Site icon Vistara News

Maggi Tragedy: ಮ್ಯಾಗಿ ತಿಂದ ಬಳಿಕ 10 ವರ್ಷದ ಬಾಲಕ ಸಾವು, ಒಂದೇ ಕುಟುಂಬದ ಐವರು ಅಸ್ವಸ್ಥ

Maggi Tragedy

10-year-old dies after consuming Maggi in Uttar Pradesh, 6 others hospitalised

ಲಖನೌ: ಉತ್ತರ ಪ್ರದೇಶದ ಪಿಲಿಭಿಟ್‌ನಲ್ಲಿ (Pilibhit) ಮ್ಯಾಗಿ ಸೇವಿಸಿ 10 ವರ್ಷದ ಬಾಲಕನೊಬ್ಬ (Maggi Tragedy) ಮೃತಪಟ್ಟಿದ್ದಾನೆ. ಒಂದೇ ಕುಟುಂಬದ ಐವರು ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಜಾರ ಪೊಲೀಸ್‌ ಠಾಣೆ ವ್ಯಾಪ್ತಿಯ ರಾಹುಲ್‌ ನಗರದಲ್ಲಿ (Rahul Nagar) ಘಟನೆ ನಡೆದಿದೆ. ಪುರಾನ್‌ಪುರದ ಸಿಎಚ್‌ಸಿಯಲ್ಲಿ ಐವರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಡೆಹ್ರಾಡೂನ್‌ನ ಸೀಮಾ ಎಂಬುವರು ಪತಿ, ಮೂವರು ಮಕ್ಕಳ ಜತೆ ತಮ್ಮ ತವರು ಮನೆ ಇರುವ ರಾಹುಲ್‌ ನಗರಕ್ಕೆ ಆಗಮಿಸಿದರು. ಕಳೆದ ಗುರುವಾರ (ಮೇ 9) ರಾತ್ರಿ ಮೂವರು ಮಕ್ಕಳು ಸೇರಿ ಎಲ್ಲರೂ ಮ್ಯಾಗಿ ಹಾಗೂ ಅನ್ನ ಊಟ ಮಾಡಿದ್ದಾರೆ. ರಾತ್ರಿ ಮಲಗಿದವರೇ ಒಬ್ಬೊಬ್ಬರಾಗಿ ಅಸ್ವಸ್ಥರಾಗಿದ್ದಾರೆ. ಎಲ್ಲರಿಗೂ ವಾಂತಿ-ಭೇದಿ ಕಾಣಿಸಿಕೊಂಡಿದೆ. ಶುಕ್ರವಾರ ಬೆಳಗ್ಗೆ ಎಲ್ಲರೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೆ 10 ವರ್ಷದ ಬಾಲಕನು ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಚಿಕನ್‌ ಶವರ್ಮಾ ತಿಂದು ಯುವಕ ಸಾವು

ಮಹಾರಾಷ್ಟ್ರದಲ್ಲಿ ಕೆಲ ದಿನಗಳ ಹಿಂದಷ್ಟೇ ಚಿಕನ್‌ ಶವರ್ಮಾ ಸೇವಿಸಿ 19 ವರ್ಷದ ಯುವಕ ಮೃತಪಟ್ಟಿದ್ದ. ಮೃತ ಯುವಕನನ್ನು ಪ್ರಥಮೇಶ್‌ ಭೋಕ್ಸೆ ಎಂದು ಗುರುತಿಸಲಾಗಿತ್ತು. ಮೇ 3ರಂದು ಸಾಯಂಕಾಲ ಮುಂಬೈನ ಮಾಂಖುರ್ದ್‌ ಪ್ರದೇಶದಲ್ಲಿರುವ ಬೀದಿ ಬದಿಯ ಅಂಗಡಿಯೊಂದಕ್ಕೆ ತೆರಳಿದ ಯುವಕನು ಚಿಕನ್‌ ಶವರ್ಮಾ ತಿಂದಿದ್ದಾನೆ. ಇದಾದ ಬಳಿಕ ಆತನು ಎಂದಿನಂತೆ ಮನೆಗೆ ತೆರಳಿದ್ದಾನೆ. ಮನೆಗೆ ತೆರಳಿದ ಮರುದಿನವೇ ಆತನಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಪದೇಪದೆ ವಾಂತಿ ಮಾಡಿಕೊಂಡಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ತೀವ್ರವಾಗಿ ಅಸ್ವಸ್ಥಗೊಂಡಿದ್ದ ಯುವಕನು ಮಂಗಳವಾರ (ಮೇ 7) ಬೆಳಗ್ಗೆ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಬೀದಿ ಬದಿ ಅಂಗಡಿ ಮಾಲೀಕರು ಚಿಕನ್‌ ಶವರ್ಮಾ ತಯಾರಿಸುವಾಗ ಅದಕ್ಕೆ ಕೊಳೆತ ಮಾಂಸವನ್ನು ಬೆರೆಸಿದ್ದೇ ಯುವಕ ಮೃತಪಟ್ಟು, ಐವರು ಅಸ್ವಸ್ಥರಾಗಲು ಕಾರಣ ಎಂದು ತಿಳಿದುಬಂದಿತ್ತು. ಐವರು ಅಸ್ವಸ್ಥರು ಕೆಇಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಪ್ರಥಮೇಶ್‌ ಭೋಕ್ಸೆ ಸಾವಿನ ಬಳಿಕ ಅಂಗಡಿ ಮಾಲೀಕರ ವಿರುದ್ಧ ಆತನ ಪೋಷಕರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದಾದ ಬಳಿಕ ಇಬ್ಬರು ಅಂಗಡಿ ಮಾಲೀಕರನ್ನು ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ: Food Poisoning: ಮದುವೆ ಮನೆ ಊಟ ತಿಂದವರಿಗೆ ವಾಂತಿ, ಭೇದಿ; ನೂರಾರು ಮಂದಿ ಅಸ್ವಸ್ಥ

Exit mobile version