Site icon Vistara News

Bridge Collapse: ಗುಜರಾತ್‌ನಲ್ಲಿ ಮತ್ತೊಂದು ಸೇತುವೆ ಕುಸಿತ; 10 ಜನ ಜಲಸಮಾಧಿ

Gujarat Bridge Collapse

10 People Swept Away As Bridge Collapses In Gujarat, 4 Rescued

ಗಾಂಧಿನಗರ: ಕಳೆದ ವರ್ಷ ಗುಜರಾತ್‌ನ ಮೊರ್ಬಿಯಲ್ಲಿ ಸೇತುವೆ ಕುಸಿದು (Morbi Bridge Collapse) 130ಕ್ಕೂ ಅಧಿಕ ಜನ ಮೃತಪಟ್ಟ ಘಟನೆ ದೇಶವನ್ನೇ ಬೆಚ್ಚಿಬೀಳಿಸಿದ ಬೆನ್ನಲ್ಲೇ ಗುಜರಾತ್‌ನಲ್ಲಿ ಮತ್ತೊಂದು ಸೇತುವೆ (Bridge Collapse ಕುಸಿದು 10 ಜನ ಜಲಸಮಾಧಿಯಾಗಿದ್ದಾರೆ. ಸುರೇಂದ್ರನಗರ ಜಿಲ್ಲೆಯ (Surendranagar District) ವಸ್ತಾದಿ ಎಂಬ ಪ್ರದೇಶದಲ್ಲಿ ಸೇತುವೆ ಕುಸಿದಿದ್ದು, ಇದುವರೆಗೆ ನಾಲ್ವರನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ.

ಭೊಗಾವೊ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಕುಸಿದ ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಸಿಬ್ಬಂದಿ ಆಗಮಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಪೊಲೀಸರು ಹಾಗೂ ಸ್ಥಳೀಯರು ಕೂಡ ಜನರ ರಕ್ಷಣೆಯಲ್ಲಿ ನಿರತರಾಗಿದ್ದಾರೆ. ಇನ್ನೂ ಹಲವು ಜನ ನಾಪತ್ತೆಯಾಗಿರುವ ಶಂಕೆ ಇರುವ ಕಾರಣ ಸಿಬ್ಬಂದಿಯು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ. ರಕ್ಷಿಸಿದ ನಾಲ್ವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಮತ್ತೊಂದೆಡೆ, ಸೇತುವೆ ಕುಸಿತದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸೇತುವೆ ಕುಸಿಯಲು ಕಾರಣವೇನು?

ಭೋಗಾವೊ ನದಿಗೆ ನಿರ್ಮಿಸಿರುವ ಸೇತುವೆಯು ತುಂಬ ಹಳೆಯದಾಗಿದ್ದು, ಇದರ ಮೇಲೆ ಬೃಹತ್‌ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಆದರೆ, ಇದರ ಮೇಲೆ ಡಂಪರ್‌ ಟ್ರಕ್‌ ಚಲಿಸಿದ ಕಾರಣ ಸೇತುವೆಯು ಏಕಾಏಕಿ ಕುಸಿದಿದೆ. ಡಂಪರ್‌ ಜತೆಗೆ ಬೈಕ್‌ ಸವಾರರು ಕೂಡ ನದಿ ನೀರಿಗೆ ಬಿದ್ದಿದ್ದಾರೆ. ಬೃಹತ್‌ ವಾಹನಗಳ ಸಂಚಾರ ನಿಷೇಧಿಸಿದ್ದರೂ ಡಂಪರ್‌ ಟ್ರಕ್‌ ಇದರ ಮೇಲೆ ಹೋಗಿದ್ದೇ ಸೇತುವೆ ಕುಸಿಯಲು ಕಾರಣ ಎನ್ನಲಾಗಿದೆ. ಆದಾಗ್ಯೂ, ಶಿಥಿಲಗೊಂಡಿದ್ದ ಸೇತುವೆಯ ದುರಸ್ತಿಗೆ ಸರ್ಕಾರ ಕ್ರಮ ತೆಗೆದುಕೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Bihar Bridge Collapse: ರೈಲು ದುರಂತ ಬೆನ್ನಲ್ಲೇ ಬಿಹಾರದಲ್ಲಿ ಸೇತುವೆ ಕುಸಿತ; 1,700 ಕೋಟಿ ರೂ. ಗಂಗಾ ನದಿ ಪಾಲು

ಕಳೆದ ವರ್ಷ ಗುಜರಾತ್‌ನ ಮೊರ್ಬಿಯಲ್ಲಿರುವ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ತೂಗುಸೇತುವೆ ದುರಂತ ಸಂಭವಿಸಿತ್ತು. ಮೊರ್ಬಿ ಸೇತುವೆ ಕುಸಿತ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿತ್ತು. ದುರಂತದಲ್ಲಿ 130ಕ್ಕೂ ಅಧಿಕ ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದರು. ಈ ಸೇತುವೆ ದುರಸ್ತಿಯಾದ ಒಂದೇ ವಾರದಲ್ಲಿ ಸೇತುವೆ ಕುಸಿದ ಕುರಿತು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು. ಕೆಲ ದಿನಗಳ ಹಿಂದಷ್ಟೇ ಬಿಹಾರದಲ್ಲೂ ಒಂದು ಸೇತುವೆ ಕುಸಿದಿತ್ತು.

Exit mobile version