ಮೋದಿ ಪ್ರಧಾನಿಯಾದ ಬಳಿಕ ಉಭಯ ನಾಯಕರ ಮೈತ್ರಿ ವೃದ್ಧಿಸಿತ್ತು.

ಈ ಎಲ್ಲ ಹಿನ್ನೆಲೆಯಲ್ಲಿ ಜಪಾನ್‌ನಲ್ಲಿ ಇದೀಗ ಗುಂಡಿನ ದಾಳಿಗೆ ಸಿಲುಕಿ ಗಾಯಗೊಂಡಿರುವ ಶಿಂಜೊ ಅಬೆ ಅವರ ಶೀಘ್ರ ಚೇತರಿಕೆಗೆ ಭಾರತೀಯರು ಪ್ರಾರ್ಥಿಸುತ್ತಿದ್ದಾರೆ.

ಇದನ್ನೂ ಓದಿ: ಜಪಾನ್‌ ಮಾಜಿ ಪ್ರಧಾನಿ ಶಿಂಜೊ ಅಬೆ ಎದೆಗೆ ಗುಂಡೇಟು, ಚಿಂತಾಜನಕ ಸ್ಥಿತಿ

Exit mobile version