ಮುಂಬೈ: ಕೊರೋನಾ ಮೂರನೇ ಅಲೆಯಲ್ಲಿ ಪತ್ತೆಯಾಗಿದ್ದ ಒಮಿಕ್ರಾನ್ ವೈರಸ್ ಈಗ ರೂಪಾಂತರಗೊಂಡು ಮತ್ತೊಂದು ಹೊಸ ವೈರಸ್ ಮುಂಬೈಯಲ್ಲಿ ಪತ್ತೆಯಾಗಿದೆ. ಮುಂಬೈನ 56 ವರ್ಷದ ಹಿರಿಯ ಮಹಿಳೆಯಲ್ಲಿ ಪತ್ತೆಯಾದ ಒಮಿಕ್ರಾನ್ ಎಕ್ಸ್.ಇ. ಎಂಬ ವೈರಸ್ ಕಾಣಿಸಿಕೊಂಡಿದೆ. ಇದು ಒಮಿಕ್ರಾನ್ ವೈರಸ್‌ನ ಎರಡು ರೂಪಂತರಿಗಳಾದ BA.1 ಹಾಗೂ BA.2 ವೈರಸ್‌ಗಳ ಹೈಬ್ರಿಡ್ ಎಂದು ಗುರುತಿಸಲಾಗಿದೆ.
ಈ ಮಹಿಳೆ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾಗೆ ಪ್ರಯಾಣಿಸಿದ್ದರು. ಆದರೆ, ಅವರಲ್ಲಿ ಯಾವುದೇ ರೀತಿಯ ರೋಗಲಕ್ಷಣಗಳು ಕಾಣಿಸಿಕೊಂಡಿರಲಿಲ್ಲ. ಪ್ರಯಾಣಿಸಿದ ಒಂದು ತಿಂಗಳ ಬಳಿಕ ಮಾರ್ಚ್‌ನಲ್ಲಿ ತಪಾಸಣೆ ಮಾಡಿಸಿದಾಗ ಅವರ ದೇಹದಲ್ಲಿ Omicron XE ಎಂಬ ಹೊಸ ವೈರಸ್ ಕಾಣಿಸಿಕೊಂಡಿದೆ. ಇದು ಭಾರತದ ಮೊದಲ ಕೇಸ್ ಎಂದು ದಾಖಲಾಗಿದ್ದು, ಈ ಹಿಂದೆ ಕಾಣಿಸಿಕೊಂಡ ವೈರಸ್‌ಗಳಿಗಿಂತ 10% ವೇಗದಲ್ಲಿ ಹರಡುವ ಸಾಧ್ಯತೆ ಇದೆ ಎಂದು ತಜ್ಞರು ಹೆಳಿದ್ದಾರೆ.
ಈ ವೈರಸ್ ಜನವರಿ 19ರಂದು ಇಂಗ್ಲೆಂಡ್‌ನಲ್ಲಿ ಮೊದಲು ಪತ್ತೆಯಾಗಿತ್ತು. ಆದರೆ, ಈಗ ಪತ್ತೆಯಾಗಿರುವ ವೈರಸ್ ಕೊರೋನಾ ರೂಪಾಂತರಿ ಒಮಿಕ್ರಾನ್ ಎಕ್ಸ್.ಇ. ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಭಾರತೀಯ SARS-COV-2 ಜೀನೋಮಿಕ್ಸ್ ಕನ್ಸೋರ್ಟಿಯಂ (INSACOG) ನಡೆಸಿದ ಸಂಶೋಧನೆಯಲ್ಲಿ ಈಗ ಪತ್ತೆಯಾದ ವೈರಸ್ ಲಕ್ಷಣಗಳು ಹಾಗೂ ಒಮಿಕ್ರಾನ್ ಎಕ್ಸ್.ಇ ವೈರಸ್‌ನ ಲಕ್ಷಣಗಳು ಪರಸ್ಪರ ಹೊಂದುತ್ತಿಲ್ಲ ಎಂದು ಜೀನೋಮಿಕ್ಸ್ ತಜ್ಞರು ತಿಳಿಸಿದ್ದಾರೆ. ಒಮಿಕ್ರಾನ್ ವೈರಸ್ ಹಾಗೂ ರೂಪಾಂತರಗಿಳಂದ ಯಾವದೇ ಅಪಾಯಕಾರಿ ಖಾಯಿಲೆಗಳು ಕಂಡುಬಂದಿಲ್ಲ ಹಾಗಾಗಿ ಅದಕ್ಕೆ ಹೆದರುವ ಅವಶ್ಯಕತೆ ಇಲ್ಲ ಎಂದು ತಜ್ಞರು ಭರವಸೆ ನೀಡಿದ್ದಾರೆ.
ಒಮಿಕ್ರಾನ್ ಎಕ್ಸ್.ಇ ರೂಪಾಂತರಿಯ ಲಕ್ಷಣಗಳೇನು?
ಕೆಲವರಲ್ಲಿ ಯಾವುದೇ ಲಕ್ಷಣಗಳು ಕಾಣಿಸದಿರಬಹುದು ಹಾಗೂ ಕೆಲವರಲ್ಲಿ ಹೆಚ್ಚಿನ ಲಕ್ಷಣಗಳು ಕಾಣಬಹುದು. ರೋಗಲಕ್ಷಣಗಳು ಕಾಣಿಸುವುದು ಅಥವಾ ಕಾಣಿಸಿಕೊಳ್ಳದೇ ಇರುವುದು ಪ್ರತಿಯೊಬ್ಬರ ರೋಗನಿರೋಧಕ ಶಕ್ತಿಯ ಮೇಲೆ ಆಧಾರಿತವಾಗಿರುತ್ತದೆ.
ಕೆಮ್ಮು, ಶೀತ, ಜ್ವರ, ತಲೆನೋವು, ಗಂಟಲು ಕಿರಿಕಿರಿ, ಚರ್ಮ ಸಂಬಂಧಿತ ರೋಗ, ಸುಸ್ತು ಹಾಗೂ ಅಸಿಡಿಟಿ ಇವು ಸಾಮಾನ್ಯವಾಗಿ ಒಮಿಕ್ರಾನ್ ಎಕ್ಸ್.ಇ ಸೋಂಕಿತರಲ್ಲಿ ಕಂಡುಬರುವ ಲಕ್ಷಣಗಳು. ಹಾಗೂ, ಇದು ತೀವ್ರಗೊಂಡರೆ ಹೃದಯಾಘಾತಕ್ಕೂ ಕಾರಣವಾಗಬಹುದು ಎಂದು ತಜ್ಞರು ತಿಳಿಸಿದ್ದಾರೆ. ರೋಗಲಕ್ಷಣಗಳು ಕಂಡ ಕೂಡಲೆ ವೈದ್ಯರನ್ನು ಸಂಪರ್ಕಿಸುವುದು ಒಳಿತು.