ನವದೆಹಲಿ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆದರೆ ಹೊಸ ವಿದ್ಯುನ್ಮಾನ ಮತದಾನ ಯಂತ್ರಗಳನ್ನು (ಇವಿಎಂ) ಖರೀದಿಸಲು ಪ್ರತಿ 15 ವರ್ಷಗಳಿಗೊಮ್ಮೆ ಅಂದಾಜು 10,000 ಕೋಟಿ ರೂಪಾಯಿ ವೆಚ್ಚ ಮಾಡಬೇಕಾಗುತ್ತದೆ ಎಂದು ಕೇಂದ್ರ ಚುನಾವಣಾ ಆಯೋಗ (Election commission) ಹೇಳಿದೆ. ಇವಿಎಂಗಳ ಬಾಳಿಕೆ ಅವಧಿ 15 ವರ್ಷಗಳಾಗಿವೆ. ಏಕಕಾಲದಲ್ಲಿ ಚುನಾವಣೆ ನಡೆದರೆ ಅವುಗಳ ಬಾಳಿಕೆ ಅವಧಿಯಲ್ಲಿ ಮೂರು ಚುನಾವಣೆಗಳನ್ನು ನಡೆಸಲು ಸಾಧ್ಯ ಎಂದು ಆಯೋಗವು ಸರ್ಕಾರಕ್ಕೆ ಕಳುಹಿಸಿದ ಸಂವಹನದಲ್ಲಿ ತಿಳಿಸಿದೆ.
ಅಂದಾಜಿನ ಪ್ರಕಾರ, ಈ ವರ್ಷ ಲೋಕಸಭಾ ಚುನಾವಣೆಗೆ ಭಾರತದಾದ್ಯಂತ ಒಟ್ಟು 11.8 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸುವ ಅಗತ್ಯವಿದೆ. ಏಕಕಾಲದಲ್ಲಿ ಚುನಾವಣೆ ನಡೆಸುವಾಗ ಪ್ರತಿ ಮತಗಟ್ಟೆಗೆ ಎರಡು ಸೆಟ್ ಇವಿಎಂಗಳು ಬೇಕಾಗುತ್ತವೆ. ಒಂದು ಲೋಕಸಭಾ ಸ್ಥಾನಕ್ಕೆ ಮತ್ತು ಇನ್ನೊಂದು ವಿಧಾನಸಭಾ ಕ್ಷೇತ್ರಕ್ಕೆ. ಹೀಗಾಗಿ ಅಷ್ಟೊಂದು ಮೊತ್ತವನ್ನು ವಿನಿಯೋಗ ಮಾಡಬೇಕಾಗುತ್ತದೆ ಎಂದು ಆಯೋಗ ತಿಳಿಸಿದೆ.
ಹಿಂದಿನ ಅನುಭವಗಳ ಆಧಾರದ ಮೇಲೆ ಚುನಾವಣಾ ದಿನ ಸೇರಿದಂತೆ ವಿವಿಧ ಹಂತಗಳಲ್ಲಿ ದೋಷಯುಕ್ತ ಘಟಕಗಳನ್ನು ಬದಲಾಯಿಸಲು ಕೆಲವು ನಿಯಂತ್ರಣ ಘಟಕಗಳು (ಸಿಯುಗಳು), ಬ್ಯಾಲೆಟ್ ಯೂನಿಟ್ಗಳು (ಬಿಯುಗಳು) ಮತ್ತು ವೋಟರ್-ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪ್ಯಾಟ್) ಯಂತ್ರಗಳ ವಿನಿಯೋಗವಾಗುವ ಅಗತ್ಯವಿದೆ ಎಂದು ಚುನಾವಣಾ ಆಯೋಗ ಸರ್ಕಾರಕ್ಕೆ ಕಳುಹಿಸಿದ ಸಂವಹನದಲ್ಲಿ ತಿಳಿಸಿದೆ.
ಕನಿಷ್ಠ ಒಂದು ಬಿಯು, ಒಂದು ಸಿಯು ಮತ್ತು ಒಂದು ವಿವಿಪ್ಯಾಟ್ ಯಂತ್ರವು ಒಂದು ಇವಿಎಂಗೆ ಸರಿಹೊಂದುತ್ತದೆ ಎಂದು ಚುನಾವಣಾ ಆಯೋಗ ಹೇಳಿದೆ.
ವಿವಿಧ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಏಕಕಾಲದಲ್ಲಿ ಚುನಾವಣೆಗೆ ಅಗತ್ಯವಿರುವ ಕನಿಷ್ಠ ಇವಿಎಂಗಳು ಮತ್ತು ವಿವಿಪ್ಯಾಟ್ಗಳು ವಿವರಗಳು ಈ ಕೆಳಗಿನಂತಿದೆ. 46,75,100 ಬಿಯುಗಳು, 33,63,300 ಸಿಯುಗಳು ಮತ್ತು 36,62,600 ವಿವಿಪ್ಯಾಟ್ಗಳು ಬೇಕಾಗುತ್ತವೆ. 2023 ರ ಆರಂಭದ ಪ್ರಕಾರ ಇವಿಎಂನ ತಾತ್ಕಾಲಿಕ ವೆಚ್ಚವು ಪ್ರತಿ ಬಿಯುಗೆ 7,900 ರೂ., ಪ್ರತಿ ಸಿಯುಗೆ 9,800 ರೂ., ಮತ್ತು ವಿವಿಪ್ಯಾಟ್ನ ಪ್ರತಿ ಯೂನಿಟ್ಗೆ 16,000 ರೂಪಾಯಿ ವಿನಿಯೋಗಿಸಬೇಕಾಗುತ್ತದೆ.
