Site icon Vistara News

ರಥೋತ್ಸವ ವೇಳೆ ವಿದ್ಯುತ್ ತಗುಲಿ ಮಕ್ಕಳೂ ಸೇರಿ 11 ಮಂದಿ ಸಾವು: ತಂಜಾವೂರಿನಲ್ಲಿ ದುರ್ಘಟನೆ

ತಂಜಾವೂರು: ಬುಧವಾರ ಮುಂಜಾನೆ ತಮಿಳುನಾಡಿನ ತಂಜಾವೂರು ಜಿಲ್ಲೆಯ ಕಾಳಿಮೇಡು ಪಟ್ಟಣದ ದೇವಸ್ಥಾನದ ಉತ್ಸವದಲ್ಲಿ ಭಕ್ತರು ರಥವನ್ನು ಎಳೆಯುವ ವೇಳೆ ವಿದ್ಯುತ್ ತಂತಿ ತಗುಲಿ ಇಬ್ಬರು ಮಕ್ಕಳು ಸೇರಿ 11 ಮಂದಿ ಸಾವನ್ನಪ್ಪಿದ್ದಾರೆ.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಭಕ್ತರು ದೇವಸ್ಥಾನದ ರಥವನ್ನು ತಿರುಗಿಸುತ್ತಿದ್ದಾಗ ವಿದ್ಯುತ್ ತಂತಿಯು ರಥಕ್ಕೆ ಸಿಲುಕಿತು. ಇದರಿಂದ ಕೂಡಲೆ ಇಬ್ಬರು ಮಕ್ಕಳು ಸೇರಿದಂತೆ ಹತ್ತು ಮಂದಿಗೆ ತಕ್ಷಣ ವಿದ್ಯುತ್ ಸ್ಪರ್ಶವಾಗಿದೆ.

ಹಾನಿಗೀಡಾಗಿರುವ ರಥ

ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತೀವ್ರ ಅಸ್ವಸ್ಥಗೊಂಡಿದ್ದ 8 ಜನರನ್ನು ತಂಜಾವೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರ. ಘಟನೆಯಲ್ಲಿ ಗಾಯಗೊಂಡಿರುವ ಇತರ ಹಲವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಅನೇಕರ ಪರಿಸ್ಥಿತಿ ಗಂಭಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಡಿಐಜಿ, ಇದು ವಾರ್ಷಿಕ ಉತ್ಸವವಾಗಿದ್ದು, ಅವರು ರಥವನ್ನು ಎಳೆಯುವಾಗ ಅಪಘಾತ ಸಂಭವಿಸಿದೆ. ರಥವು ಹೈ ಟೆನ್ಷನ್ ವೈರ್‌ಗೆ ತಾಗಿದೆಯೇ ಅಥವಾ ‘ಪ್ರಭಾವದ ಆರ್ಕ್’ ಕಾರಣದಿಂದ ಘಟನೆ ಸಂಭವಿಸಿದೆಯೇ ಎಂಬುದನ್ನು ನಾವು ತನಿಖೆ ನಡೆಸುತ್ತಿದ್ದೇವೆ. ಎಫ್‌ಐಆರ್‌ ದಾಖಲಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಮೃತರ ಕುಟುಂಬಕ್ಕೆ ಪರಿಹಾರ

ಘಟನೆಯಲ್ಲಿ ಮೃತಪಟ್ಟವರ ಸ್ಮರಣಾರ್ಥ ತಮಿಳುನಾಡು ವಿಧಾನಸಭೆಯಲ್ಲಿ ಎರಡು ನಿಮಿಷ ಮೌನ ಆಚರಣೆ ಮಾಡಲಾಯಿತು. ಮೃತರ ಕುಟುಂಬಕ್ಕೆ ತಲಾ ₹5 ಲಕ್ಷ ಪರಿಹಾರವನ್ನು ರಾಜ್ಯ ಸರ್ಕಾರದಿಂದ ನೀಡುವುದಾಗಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಘೋಷಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರೂ ಈ ಕುರಿತು ಸಂತಾಪ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿಗಳೊಂದಿಗಿನ ವಿಡಿಯೋ ಕಾನಫರೆನ್ಸ್‌ ಸಭೆಯ ಪ್ರಾರಂಬದಲ್ಲಿ ಈ ಕುರಿತು ಸಂತಾಪ ಸೂಚಿಸಿದರು. ಈ ಬಗ್ಗಡ ಟ್ವೀಟ್‌ ಮಾಡಿರುವ ಮೋದಿ, ದುರ್ಘಟನೆಯಿಂದ ಪ್ರಾಣ ಕಳೆದುಕೊಂಡವರ ಮುಂದಿನ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ (PMNRF) ತಲಾ ₹2 ಲಕ್ಷ ನೀಡಲಾಗುವುದು ಹಾಗೂ ಗಾಯಾಳುಗಳಿಗೆ ತಲಾ ₹50,000 ನೀಡಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | ಬೆಂಗಳೂರಿನಲ್ಲಿ ಭಾರೀ ಮಳೆಯಿಂದ ಅವಾಂತರ: ವಿದ್ಯುತ್ ವೈರ್ ತಗುಲಿ ಯುವಕ ಸಾವು

Exit mobile version