ರಾಯ್ಗಢ್: ಮಹಾರಾಷ್ಟ್ರದ ರಾಯ್ಗಢ್ನ ಖಲಾಪುರದ ಇರ್ಸಲ್ವಾಡಿ ಗ್ರಾಮದ ಭೂಕುಸಿತದಲ್ಲಿ (Raigad Landslide) ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಕುಸಿದುಬಿದ್ದ ಮಣ್ಣಿನಡಿ ಸುಮಾರು 10 ಕುಟುಂಬಗಳ ಜನರು ಸಿಲುಕಿದ್ದರು. ಕೆಲವರನ್ನು ರಕ್ಷಿಸಲಾಗಿದೆ, ಆದರೆ ಇನ್ನೂ ಅನೇಕರು ಮಣ್ಣಿನಡಿಯೇ ಸಿಲುಕಿದ್ದಾರೆ. ರಾಜ್ಯ ಸಚಿವರಾದ ದಾದಾ ಭುಸೆ ಮತ್ತು ಉದಯ್ ಸಮಂತ್ ಅವರು ಭೂಕುಸಿತವಾದ ಸ್ಥಳದಲ್ಲೇ ಇದ್ದು, ರಕ್ಷಣಾ ಕಾರ್ಯಾಚರಣೆಯನ್ನು ಗಮನಿಸುತ್ತಿದ್ದಾರೆ. ಎನ್ಡಿಆರ್ಎಫ್, ರಾಜ್ಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ ಜನರ ರಕ್ಷಣೆಯಲ್ಲಿ ತೊಡಗಿದ್ದಾರೆ. ಸಿಕ್ಕಾಪಟೆ ಮಳೆಯಾಗುತ್ತಿರುವುದರಿಂದ (Maharashtra Rain) ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ.
ಖಲಾಪುರದ ಇರ್ಸಲ್ವಾಡಿ ಗ್ರಾಮದಲ್ಲಿ ಭೂಕುಸಿತವಾಗಿರುವ ಸ್ಥಳ, ಗುಡ್ಡಗಾಡು ಪ್ರದೇಶವಾಗಿದೆ. ಈಗಿನ ಪರಿಸ್ಥಿತಿಯಲ್ಲಿ ಅಲ್ಲಿಗೆ ಹೋಗಲು ಎರಡು ತಾಸು ಬೆಟ್ಟ ಹತ್ತಬೇಕು ಎಂದು ಜಿಲ್ಲಾಧಿಕಾರಿ ಯೋಗೇಶ್ ಮಾಸೆ ತಿಳಿಸಿದ್ದಾರೆ ಬುಧವಾರ ರಾತ್ರಿ 11.30ರಿಂದ ಪ್ರಾರಂಭವಾದ ಭೂಕುಸಿತ, ರಾತ್ರಿ 12ಗಂಟೆವರೆಗೂ ಮುಂದುವರಿದಿತ್ತು. ಹೀಗೆ ಅರ್ಧಗಂಟೆ ಭೂಮಿ ಕುಸಿದ ಬಳಿಕ ಅಪಾರ ಹಾನಿಯಾಗಿದೆ. ಈ ಇರ್ಸಲ್ವಾಡಿ ಗ್ರಾಮದಲ್ಲಿ 46-50 ಮನೆಗಳು ಇವೆ. 25 ಜನರನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಕಾಲಕಾಲಕ್ಕೆ ಅಲ್ಲಿನ ಪರಿಸ್ಥಿತಿಯ ವರದಿ ಪಡೆಯುತ್ತಿದ್ದಾರೆ ಎಂದೂ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Rain News | ಮಹಾರಾಷ್ಟ್ರ ಮಳೆಗೆ ಬೆಳಗಾವಿ ತತ್ತರ; ಅಪಾಯಮಟ್ಟದತ್ತ ನದಿಗಳು, ಸೇತುವೆಗಳು ಜಲಾವೃತ
ಅಗ್ನಿಶಾಮಕ ದಳದ ಅಧಿಕಾರಿ ಸಾವು
ಮಹಾರಾಷ್ಟ್ರದ ರಾಯ್ಗಢ್ನ ಖಲಾಪುರದ ಇರ್ಸಲ್ವಾಡಿ ಗ್ರಾಮದ ಭೂಕುಸಿತ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಗೆ ನಿಯೋಜಿತಗೊಂಡಿದ್ದ ಅಗ್ನಿ ಶಾಮಕ ದಳದ ಸಿಬ್ಬಂದಿ ಶಿವರಾಮ್ ಧುಮನೆ(50) ಎಂಬುವರು ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ. ಇವರು ನವಿ ಮುಂಬಯಿ ಮುನ್ಸಿಪಲ್ ಕಾರ್ಪೋರೇಶನ್ ಬೇಲಾಪುರ ಅಗ್ನಿಶಾಮಕದಳದಲ್ಲಿ ಸಹಾಯಕ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಇವರು ಜನರ ರಕ್ಷಣಾ ಕಾರ್ಯಾಚರಣೆಗಾಗಿ ಇರ್ಸಲ್ವಾಡಿ ಗ್ರಾಮದ ಗುಡ್ಡವನ್ನು ಹತ್ತುತ್ತಿದ್ದ ವೇಳೆ, ಎದೆನೋವು ಕಾಣಿಸಿಕೊಂಡಿತ್ತು. ಒಮ್ಮೆಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಅವರ ಮೃತದೇಹವನ್ನು ಖೋಪೊಲಿಯಲ್ಲಿರುವ ಅವರ ಹುಟ್ಟೂರಿಗೆ ಕಳಿಸುವ ಸಿದ್ಧತೆ ನಡೆಯುತ್ತಿದೆ.