Site icon Vistara News

ವೈಎಸ್‌ಆರ್‌ಸಿಪಿ ತೊರೆದ ಸಿಎಂ ಜಗನ್‌ ರೆಡ್ಡಿ ತಾಯಿ; ಮಗಳಿದ್ದಲ್ಲಿಗೆ ಹೋಗುತ್ತೇನೆ ಎಂದ ವಿಜಯಮ್ಮ !

Jagan Mohan Reddy

ಹೈದರಾಬಾದ್‌: ಆಂಧ್ರಪ್ರದೇಶ ಆಡಳಿತ ಪಕ್ಷ ವೈಎಸ್‌ಆರ್‌ಸಿಪಿ (ಯುವಜನ ಶ್ರಮಿಕ ರೈತು ಕಾಂಗ್ರೆಸ್‌ ಪಾರ್ಟಿ) ಗೌರವಾನ್ವಿತ ಅಧ್ಯಕ್ಷೆಯಾಗಿದ್ದ ವೈ.ಎಸ್‌.ವಿಜಯಲಕ್ಷ್ಮೀ ಅವರು ಇಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್‌.ಜಗನ್‌ ರೆಡ್ಡಿಯವರ ತಾಯಿ ವಿಜಯಲಕ್ಷ್ಮೀ ಎರಡು ಅವಧಿಗೆ ಶಾಸಕಿಯಾಗಿದ್ದರು. ಇಂದು ಸುದೀರ್ಘವಾಗಿ ನಡೆದ ಪಕ್ಷದ ಸರ್ವಸದಸ್ಯರ ಸಭೆಯಲ್ಲಿ ರಾಜೀನಾಮೆ ಘೋಷಣೆ ಮಾಡಿದ್ದಾರೆ. ವಿಜಯಮ್ಮ, ತಮ್ಮ ಪುತ್ರನ ಪಕ್ಷ ಬಿಟ್ಟು, ಮಗಳು ವೈ.ಎಸ್.ಶರ್ಮಿಳಾ ತೆಲಂಗಾಣದಲ್ಲಿ ಕಟ್ಟಿರುವ ವೈಎಸ್‌ಆರ್‌ ತೆಲಂಗಾಣ ಪಾರ್ಟಿಗೆ ಸೇರಲಿದ್ದಾರೆ. ಅಂದಹಾಗೇ, ವೈಎಸ್‌ಆರ್‌ ತೆಲಂಗಾಣ ಪಾರ್ಟಿಯನ್ನು ಶರ್ಮಿಳಾ ತನ್ನ ತಂದೆ, ಮಾಜಿ ಸಿಎಂ ವೈ.ಎಸ್‌. ರಾಜಶೇಖರ್‌ ರೆಡ್ಡಿ ಸ್ಮರಣಾರ್ಥ 2021ರ ಜುಲೈನಲ್ಲಿ ಸಂಸ್ಥಾಪಿಸಿದ್ದಾರೆ.

