Site icon Vistara News

10 ವರ್ಷದಿಂದ ಬ್ಯಾಂಕ್‌ಗಳಲ್ಲಿ ನಿಷ್ಕ್ರಿಯವಾಗಿ ಉಳಿದ ನಿಮ್ಮ ಹಣ ಜೂನ್‌ 1ರ ನಂತರ ಏನಾಗುತ್ತದೆ? ಇಲ್ಲಿದೆ ಮಾಹಿತಿ

Unclaimed Deposits

Unclaimed Deposits

ನವದೆಹಲಿ: ದೇಶಾದ್ಯಂತ ಬ್ಯಾಂಕ್‌ ಖಾತೆಗಳಲ್ಲಿ 10 ವರ್ಷದಿಂದ ನಿಷ್ಕ್ರಿಯವಾಗಿ ಉಳಿದ ಠೇವಣಿಯ ಮೊತ್ತದ (Unclaimed Deposits) ವಿಲೇವಾರಿಗೆ ಜೂನ್‌ 1ರಿಂದ ಭಾರತೀಯ ರಿಸರ್ವ್‌ ಬ್ಯಾಂಕ್‌ (RBI) ಅಭಿಯಾನ ಆರಂಭಿಸಲಿದೆ. ‘100 ದಿನ 100 ಪಾವತಿ’ (100 Days 100 Pays) ಎಂಬುದು ಆರ್‌ಬಿಐನ ಹೊಸ ಅಭಿಯಾನವಾಗಿದ್ದು, ದೇಶಾದ್ಯಂತ ಬ್ಯಾಂಕ್‌ಗಳ ಖಾತೆಗಳಲ್ಲಿ ಉಳಿದ ಠೇವಣಿಯನ್ನು ನಿಜವಾದ ಖಾತೆದಾರರು ಅಥವಾ ವಾರಸುದಾರರಿಗೆ ನೀಡುವುದು ಆರ್‌ಬಿಐ ಗುರಿಯಾಗಿದೆ. ಆರ್‌ಬಿಐ ಅಭಿಯಾನಕ್ಕೆ ದೇಶದ ಎಲ್ಲ ಬ್ಯಾಂಕ್‌ಗಳು ಸಹಕಾರ ನೀಡಲಿವೆ.

ಏನಿದು ನಿಷ್ಕ್ರಿಯ ಖಾತೆ?

10 ವರ್ಷದಿಂದ ಬ್ಯಾಂಕ್‌ಗಳಲ್ಲಿ ಉಳಿತಾಯ ಅಥವಾ ಕರೆಂಟ್‌ ಅಕೌಂಟ್‌ಗಳು ನಿಷ್ಕ್ರಿಯವಾಗಿದ್ದರೆ, ಆ ಖಾತೆಗಳಲ್ಲಿ ಇರುವ ಹಣವನ್ನು Unclaimed Deposit ಎನ್ನುತ್ತಾರೆ. ಬ್ಯಾಂಕ್‌ ಖಾತೆಗೆ ಹಣ ಜಮೆ ಮಾಡದಿರುವುದು, ವಿತ್‌ಡ್ರಾ ಮಾಡದಿರುವುದು ಸೇರಿ ಯಾವುದೇ ಚಟುವಟಿಕೆ ಇರುವುದಿಲ್ಲ. ಖಾತೆದಾರರ ನಿಧನ, ವಿದೇಶಕ್ಕೆ ತೆರಳಿ ಅಲ್ಲಿಯೇ ವಾಸಿಸುತ್ತಿರುವುದು, ಬ್ಯಾಂಕ್‌ ಖಾತೆಯನ್ನೇ ಮರೆತಿರುವುದು ಸೇರಿ ಹಲವು ಕಾರಣಗಳಿಂದ ಬ್ಯಾಂಕ್‌ ಖಾತೆಗಳು ನಿಷ್ಕ್ರಿಯವಾಗಿರುತ್ತವೆ. ಇಂತಹ ಖಾತೆಗಳಲ್ಲಿ ಉಳಿದ ಹಣದ ವಿಲೇವಾರಿಗೆ ಆರ್‌ಬಿಐ ಅಭಿಯಾನ ಆರಂಭಿಸಿದೆ.

