ನವ ದೆಹಲಿ: ಮಂಕಿಪಾಕ್ಸ್ ಸೋಂಕು ಜಗತ್ತಿನಾದ್ಯಂತ ಹರಡುತ್ತಿದೆ. ಭಾರತದಲ್ಲೇ ನಾಲ್ಕು ಕೇಸ್‌ಗಳು ಅಧಿಕೃತವಾಗಿದ್ದು, ನೊಯ್ಡಾ ಮತ್ತು ಘಾಜಿಯಾಬಾದ್‌ನಲ್ಲಿ ಎರಡು ಶಂಕಿತ ಪ್ರಕರಣಗಳು ಪತ್ತೆಯಾಗಿವೆ. ಜಗತ್ತಿನಾದ್ಯಂತ 75 ದೇಶಗಳಲ್ಲಿ 18 ಸಾವಿರಕ್ಕೂ ಹೆಚ್ಚು ಮಂಕಿಪಾಕ್ಸ್ ಕೇಸ್‌ಗಳು ದಾಖಲಾಗಿವೆ ಎಂದು ಹೇಳಲಾಗಿದೆ ಮತ್ತು ವಿಶ್ವ ಸಂಸ್ಥೆ ಇದನ್ನು ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಪರಿಗಣಿಸಿದೆ.
ಹಾಗೇ, ಈ ಮಂಕಿಪಾಕ್ಸ್ ಹೆಚ್ಚಾಗಿ ಕಾಣಿಸುತ್ತಿರುವುದು ಸಲಿಂಗಕಾಮಿ ಮತ್ತು ಉಭಯಲಿಂಗಿ ಪುರಷರಲ್ಲಿ ಎಂಬುದನ್ನೂ ಹೇಳಿರುವ ವಿಶ್ವ ಆರೋಗ್ಯ ಸಂಸ್ಥೆ, ಸ್ವಲ್ಪ ದಿನಗಳ ಮಟ್ಟಿಗೆ ಲೈಂಗಿಕ ಸಂಗಾತಿಗಳನ್ನು ಸೀಮಿತಗೊಳಿಸಿಕೊಳ್ಳಿ ಎಂದೂ ಈ ವರ್ಗದ ಪುರುಷರಿಗೆ ಸಲಹೆ ನೀಡಿದೆ. ಅಂದರೆ ಮತ್ತೊಬ್ಬ ಪುರುಷನೊಂದಿಗೇ ಲೈಂಗಿಕ ಕ್ರಿಯೆ ನಡೆಸುವ ಪುರುಷ ಮತ್ತು ಪುರುಷ-ಮಹಿಳೆ ಇಬ್ಬರೊಂದಿಗೂ ಸೆಕ್ಸ್ ಮಾಡುವ ಪುರುಷರು ಕೆಲವು ಸಮಯಗಳ ಮಟ್ಟಿಗೆ ಹೆಚ್ಚೆಚ್ಚು ಜನರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಬಾರದು ಎಂಬುದು ವಿಶ್ವ ಆರೋಗ್ಯ ಸಂಸ್ಥೆಯ ಸಲಹೆ.
ಮಂಕಿಪಾಕ್ಸ್ ಅಪಾಯ 75ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಹಬ್ಬಿದ್ದರೂ, ಈ ಕಾಯಿಲೆಯಿಂದ ಸಾವು ಉಂಟಾಗಿದ್ದು ಆಫ್ರಿಕಾದಲ್ಲಿ. ಮಾರಣಾಂತಿಕ ಮಂಕಿಪಾಕ್ಸ್ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಡಬ್ಲ್ಯೂಎಚ್‌ಒ ಪ್ರಧಾನ ನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ʼಸೋಂಕಿನ ನಿಯಂತ್ರಣಕ್ಕೆ ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ರಾಷ್ಟ್ರಗಳು ಒಗ್ಗಟ್ಟಾಗಬೇಕುʼ ಎಂದು ಕರೆ ಕೊಟ್ಟಿದ್ದಾರೆ. ಈ ಕಾಯಿಲೆ ಕಂಡು ಬರುತ್ತಿರುವುದು ಸಲಿಂಗಕಾಮಿಗಳಲ್ಲೇ ಹೆಚ್ಚು ಎಂಬುದನ್ನೂ ಒತ್ತಿ ಹೇಳಿದ್ದಾರೆ.