ಶೇಖರಣಾ ಸೌಲಭ್ಯವೂ ಬೇಕು
ಹೆಚ್ಚುವರಿ ಮತದಾನ ಮತ್ತು ಭದ್ರತಾ ಸಿಬ್ಬಂದಿ, ಇವಿಎಂಗಳಿಗೆ ವರ್ಧಿತ ಶೇಖರಣಾ ಸೌಲಭ್ಯಗಳು ಮತ್ತು ಹೆಚ್ಚಿನ ವಾಹನಗಳ ಅಗತ್ಯವನ್ನು ಚುನಾವಣಾ ಆಯೋಗ ಒತ್ತಿಹೇಳಿದೆ. ಹೊಸ ಯಂತ್ರಗಳ ಉತ್ಪಾದನೆ, ಹೆಚ್ಚುತ್ತಿರುವ ಗೋದಾಮು ಸೌಲಭ್ಯಗಳು ಮತ್ತು ಇತರ ವ್ಯವಸ್ಥಾಪನಾ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಮೊದಲ ಏಕಕಾಲಿಕ ಚುನಾವಣೆಗಳನ್ನು 2029ರಲ್ಲಿ ಮಾತ್ರ ನಡೆಸಬಹುದು ಎಂದು ಆಯೋಗ ಹೇಳಿದೆ.
ಸಂವಿಧಾನ ತಿದ್ದುಪಡಿ ಅಗತ್ಯ
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ಸಂವಿಧಾನದ ವಿಧಿಗಳಿಗೆ ಅನುಚ್ಛೇದಗಳಿಗೆ ತಿದ್ದುಪಡಿಗಳ ಅಗತ್ಯವಿದೆ ಎಂದು ಚುನಾವಣಾ ಆಯೋಗ ಹೇಳಿದೆ. ತಿದ್ದುಪಡಿಯ ಅಗತ್ಯವಿರುವ ಸಂಸತ್ತಿನ ಸದನಗಳ ಅವಧಿಗೆ ಸಂಬಂಧಿಸಿದ 83ನೇ ವಿಧಿ, ರಾಷ್ಟ್ರಪತಿಗಳು ಲೋಕಸಭೆಯ ವಿಸರ್ಜನೆಗೆ ಸಂಬಂಧಿಸಿದ 85ನೇ ವಿಧಿ, ರಾಜ್ಯ ಶಾಸಕಾಂಗಗಳ ಅವಧಿಗೆ ಸಂಬಂಧಿಸಿದ 172ನೇ ವಿಧಿ, ರಾಜ್ಯ ಶಾಸಕಾಂಗಗಳ ವಿಸರ್ಜನೆಗೆ ಸಂಬಂಧಿಸಿದ 174ನೇ ವಿಧಿ ಮತ್ತು ರಾಜ್ಯಗಳಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆಗೆ ಸಂಬಂಧಿಸಿದ 356ನೇ ವಿಧಿಗೆ ತಿದ್ದುಪಡಿ ತರಬೇಕಾಗಿದೆ.
ಇದನ್ನೂ ಓದಿ : Election Commission : ರಾಜ್ಯದ ಇಬ್ಬರು ಮಹಿಳಾ ಅಧಿಕಾರಿಗಳಿಗೆ ಚುನಾವಣಾ ಆಯೋಗದ ರಾಷ್ಟ್ರ ಪ್ರಶಸ್ತಿ
ದೇಶದಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸುವ ವಿಷಯವನ್ನು ಪರಿಶೀಲಿಸಲು ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ನೇತೃತ್ವದ ಸಮಿತಿಯನ್ನು ಸರ್ಕಾರ ರಚಿಸಿದೆ. ಭಾರತದ ಸಂವಿಧಾನದ ಅಡಿಯಲ್ಲಿ ಅಸ್ತಿತ್ವದಲ್ಲಿರುವ ಚೌಕಟ್ಟು ಮತ್ತು ಇತರ ಶಾಸನಬದ್ಧ ನಿಬಂಧನೆಗಳನ್ನು ಗಮನದಲ್ಲಿಟ್ಟುಕೊಂಡು ಲೋಕಸಭೆ, ರಾಜ್ಯ ವಿಧಾನಸಭೆಗಳು, ಪುರಸಭೆಗಳು ಮತ್ತು ಪಂಚಾಯತ್ಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲು ಪರಿಶೀಲಿಸುವ ಮತ್ತು ಶಿಫಾರಸು ಮಾಡುವ ಕೆಲಸವನ್ನು ಒಂದು ರಾಷ್ಟ್ರ, ಒಂದು ಚುನಾವಣೆ ಕುರಿತ ಉನ್ನತ ಮಟ್ಟದ ಸಮಿತಿಗೆ ವಹಿಸಲಾಗಿದೆ.