ಹೀಗಿರಲಿದೆ ಅಭಿಯಾನ

ಆರ್‌ಬಿಐನ 100 ದಿನ 100 ಪಾವತಿ ಅಭಿಯಾನದ ಪ್ರಕಾರ, ದೇಶಾದ್ಯಂತ ಪ್ರತಿಯೊಂದು ಜಿಲ್ಲೆಯಲ್ಲಿ ಕ್ಲೇಮ್‌ ಆಗದೆ ಉಳಿದ ಠೇವಣಿಯನ್ನು ಖಾತೆದಾರರು ಅಥವಾ ಅವರ ವಾರಸುದಾರರಿಗೆ ಹಿಂತಿರುಗಿಸಲಾಗುತ್ತದೆ. ಜೂನ್‌ 1ರಿಂದ ದೇಶದ ಪ್ರತಿಯೊಂದು ಜಿಲ್ಲೆಯ, ಪ್ರತಿಯೊಂದು ಬ್ಯಾಂಕ್‌ನ ಖಾತೆಗಳಲ್ಲಿ ಉಳಿದ ಬೃಹತ್‌ ಮೊತ್ತದ 100 ಠೇವಣಿಯ ಮೊತ್ತವನ್ನು ಖಾತೆ ತೆರೆದವರಿಗೆ ಅಥವಾ ಅವರ ವಾರಸುದಾರರಿಗೆ ನೀಡಲಾಗುತ್ತದೆ. ಖಾತೆದಾರರು ಅಥವಾ ವಾರಸುದಾರರನ್ನು ಹುಡುಕಿ, ಅವರಿಗೆ ನೀಡುವುದು ಬ್ಯಾಂಕ್‌ಗಳ ಜವಾಬ್ದಾರಿಯಾಗಿದೆ.

ಠೇವಣಿ ಕ್ಲೇಮ್‌ ಮಾಡದಿದ್ದರೆ ಏನಾಗುತ್ತದೆ?

ಬ್ಯಾಂಕ್‌ಗಳಲ್ಲಿರುವ ಠೇವಣಿಯ ಮೊತ್ತವನ್ನು 10 ವರ್ಷದೊಳಗೆ ವಿತ್‌ಡ್ರಾ ಮಾಡದಿದ್ದರೆ, ಆ ಹಣವನ್ನು ಆರ್‌ಬಿಐನ ಡೆಪಾಸಿಟರ್‌ ಎಜುಕೇಷನ್‌ ಆ್ಯಂಡ್‌ ಅವೇರ್‌ನೆಸ್‌ (DEA) ನಿಧಿಗೆ ವರ್ಗಾಯಿಸಲಾಗುತ್ತದೆ. ಬಳಿಕ ಆರ್‌ಬಿಐ ಹಲವು ಜಾಗೃತಿ ಕಾರ್ಯಕ್ರಮಗಳ ಮೂಲಕ ನಿಜವಾದ ಖಾತೆದಾರರನ್ನು ಹುಡುಕಿ, ಅವರಿಗೆ ಹಣ ನೀಡುತ್ತದೆ. ಕೆಲವು ತಿಂಗಳ ಹಿಂದೆಯೇ ಬ್ಯಾಂಕ್‌ಗಳು ಅನ್‌ಕ್ಲೇಮ್‌ ಆದ 35 ಸಾವಿರ ಕೋಟಿ ರೂಪಾಯಿಯನ್ನು ಆರ್‌ಬಿಐಗೆ ವರ್ಗಾವಣೆ ಮಾಡಿವೆ. ಈ ಹಣವನ್ನೇ ಈಗ ಖಾತೆದಾರರಿಗೆ ನೀಡಲು ಅಭಿಯಾನ ಆರಂಭಿಸಲಾಗುತ್ತಿದೆ.

ಇದನ್ನೂ ಓದಿ: Post office savings schemes : ಬಡ್ಡಿ ದರ ಏರಿಕೆ, ಬ್ಯಾಂಕ್‌ ಎಫ್‌ಡಿಗಳ ಜತೆ ಅಂಚೆ ಉಳಿತಾಯ ಠೇವಣಿ ಯೋಜನೆಯ ಪೈಪೋಟಿ

ಈಗಲೇ ಕ್ಲೇಮ್‌ ಮಾಡುವುದಾದರೆ ಏನು ಮಾಡಬೇಕು?

ಅನ್‌ಕ್ಲೇಮ್‌ ಆಗಿ ಉಳಿದಿರುವ ಹಣವನ್ನು ಖಾತೆದಾರರು ಅಥವಾ ಅವರ ವಾರಸುದಾರರು ಪಡೆಯಬಹುದಾಗಿದೆ. ಬ್ಯಾಂಕ್‌ಗಳು ವೆಬ್‌ಸೈಟ್‌ಗಳಲ್ಲಿ ಅನ್‌ಕ್ಲೇಮ್‌ ಆಗಿರುವ ಠೇವಣಿದಾರರ ಹೆಸರುಗಳನ್ನು ಒದಗಿಸಬೇಕು. ಹಾಗೆಯೇ, ಇತ್ತೀಚೆಗೆ ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಅವರು, ಅನ್‌ಕ್ಲೇಮ್‌ ಆಗಿರುವ ಹಣ ನೀಡಲು ಕೇಂದ್ರೀಕೃತ ವೆಬ್‌ ಪೋರ್ಟಲ್‌ ಘೋಷಿಸಿದ್ದಾರೆ. ಅದರ ಮೂಲಕವೂ ಕ್ಲೇಮ್‌ ಆಗದ ಖಾತೆ ಗುರುತಿಸಿ, ಬಳಿಕ ಬ್ಯಾಂಕ್‌ಗಳಿಗೆ ಅಗತ್ಯ ದಾಖಲೆ ನೀಡುವ ಮೂಲಕ ಹಣ ವಾಪಸ್‌ ಪಡೆಯಬಹುದಾಗಿದೆ.

Exit mobile version