ಹೈದ್ರಾಬಾದ್: ಕೊಟ್ಟ ಭರವಸೆಯಂತೆಯೇ ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ 13 ಹೊಸ ಜಿಲ್ಲೆಗಳನ್ನು ಅಸ್ತಿತ್ವಕ್ಕೆ ತಂದಿದ್ದಾರೆ. ಆಂಧ್ರದ ಒಟ್ಟು ಜಿಲ್ಲೆಗಳ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. ಇಂದು ಗುಂಟೂರು ಜಿಲ್ಲೆಯ ತಾಡೇಪಲ್ಲಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಆಂಧ್ರ ಸಿಎಂ ಜಗನ್ 13 ಹೊಸ ಜಿಲ್ಲೆಗಳನ್ನು ಉದ್ಘಾಟಿಸಿದರು.
13 ಹೊಸ ಜಿಲ್ಲೆಗಳ ರಚನೆಗೆ ಸಂಬಂಧಪಟ್ಟಂತೆ ಎಲ್ಲ ರೀತಿಯ ಪ್ರಕ್ರಿಯೆಗಳೂ ಈಗಾಗಲೇ ಮುಕ್ತಾಯಗೊಂಡಿದ್ದು, ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿವೆ. ಪುನರ್ ವ್ಯವಸ್ಥಿಕರಣದ ಭಾಗವಾಗಿ ಆಂಧ್ರದಲ್ಲಿ 13 ಹೊಸ ಜಿಲ್ಲೆಗಳು ಹೊಸದಾಗಿ ಸೇರ್ಪಡೆಯಾಗಿದ್ದು, 72 ರೆವಿನ್ಯೂ ಡಿವಿಜನ್‌ಗಳು ಅಸ್ತಿತ್ವಕ್ಕೆ ಬಂದಿವೆ.
13 ಹೊಸ ಜಿಲ್ಲೆಗಳನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಸಿಎಂ ಜಗನ್, ಇಂದಿನಿಂದ ನಮ್ಮದು 26 ಜಿಲ್ಲೆಗಳನ್ನು ಹೊಂದಿರುವ ರಾಜ್ಯವಾಗಲಿದೆ. ಪಾರ್ವತಿಪುರಂ ಮನ್ಯಂ, ಪೋಡೆರು, ಅನಕಾಪಲ್ಲಿ, ಕಾಕಿನಾಡ, ಕೋನಸೀಮ, ಏಲೂರು, ವಿಜಯವಾಡ, ಪಲ್ನಾಡು, ಬಾಪಟ್ಲ, ನಂದ್ಯಾಲ, ಪುಟ್ಟಪರ್ತಿ, ರಾಯಬೊಟಿ, ತಿರುಪತಿ ಹೆಸರಿನಲ್ಲಿ 13 ಹೊಸ ಜಿಲ್ಲೆಗಳು ಅಸ್ತಿತ್ವಕ್ಕೆ ಬಂದಿವೆ. ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಶ್ರದ್ಧೆಯಿಂದ ತಮ್ಮ ತಮ್ಮ ಕಾರ್ಯಗಳನ್ನು ನಿರ್ವಹಿಸಬೇಕು ಎಂದು ತಿಳಿಸಿದರು.
ಏ.6ರಂದು ಸ್ವಯಂಸೇವಕರು, ವಾರ್ಡ್ ಕಾರ್ಯದರ್ಶಿಗಳಿಗೆ ಸನ್ಮಾನ!
ಈ ಜಿಲ್ಲೆಗಳ ರಚನೆಗೆ ಅವಿರತವಾಗಿ ಶ್ರಮಿಸಿದ ಸ್ವಯಂಸೇವಕರು, ವಾರ್ಡ್ಗಳ ಕಾರ್ಯದರ್ಶಿಗಳಿಗೆ ಏಪ್ರಿಲ್ 6ರಂದು ಸಿಎಂ ಜಗನ್ ಸನ್ಮಾನಿಸಲಿದ್ದಾರೆ. ಏಪ್ರಿಲ್ 8ರಂದು ಫಲಾನುಭವಿಗಳಿಗೆ ʻವಸತಿ ದೀವೇನಾʼ ಯೋಜನೆಯ ಪ್ರಮಾಣಪತ್ರವನ್ನು ಸಿಎಂ ಜಗನ್ ವಿತರಣೆ ಮಾಡಲಿದ್ದಾರೆ. ಇದು ಆಯ್ದ ವರ್ಗಗಳ ಕುಟುಂಬಗಳಿಗೆ ಮಾತ್ರ ಮೀಸಲಾದ ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ ಐಟಿಐ ಮತ್ತು ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಆಂಧ್ರ ಸರ್ಕಾರವೇ ಹಾಸ್ಟೆಲ್ ಮತ್ತು ಕ್ಯಾಂಟೀನ್ ಶುಲ್ಕ ನೀಡಲಿದೆ.
ಈ ಬಗ್ಗೆ ಏಪ್ರಿಲ್ 2ರಂದು ರಾತ್ರಿ ಗೆಜೆಟೆಡ್ ಅಧಿಸೂಚನೆ ಹೊರಡಿಸಿದ್ದ ಆಂಧ್ರ ಪ್ರದೇಶ ಸರ್ಕಾರ ಏಪ್ರಿಲ್ 4ರಿಂದ 13 ಹೊಸ ಜಿಲ್ಲೆಗಳು ಅಸ್ತಿತ್ವಕ್ಕೆ ಬರಲಿವೆ ಎಂದು ಹೇಳಿತ್ತು. ಅಷ್ಟೇ ಅಲ್ಲದೆ, ಮುಖ್ಯಮಂತ್ರಿ ಜಗನ್ ರೆಡ್ಡಿ ಅವರು 13 ಹೊಸ ಜಿಲ್ಲೆಗಳಿಗೆ ಸಂಬಂಧಪಟ್ಟ ಪೋರ್ಟಲ್ ಮತ್ತು ಕೈಪಿಡಿಗಳನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಪ್ರಕಟಣೆ ಹೊರಡಿಸಿತ್ತು.