Site icon Vistara News

ಹೆಲ್ಮೆಟ್‌ ಧರಿಸದಿದ್ರಷ್ಟೇ ಅಲ್ಲ, ಸರಿಯಾಗಿ ಧರಿಸದೆ ಇದ್ದರೂ ಬೀಳುತ್ತೆ   ₹ 2000 ದಂಡ!

ಹೆಲ್ಮೆಟ್‌

ಹೊಸದಿಲ್ಲಿ: ನಾನು ಹೆಲ್ಮೆಟ್‌ ಧರಿಸಿದ್ದೇನೆ.. ಯಾರೂ ದಂಡ ಹಾಕಲಾರರು ಎಂದು ಇನ್ನು ಮುಂದೆ ಧೈರ್ಯವಾಗಿ ಮುನ್ನುಗ್ಗುವಂತಿಲ್ಲ. ಹೆಲ್ಮೆಟ್‌ ಧರಿಸಿದರಷ್ಟೇ ಸಾಲದು, ಅದನ್ನು ಸರಿಯಾಗಿ ಧರಿಸದೆ ಇದ್ದರೆ ಇನ್ನು ಮುಂದೆ 2000 ರೂ.ವರೆಗೂ ದಂಡ ಬೀಳಲಿದೆ.

ದೇಶದಲ್ಲಿ ಅಪಘಾತಗಳು ಹೆಚ್ಚುತ್ತಿವೆ. ಅದರಲ್ಲೂ ದ್ವಿಚಕ್ರ ವಾಹನದಲ್ಲಿ ಸಂಚರಿಸುವವರು ಹೆಚ್ಚೆಚ್ಚು ಅಪಾಯಕ್ಕೆ ಸಿಲುಕುತ್ತಿದ್ದಾರೆ. ಒಂದೊಮ್ಮೆ ಅಪಘಾತ ಸಂಭವಿಸಿದರೂ ದ್ವಿಚಕ್ರ ವಾಹನ ಸವಾರರನ್ನು ಅಪಾಯದಿಂದ ರಕ್ಷಿಸುವಲ್ಲಿ ಪ್ರಧಾನ ಪಾತ್ರ ವಹಿಸುವುದು ಹೆಲ್ಮೆಟ್.‌ ಇದನ್ನು ಇನ್ನಷ್ಟು ಸುರಕ್ಷಿತವಾಗಿ ಹಾಕಿಕೊಳ್ಳುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಸರಕಾರ ಮುಂದಾಗಿದೆ. ಹೀಗಾಗಿ, ಹೆಲ್ಮೆಟ್‌ನ್ನು ಸರಿಯಾಗಿ ಧರಿಸದವರಿಗೆ 1998ರ ಮೋಟಾರು ವಾಹನ ಕಾಯಿದೆಯಡಿ ಸ್ಥಳದಲ್ಲೇ 2000 ರೂ.ವರೆಗೂ ದಂಡ ವಿಧಿಸಲು ಇರುವ ಅವಕಾಶವನ್ನು ಬಳಸಿಕೊಳ್ಳಲಾಗುತ್ತಿದೆ.