ಇದನ್ನೂ ಓದಿ: Monkeypox| ಮಂಕಿಪಾಕ್ಸ್ ತುರ್ತು ಜಾಗತಿಕ ಆರೋಗ್ಯ ಪರಿಸ್ಥಿತಿ ಘೋಷಿಸಿದ WHO
“ಮಂಕಿಪಾಕ್ಸ್ ಸೋಂಕು ತಡೆಯಲು ಪ್ರತಿಯೊಬ್ಬ ವ್ಯಕ್ತಿಯೂ ಕೈಜೋಡಿಸಬೇಕು. ಅದರಲ್ಲೂ ಪುರುಷರೊಂದಿಗೆ ಲೈಂಗಿಕ ಕ್ರಿಯೆ ನಡೆಸುವ, ಪುರುಷರು ಮತ್ತು ಮಹಿಳೆ ಇಬ್ಬರೊಂದಿಗೂ ಲೈಂಗಿಕ ಸಂಪರ್ಕ ಬಯಸುವ ಪುರುಷರು ಅತ್ಯಂತ ಜಾಗರೂಕರಾಗಿರಬೇಕು. ನಿಮ್ಮ ಸುರಕ್ಷತೆಯೊಂದಿಗೆ ಇತರರ ಸುರಕ್ಷತೆಯನ್ನೂ ಗಮನದಲ್ಲಿಟ್ಟುಕೊಳ್ಳಿ. ನಿಮ್ಮನಿಮ್ಮ ಲೈಂಗಿಕ ಸಂಗಾತಿಗಳನ್ನು ಸೀಮಿತಗೊಳಿಸಿಕೊಳ್ಳಿ. ಸಂಗಾತಿಗಳ ಸಂಖ್ಯೆ ಕಡಿಮೆ ಮಾಡಿಕೊಳ್ಳಿ” ಎಂದು ಸಲಹೆ ನೀಡಿದ್ದಾರೆ. “ನಿಮ್ಮಲ್ಲಿ ಯಾರಿಗೇ ಸೋಂಕು ಕಂಡುಬಂದರೂ ನೀವು ಐಸೋಲೇಟ್ ಆಗಿ. ಮತ್ತೊಬ್ಬರ ಸಂಪರ್ಕಕ್ಕೆ ಹೋಗಬೇಡಿ” ಎಂದೂ ತಿಳಿಸಿದ್ದಾರೆ.
ಲಸಿಕೆಗೆ ತಯಾರಿಕೆ ಪ್ರಸ್ತಾಪವಿಟ್ಟ ಭಾರತ ಸರ್ಕಾರ
ಕೊರೊನಾ ಸೋಂಕಿನ ವಿರುದ್ಧ ಜಗತ್ತಿನಲ್ಲೇ ಮೊಟ್ಟಮೊದಲು ಲಸಿಕೆ ಅಭಿವೃದ್ಧಿ ಪಡಿಸಿದ ದೇಶ ಭಾರತ. ಈಗ ಸರ್ಕಾರ ಮಂಕಿಪಾಕ್ಸ್‌ಗೂ ಲಸಿಕೆ ತಯಾರಿಕೆಯತ್ತ ಒಲವು ತೋರಿದೆ. ಮಂಕಿಪಾಕ್ಸ್ ಸೋಂಕು ಪತ್ತೆ ಕಿಟ್ ಮತ್ತು ವೈರಸ್ ವಿರುದ್ಧ ಹೋರಾಡುವ ಲಸಿಕೆ ತಯಾರಿಸಲು ಔಷಧೀಯ ಕಂಪನಿಗಳು ಪ್ರಸ್ತಾಪ ಸಲ್ಲಿಸಬಹುದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.
ಇದನ್ನೂ ಓದಿ: ದೆಹಲಿಗೂ ಬಂತು ಮಂಕಿಪಾಕ್ಸ್; ವಿದೇಶ ಪ್ರಯಾಣವನ್ನೇ ಮಾಡದವನಿಗೆ ಸೋಂಕು