Site icon Vistara News

CRPF Jawans: ಕೇಂದ್ರೀಯ ಮೀಸಲು ಪೊಲೀಸ್ ಪಡೆಯಲ್ಲಿ 10 ಯೋಧರ ಆತ್ಮಹತ್ಯೆ, ಹೆಚ್ಚಿದ ಕಳವಳ

CRPF Jawan

ನವದೆಹಲಿ: ಕೇಂದ್ರೀಯ ಮೀಸಲು ಪೊಲೀಸ್ ಪಡೆಯಲ್ಲಿ(CRPF) 10 ಯೋಧರು ಆತ್ಮಹತ್ಯೆ (jawans suicides) ಮಾಡಿಕೊಂಡಿರುವ ಕಳವಳಕ್ಕೆ ದಾರಿ ಮಾಡಿಕೊಟ್ಟಿದೆ. ಜಗತ್ತಿನ ಅತಿ ದೊಡ್ಡ ಕೇಂದ್ರೀಯ ಸಶಸ್ತ್ರ ಪಡೆಯಲ್ಲಿ (CRPF Jawans) ಕಳೆದ 23 ದಿನದಲ್ಲಿ 10 ಯೋಧರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೆಚ್ಚುತ್ತಿರುವ ಆತ್ಮಹತ್ಯೆಗಳ ಪರಿಣಾಮ ಮೇಲ್ವಿಚಾರಣಾ ಅಧಿಕಾರಿಯು (Supervising Officer) ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಈ ಕುರಿತು ಉನ್ನತ ಮಟ್ಟದ ನಿರ್ಧಾರವನ್ನು ಕೈಗೊಳ್ಳಲು ಸಿಆರ್‌ಪಿಎಫ್‌ಗೆ ಪ್ರೇರೇಪಿಸಬಹುದು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಸಿಆರ್‌ಪಿಎಫ್‌ನ ಯೋಧರು ಮತ್ತು ಸಿಬ್ಬಂದಿಯ ಆತ್ಮಹತ್ಯೆಗಳು ಕೆಲವು ವರ್ಷಗಳಿಂದ ಆತಂಕಕಾರಿ ವಿಷಯವಾಗಿದೆ. ಕೇಂದ್ರ ಸಶಸ್ತ್ರ ಪಡೆಯು 2018 ಮತ್ತು 2022 ರ ನಡುವೆ ಆತ್ಮಹತ್ಯೆಯಿಂದಾಗಿ 194 ಸಾವುಗಳನ್ನು ದಾಖಲಿಸಿತ್ತು. ಇತ್ತೀಚಿನ 10 ಆತ್ಮಹತ್ಯೆಯ ಸಾವುಗಳು ಸಿಆರ್‌ಪಿಎಫ್‌ ವಿವಿಧ ವಿಭಾಗಗಳಲ್ಲಿ ವರದಿಯಾಗಿವೆ. ವಿಶೇಷ ವಿಭಾಗ, ನಕ್ಸಲ್ ವಿರೋಧಿ ಘಟಕ ಕೋಬ್ರಾ ಮತ್ತು ಜೆ & ಕೆ ಘಟಕಗಳು, ಜೆ & ಕೆ, ಅಸ್ಸಾಂ, ಒಡಿಶಾ ಮತ್ತು ಜಾರ್ಖಂಡ್‌ನ ಪುಲ್ವಾಮಾ ಮತ್ತು ಶ್ರೀನಗರಪ್ರದೇಶಗಳಲ್ಲಿ ಯೋಧರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋಬ್ರಾ ಫೋರ್ಸ್‌ನಲ್ಲಂತೂ ಇನ್ಸ್‌ಪೆಕ್ಟರ್‌ ಮಟ್ಟದ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹೆಚ್ಚುತ್ತಿರುವ ಆತ್ಮಹತ್ಯೆಗಳ ವಿಷಯವನ್ನು ಎಲ್ಲಾ ಹಂತಗಳಲ್ಲಿ ಚರ್ಚಿಸಲಾಗಿದೆ. ಇತ್ತೀಚಿನ ಚಿಂತನ್ ಶಿಬಿರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಯೋಧರಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಮಾಣವನ್ನು ತಡೆಯಲು ತೆಗೆದುಕೊಂಡ ನಿರ್ಧಾರಗಳ ಪೈಕಿ, ಮೇಲ್ವಿಚಾರಣಾ ಅಧಿಕಾರಿಗಳು ಇಂಥ ಸಾವುಗಳನ್ನು ತಡೆಯಲು ಹೆಚ್ಚಿನ ಜವಾಬ್ದಾರಿಯನ್ನು ಹೊರಬೇಕು ಎಂದು ತಿಳಿಸಲಾಗಿದೆ. ಅಥವಾ ಅವರನ್ನೇ ಹೊಣೆ ಮಾಡಬಹುದು.