ಇದನ್ನೂ ಓದಿ| ರಸ್ತೆ ಅಪಘಾತ: ಹೆಲ್ಮೆಟ್ ಧರಿಸದ ಸಿಆರ್‌ಪಿಎಫ್ ಯೋಧ ಸಾವು

ಯಾವಾಗ ದಂಡ ವಿಧಿಸಬಹುದು?
– ಒಂದೊಮ್ಮೆ ಸವಾರ ಹೆಲ್ಮೆಟ್‌ ಧರಿಸಿದ್ದರೂ ಅದರ ಬಕಲ್‌ಗಳನ್ನು ಸರಿಯಾಗಿ ಕಟ್ಟಿಕೊಳ್ಳದಿದ್ದರೆ 1000 ರೂ. ದಂಡ ವಿಧಿಸಬಹುದು.
– ಹೆಲ್ಮೆಟ್‌ಗೆ ಭಾರತೀಯ ಮಾನದಂಡಗಳ ಬ್ಯೂರೊ ನಿಗದಿ ಮಾಡಿದ ಅಂಶಗಳನ್ನು ಒಳಗೊಂಡಿರಬೇಕು. ಬಿಎಸ್‌ಐ ಸ್ಟಾಂಡರ್ಡ್‌ ಇಲ್ಲದಿದ್ದರೆ ದಂಡ ವಿಧಿಸಬಹುದು.
– ಒಂದೊಮ್ಮೆ ಹೆಲ್ಮೆಟ್‌ ಧರಿಸಿದ್ದರೂ, ಸಿಗ್ನಲ್‌ ಜಂಪ್‌ ಮಾಡಿದರೆ 1000 ರೂ. ದಂಡ ವಿಧಿಸಲಾಗುತ್ತದೆ.

ಯಾಕೆ ಈ ಹೊಸ ನಿಯಮ?
ಬಹಳಷ್ಟು ಮಂದಿ ಸವಾರರು ಕೇವಲ ಪೊಲೀಸರಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದಷ್ಟೇ ಹೆಲ್ಮೆಟ್‌ ಧರಿಸುವ ಪರಿಪಾಠ ಇಟ್ಟುಕೊಂಡಿದ್ದಾರೆ. ನಿಜವೆಂದರೆ ಸಾರ್ವಜನಿಕರು ಪೊಲೀಸರು ದಂಡ ಹಾಕುತ್ತಾರೆ ಎಂಬುದನ್ನು ತಲೆಯಲ್ಲಿ ಇಟ್ಟುಕೊಳ್ಳದೆ ತಮ್ಮ ರಕ್ಷಣೆಗಾಗಿ ಹೆಲ್ಮೆಟ್‌ ಇದೆ ಎಂಬುದನ್ನು ಪರಿಗಣಿಸಿ ಧರಿಸಬೇಕು.
ಹೆಚ್ಚಿನವರು ತಲೆ ಮೇಲೆ ಹೆಲ್ಮೆಟ್‌ ಇದ್ದರೂ ಅದರ ಗುಣಮಟ್ಟ ಚೆನ್ನಾಗಿರುವುದಿಲ್ಲ. ಕೆಲವರು ಅದರ ಬಕಲ್‌ಗಳನ್ನು ಕಟ್ಟಿಕೊಂಡೇ ಇರುವುದಿಲ್ಲ. ಒಂದೊಮ್ಮೆ ಅಪಘಾತ ಸಂಭವಿಸಿದರೆ ಬಕಲ್‌ ಹಾಕದೆ ಇದ್ದರೆ ಅದು ಹೊಡೆತಕ್ಕೆ ಹಾರಿ ಹೋಗುವ ಅಪಾಯ ಜಾಸ್ತಿ ಇರುತ್ತದೆ. ಗುಣಮಟ್ಟ ಕಳಪೆಯಾಗಿದ್ದರೆ ಹೆಲ್ಮೆಟ್‌ ಒಡೆದು ಹೋಗಬಹುದು. ಹೀಗಾಗಿ ಸುರಕ್ಷತೆಯ ನಿಯಮಗಳನ್ನು ಕಠಿಣವಾಗಿ ಪಾಲಿಸುವ ನಿಟ್ಟಿನಲ್ಲಿ ದಂಡ ಪ್ರಯೋಗಕ್ಕೆ ಸರಕಾರ ಮುಂದಾಗಿದೆ.

ಇದನ್ನೂ ಓದಿ| ಬಿಬಿಎಂಪಿ ಲಾರಿ ಹಾಗೂ ಭಾರಿ ವಾಹಗಳಿಗೆ ನಿಯಮ ಜಾರಿ; ರವಿಕಾಂತೇಗೌಡ ಸೂಚನೆ

Exit mobile version