ʼನಾನು ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷವನ್ನು ತೊರೆಯಲು ನಿರ್ಧರಿಸಿದ್ದೇನೆ. ಅಲ್ಲಿ ತೆಲಂಗಾಣದಲ್ಲಿ ನನ್ನ ಮಗಳು ಒಬ್ಬಂಟಿಯಾಗಿ ಹೋರಾಡುತ್ತಿದ್ದಾಳೆ. ನಾನು ಅವಳ ತಾಯಿಯಾಗಿ, ರಾಜಶೇಖರ್‌ ರೆಡ್ಡಿಯವರ ಪತ್ನಿಯಾಗಿ ಅವಳೊಟ್ಟಿಗೆ ನಿಲ್ಲಬೇಕು ಎಂದು ಬಲವಾಗಿ ಅನ್ನಿಸುತ್ತಿದೆ. ಹಿಂದೆ ನನ್ನ ಪುತ್ರ ಜಗನ್‌ ರೆಡ್ಡಿ ರಾಜಕೀಯ ಹೋರಾಟ ನಡೆಸುತ್ತಿದ್ದ. ಆಗ ನಾನು ಅವನೊಟ್ಟಿಗೆ ಇದ್ದೆ. ಈಗ ಅವನು ಮುಖ್ಯಮಂತ್ರಿಯಾಗಿ, ಆರಾಮಾಗಿ ಇದ್ದಾನೆ. ಇನ್ನೂ ನಾನು ಅವನೊಂದಿಗೇ ಇದ್ದು, ಅಲ್ಲಿ ನನ್ನ ಮಗಳನ್ನು ಒಬ್ಬಂಟಿಯಾಗಿ ಬಿಟ್ಟರೆ ಅಪರಾಧವಾಗುತ್ತದೆ. ನಾನು ವೈಎಸ್‌ಆರ್‌ಸಿಪಿ ಪಕ್ಷ ಬಿಡಲು ನಿರ್ಧರಿಸಿದ್ದು ಯಾರಿಗಾದರೂ ನೋವುಂಟು ಮಾಡಿದ್ದರೆ, ಅವರ ಬಳಿ ಕ್ಷಮೆ ಕೇಳುತ್ತೇನೆʼ ಎಂದು ಇಂದು ರಾಜೀನಾಮೆ ಸಲ್ಲಿಸುವಾಗ ವಿಜಯಮ್ಮ ತಿಳಿಸಿದ್ದಾರೆ.

ವಿಜಯಮ್ಮ ಎಂದೇ ಖ್ಯಾತರಾಗಿರುವ ವೈ.ಎಸ್‌.ವಿಜಯಲಕ್ಷ್ಮೀ ತಮ್ಮ ಪತಿ ವೈ.ಎಸ್‌.ರಾಜಶೇಖರ್‌ ರೆಡ್ಡಿ 2009ರಲ್ಲಿ ಹೆಲಿಕಾಪ್ಟರ್‌ ಪತನದಲ್ಲಿ ನಿಧನರಾದ ಬಳಿಕ ಅವರ ವಿಧಾನಸಭೆ ಕ್ಷೇತ್ರವಾದ ಪುಲಿವೆಂದುಲಾ (ಕಡಪಾ ಜಿಲ್ಲೆ)ವನ್ನು ಪ್ರತಿನಿಧಿಸಿದ್ದರು. ೨೦೧೧ರಿಂದಲೂ ವೈಎಸ್‌ಆರ್‌ಸಿಪಿ ಗೌರವಾನ್ವಿತ ಅಧ್ಯಕ್ಷರಾಗಿರುವ ಅವರು, ಸದ್ಯ ಸಕ್ರಿಯ ರಾಜಕಾರಣದಿಂದ ದೂರ ಇದ್ದರು. ಇಂದು ವಿದಾಯದ ಭಾಷಣವನ್ನು ಭಾವನಾತ್ಮಕವಾಗಿ ಮಾಡಿದ ಅವರು ʼನನ್ನ ಪುತ್ರ ಜಗನ್‌ ರೆಡ್ಡಿಗೆ ಯಶಸ್ಸು ಸುಲಭವಾಗಿ ಸಿಕ್ಕಿದ್ದಲ್ಲ. ಆತನ ಪರಿಶ್ರಮ ಅಪಾರ. ನನ್ನ ಮಗ ಯುವಜನರಿಗೆಲ್ಲ ಮಾದರಿ. ಬಡಜನರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿ, ಮಾಸ್‌ ಲೀಡರ್‌ ಎನ್ನಿಸಿದ್ದಾನೆ. ನನ್ನ ಆಶೀರ್ವಾದ, ಬೆಂಬಲ ಸದಾ ಅವನ ಮೇಲೆ ಇರುತ್ತದೆʼ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಆಂಧ್ರದಲ್ಲಿ 13 ಹೊಸ ಜಿಲ್ಲೆಗಳು ಅಸ್ತಿತ್ವಕ್ಕೆ: ಕೊಟ್ಟ ಮಾತಿನಂತೆ ನಡೆದುಕೊಂಡ ಸಿಎಂ ಜಗನ್​

Exit mobile version