ಯಾವುದೇ ಮೇಲ್ವಿಚಾರಣೆ ಅಧಿಕಾರಿಯ ವಾರ್ಷಿಕ ವರದಿಯಲ್ಲಿ ಆತ್ಮಹತ್ಯೆಗಳ ಕುರಿತು ದಾಖಲಿಸಲ್ಪಟ್ಟರೆ ಅಂಥ ಅಧಿಕಾರಿಯ ಇಮೇಜ್‌ಗೆ ಧಕ್ಕೆ ಬರಲಿದೆ. ಅಲ್ಲದೇ ಅವರ ಪ್ರಮೋಷನ್‌ಗೂ ಕುತ್ತು ಬರಲಿದೆ ಎಂದು ಹೆಸರು ಹೇಳಲಿಚ್ಛಿಸದ ಸಿಆರ್‌ಪಿಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆಂದು ವರದಿಯಾಗಿದೆ.

ಈ ಸುದ್ದಿಯನ್ನೂ ಓದಿ: ಛತ್ತೀಸ್​ಗಢ್​​ನಲ್ಲಿ ಮತ್ತೆ ನಕ್ಸಲರ ಕ್ರೌರ್ಯ; ಬೆಟ್ಟದ ಬುಡದಲ್ಲಿ ಐಇಡಿ ಸ್ಫೋಟ, ಸಿಆರ್​ಪಿಎಫ್​​ನ ಇಬ್ಬರು ಯೋಧರಿಗೆ ಗಾಯ

ಅಧಿಕೃತ ಅಂಕಿಅಂಶಗಳ ಪ್ರಕಾರ 2018 ರಿಂದ 2021ರವರೆಗಿನ ನಾಲ್ಕು ವರ್ಷಗಳ ಅವಧಿಯಲ್ಲಿ ಸಿಆರ್‌ಪಿಎಫ್‌ನಲ್ಲಿ ಆತ್ಮಹತ್ಯೆಗಳು ಆತಂಕಕಾರಿ ಏರಿಕೆ ದಾಖಲಾಗಿದೆ. 2018 ರಲ್ಲಿ 36 ಯೋಧರು ಆತ್ಮಹತ್ಯೆಯಿಂದ ಮೃತಪಟ್ಟಿದ್ದಾರೆ. 2019ರಲ್ಲಿ 40, 2020ರಲ್ಲಿ 54 ಯೋಧರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅದೇ ರೀತಿ, 2021ರಲ್ಲಿ 57 ಸೈನಿಕರು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ. 2022ರಲ್ಲಿ ಈ ಸಂಖ್ಯೆ 43 ಆಗಿತ್ತು. ಈ ವರ್ಷ ಕಳೆದ ಆಗಸ್ಟ್ 12ರಿಂದ ಸೆಪ್ಟೆಂಬರ್ 4ರವರೆಗೆ 10 ಯೋಧರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವರ್ಷ ಇಲ್ಲಿವರೆಗೆ ಒಟ್ಟು 34 ಯೋಧರು ಸಾವನ್ನಪ್ಪಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version