Site icon Vistara News

Heart Attack: ನವರಾತ್ರಿ ಹಿನ್ನೆಲೆ ಗರ್ಬಾ ನೃತ್ಯ; 24 ಗಂಟೆಯಲ್ಲಿ ಹೃದಯಾಘಾತಕ್ಕೆ 10 ಜನ ಬಲಿ

Garba Dance In Gujarat

10 heart attack deaths in 24 hours at garba events in Gujarat

ಗಾಂಧಿನಗರ: ದೇಶಾದ್ಯಂತ ಸಂಭ್ರಮದಿಂದ ನವರಾತ್ರಿ ಆಚರಣೆ (Navaratri Celebration) ಮಾಡಲಾಗುತ್ತಿದೆ. ವಿಜಯದಶಮಿಗೆ ಕೆಲವೇ ದಿನಗಳು ಬಾಕಿ ಇದ್ದು, ಎಲ್ಲೆಡೆ ನವರಾತ್ರಿ ಸಂಭ್ರಮ ಮನೆಮಾಡಿದೆ. ಅದರಲ್ಲೂ, ಗುಜರಾತ್‌ನಲ್ಲಿ (Gujarat) ಅದ್ಧೂರಿಯಾಗಿ ನವರಾತ್ರಿ ಆಚರಣೆ ಮಾಡಲಾಗುತ್ತಿದೆ. ಆದರೆ, ನವರಾತ್ರಿ ಹಿನ್ನೆಲೆಯಲ್ಲಿ ಗುಜರಾತ್‌ನಾದ್ಯಂತ ಆಚರಿಸುವ ಗರ್ಬಾ ಸಾಂಪ್ರದಾಯಿಕ ನೃತ್ಯದ (Garba Events) ವೇಳೆ ಕಳೆದ 24 ಗಂಟೆಯಲ್ಲಿ ಹೃದಯಾಘಾತದಿಂದ 10 ಜನ ಮೃತಪಟ್ಟಿದ್ದಾರೆ.

ಗುಜರಾತ್‌ನ ಬರೋಡಾ ಸೇರಿ ಹಲವೆಡೆ ಗರ್ಬಾ ಹಾಡು, ನೃತ್ಯದ ವೇಳೆ ಜೋರಾದ ಸಂಗೀತದ ಶಬ್ದದಿಂದಾಗಿ ಹೆಚ್ಚಿನ ಜನರಿಗೆ ಹೃದಯಾಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಅದರಲ್ಲೂ, ಬಾಲಕರು, ಯುವಕರು ಹಾಗೂ ಮಧ್ಯವಯಸ್ಕರೇ ಮೃತಪಟ್ಟಿರುವುದು ಆತಂಕ ಹೆಚ್ಚಿಸಿದೆ. ಇದರಿಂದಾಗಿ ಜನ ಸಂಭ್ರಮದಿಂದ ಗರ್ಬಾ ನೃತ್ಯದ ಆಚರಣೆಯಲ್ಲಿ ಪಾಲ್ಗೊಳ್ಳಲು ಭಯಪಡುವಂತಾಗಿದೆ ಎಂದು ತಿಳಿದುಬಂದಿದೆ.

ಬರೋಡಾದ ದಭೋಯಿಯಲ್ಲಿ 13 ವರ್ಷದ ಬಾಲಕನು ಗರ್ಬಾ ನೃತ್ಯದ ವೇಳೆ ಕುಸಿದುಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟೊತ್ತಿಗಾಗಲೇ ಬಾಲಕನು ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾನೆ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ. ಇನ್ನು ಅಹ್ಮದಾಬಾದ್‌ನಲ್ಲೂ ಗರ್ಬಾ ಆಚರಣೆ ವೇಳೆ 24 ವರ್ಷದ ಯುವಕ ಕುಸಿದು ಮೃತಪಟ್ಟಿದ್ದಾನೆ. ಕಪಾಡ್ವಂಜ್‌ನಲ್ಲೂ ಹೃದಯಾಘಾತಕ್ಕೆ 17 ವರ್ಷದ ಬಾಲಕ ಬಲಿಯಾಗಿದ್ದಾನೆ. ಹೀಗೆ ಕಳೆದ 24 ಗಂಟೆಯಲ್ಲಿ ಹೃದಯಾಘಾತದಿಂದ 10 ಮಂದಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ: Kundara Johny: ಮಲಯಾಳಂ ಖ್ಯಾತ ನಟ ಕುಂದರ ಜಾನಿ ಹೃದಯಾಘಾತದಿಂದ ನಿಧನ

ನವರಾತ್ರಿ ಆರಂಭವಾದ ಮೊದಲ ಆರು ದಿನಗಳಲ್ಲಿ ಹೃದಯ ಸಂಬಂಧಿ ಸಮಸ್ಯೆ ಕುರಿತು ಆಂಬುಲೆನ್ಸ್‌ ಸೇವೆ ಒದಗಿಸುವ 108 ಸಂಖ್ಯೆಗೆ 521 ಕರೆಗಳು ಬಂದಿವೆ. ಹಾಗೆಯೇ, ಉಸಿರಾಟದ ಸಮಸ್ಯೆ ಎಂದು 609 ಮಂದಿ ಕರೆ ಮಾಡಿದ್ದಾರೆ. ಎಲ್ಲರೂ ಗರ್ಬಾ ನೃತ್ಯ ನಡೆಯುವ ಸಂಜೆ 6 ಗಂಟೆಯಿಂದ ತಡರಾತ್ರಿ 2 ಗಂಟೆವರೆಗೆ ಕರೆ ಮಾಡಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಒಟ್ಟಿನಲ್ಲಿ ಸಂಭ್ರಮ, ಸಂತಸವನ್ನು ಮೂಡಿಸಬೇಕಾದ ನವರಾತ್ರಿಯ ಗರ್ಬಾ ನೃತ್ಯವು ಹಲವು ಜನರ ಜೀವನಕ್ಕೇ ಕುತ್ತು ತಂದಿರುವುದು ಬೇಸರದ ಸಂಗತಿಯಾಗಿದೆ.

Exit mobile version