ನವದೆಹಲಿ: ರಾಜಸ್ಥಾನ(Rajasthan), ಮಧ್ಯ ಪ್ರದೇಶ (Madhya Pradesh) ಮತ್ತು ಛತ್ತೀಸ್‌ಗಢ (Chhattisgarh) ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿದು (Assembly Election 2023) ಜಯ ಸಾಧಿಸಿದ್ದ ಬಿಜೆಪಿಯ 12 ಸಂಸದರ ಪೈಕಿ 10 ಸಂಸದರು ಬುಧವಾರ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ(BJP MP Resign). ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ನೇತೃತ್ವದ ನಿಯೋಗವು ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ, ರಾಜೀನಾಮೆ ಪತ್ರಗಳನ್ನು ಸಲ್ಲಿಸಿತು.
ಮಧ್ಯ ಪ್ರದೇಶದಿಂದ ನರೇಂದ್ರ ತೋಮರ್, ಪ್ರಹ್ಲಾದ್ ಪಟೇಲ್, ರಿತಿ ಪಾಠಕ್, ರಾಕೇಶ್ ಸಿಂಗ್, ಉದಯ್ ಪ್ರತಾಪ್ ಸಿಂಗ್, ರಾಜಸ್ಥಾನದಿಂದ ರಾಜ್ಯವರ್ಧನ್ ರಾಥೋಡ್, ಕಿರೋಡಿ ಲಾಲ್ ಮೀನಾ, ದಿಯಾ ಕುಮಾರಿ ಹಾಗೂ ಛತ್ತೀಸ್‌ಗಢದಿಂದ ಅರುಣ್ ಸಾವೋ, ಗೋಮತಿ ಸಾಯಿ ಅವರು ತಮ್ಮ ಸಂಸದ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.
ಮಧ್ಯ ಪ್ರದೇಶದ ವಿಧಾನಸಭೆಗೆ ನಿರಸಿಂಗಪುರ ಕ್ಷೇತ್ರದಿಂದ ಗೆಲವು ಸಾಧಿಸಿರುವ ಪ್ರಹ್ಲಾದ್ ಪಟೇಲ್ ಅವರು, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರೊಂದಿಗೆ ಸಭೆ ನಡೆಸಿದ ಬಳಿಕ ನಾನು ಲೋಕಸಭೆ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಶೀಘ್ರವೇ ಕೇಂದ್ರ ಸಚಿವ ಸಂಪುಟಕ್ಕೂ ರಾಜೀನಾಮೆ ನೀಡಲಿದ್ದೇನೆ ಎಂದು ಹೇಳಿದರು. ರಾಜಸ್ಥಾನದ ಬಾಬಾ ಬಾಲಕನಾಥ್ ಮತ್ತು ರೇಣುಕಾ ಸಿಂಗ್ ಅವರು ಇನ್ನಷ್ಟೇ ರಾಜಿನಾಮೆ ಸಲ್ಲಿಸಬೇಕಿದೆ.
ಎಲ್ಲ ಎಕ್ಸಿಟ್ ಪೋಲ್ಸ್ ಮತ್ತು ಸಮೀಕ್ಷೆಗಳನ್ನು ಮೀರಿ ಭಾರತೀಯ ಜನತಾ ಪಾರ್ಟಿ ಛತ್ತೀಸ್‌ಗಢ ಮತ್ತು ಮಧ್ಯ ಪ್ರದೇಶದಲ್ಲಿ ಗೆಲವು ಸಾಧಿಸಿದೆ. ಇನ್ನೂ ರಾಜಸ್ಥಾನದಲ್ಲೂ ವಿಜಯ ಗಳಿಸಿದೆ. ಈ ಮೂರು ರಾಜ್ಯಗಳಲ್ಲಿ ಗ್ರ್ಯಾಂಡ್ ಓಲ್ಡ್ ಪಾರ್ಟಿ ಕಾಂಗ್ರೆಸ್ ಭಾರೀ ಸೋಲು ಕಂಡಿದೆ. ಆದರೆ, ತೆಲಂಗಾಣದಲ್ಲಿ ಮಾತ್ರ ಕಾಂಗ್ರೆಸ್ ಭರ್ಜರಿ ಜಯಗಳಿಸಿ ಅಧಿಕಾರಕ್ಕೇರಿದೆ. ಕೆ. ಚಂದ್ರಶೇಖರ್ ರಾವ್ ನೇತೃತ್ವದ ಭಾರತ್ ರಾಷ್ಟ್ರ ಸಮಿತಿಯ ಹತ್ತು ವರ್ಷಗಳ ಅವಧಿಯ ಆಡಳಿತ ಕೊನೆಗೊಂಡಿದೆ.
ಈಗಾಗಲೇ, ರಾಜಸ್ಥಾನ, ಛತ್ತೀಸ್‌ಗಢ, ತೆಲಂಗಾಣ ಮುಖ್ಯಮಂತ್ರಿಗಳು ತಮ್ಮ ರಾಜೀನಾಮೆಯನ್ನು ಆಯಾ ರಾಜ್ಯಗಳ ರಾಜ್ಯಪಾಲರಿಗೆ ನೀಡಿದ್ದಾರೆ. ಛತ್ತೀಸ್‌ಗಢ, ಮಧ್ಯ ಪ್ರದೇಶ, ರಾಜಸ್ಥಾನ, ತೆಲಂಗಾಣ ಮತ್ತು ಮಿಜೋರಾಂ ವಿಧಾನಸಭೆ ಚುನಾವಣೆಗಳನ್ನು 2024ರ ಲೋಕಸಭೆ ಚುನಾವಣೆಯ ಸೆಮಿಫೈನಲ್ ಎಂದೇ ಹೇಳಲಾಗಿತ್ತು. ಈ ಸ್ಪರ್ಧೆಯಲ್ಲಿ ಭಾರತೀಯ ಜನತಾ ಪಾರ್ಟಿ ಭಾರೀ ಮುಂದಿದೆ.
ಈ ಸುದ್ದಿಯನ್ನೂ ಓದಿ: Assembly Election 2023: 3 ರಾಜ್ಯಗಳಲ್ಲೂ ಮುಖ್ಯಮಂತ್ರಿಯಾಗಿ ಬಿಜೆಪಿಯಿಂದ ಹೊಸ ಮುಖ