ಅಜ್ಮೇರ್: ಜಾತ್ರೆ, ಉತ್ಸವಗಳು, ಊರ ಹಬ್ಬಗಳಲ್ಲಿ ವಿವಿಧ ಮನರಂಜನೆ, ಆಟಗಳೆಲ್ಲ ಇರುತ್ತವೆ. ಅದರಲ್ಲೂ ಜೇಂಟ್ ವೀಲ್, ಡ್ರಾಪ್ ಟವರ್, ಕಾರ್ನೀವಲ್ ರೈಡ್ಗಳೆಲ್ಲ ಸಾಮಾನ್ಯವಾಗಿ ಎಲ್ಲ ಕಡೆ ಬರುತ್ತವೆ. ಇಂಥ ಸಾಹಸಮಯ ಆಟಗಳು ಮಜಾ ಕೊಡುವಷ್ಟೇ ಅಪಾಯ ತಂದೊಡ್ಡಬಲ್ಲವು. ಅಂಥ ಹತ್ತು ಹಲವು ಉದಾಹರಣೆಗಳನ್ನು ಈ ಹಿಂದೆಯೇ ನೋಡಿದ್ದೇವೆ. ಈಗ ರಾಜಸ್ಥಾನದಲ್ಲಿ ಕೂಡ ಅಂಥದ್ದೇ ಒಂದು ಅವಘಡ ನಡೆದಿದೆ. ಅಜ್ಮೇರ್ ಜಿಲ್ಲೆಯಲ್ಲಿ ಕುಂಡನ್ ನಗರ ಏರಿಯಾದಲ್ಲಿ ನಡೆದ ಜಾತ್ರೆಯೊಂದರಲ್ಲಿ ಡ್ರಾಪ್ ಟವರ್ ಅಪಘಾತವುಂಟಾಗಿ 11 ಮಂದಿ ಗಾಯಗೊಂಡಿದ್ದಾರೆ.
ಈ ಡ್ರಾಪ್ ಟವರ್ ಎಂದರೆ, ಉದ್ದನೆಯ ಕಂಬದ ಸುತ್ತಲೂ ಚಕ್ರವೊಂದನ್ನು ಹಾಕಿಡಲಾಗುತ್ತದೆ. ಅದರ ಮೇಲೆಲ್ಲ ಕಬ್ಬಿಣ ಸೀಟ್ ಇರುತ್ತದೆ. ಸೀಟ್ ಮೇಲೆ ಜನರು ಸುರಕ್ಷಿತವಾಗಿ ಕುಳಿತುಕೊಳ್ಳುವಂತೆ ರೂಪಿಸಿರಲಾಗುತ್ತದೆ. ಆ ದೊಡ್ಡದಾದ ಚಕ್ರ ಕಂಬದ ಸುತ್ತ ತಿರುಗುತ್ತ ಮೇಲಿನಿಂದ ಕೆಳಕ್ಕೂ, ಕೆಳಗಿನಿಂದ ಮೇಲಕ್ಕೂ ಹೋಗುತ್ತದೆ. ಆಟವಾಡಲು ಭಾರಿ ಖುಷಿಕೊಡುತ್ತದೆ. ಆದರೆ ರಾಜಸ್ಥಾನದಲ್ಲಿ ಇದು ಒಮ್ಮೆಲೇ ಕುಸಿದುಬಿದ್ದು 11 ಮಂದಿ ಗಾಯಗೊಂಡಿದ್ದಾರೆ. ಒಂದಷ್ಟು ಜನರು ಕೆಳಗೆ ನಿಂತು, ಆ ಡ್ರಾಪ್ ಟವರ್ನ್ನು ನೋಡುತ್ತಿದ್ದರು. ಇದು ಬಿದ್ದ ರಭಸಕ್ಕೆ ಅವರೂ ಸಹ ಬಿದ್ದು ಗಾಯಗೊಂಡಿದ್ದಾರೆ. ಅವರನ್ನೆಲ್ಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಡ್ರಾಪ್ ಟವರ್ ಒಮ್ಮೆಲೇ ಕುಸಿದುಬಿದ್ದಾಗ ಅನೇಕರು ಕೂಗಿಕೊಂಡಿದ್ದನ್ನು ಕೇಳಬಹದು. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ.
ಇದನ್ನೂ ಓದಿ: Fire Accident: ಮಾರಿಜಾತ್ರೆಗೆ ಹೋಗುತ್ತಿದ್ದಾಗ ಕಾರಿಗೆ ಬೆಂಕಿ; ಬೆಂಗಳೂರಲ್ಲಿ ಅಗ್ನಿಅವಘಡಕ್ಕೆ ಐಷಾರಾಮಿ ಕಾರುಗಳು ಭಸ್ಮ
ಘಟನೆ ನಡೆದ ಬೆನ್ನಲ್ಲೇ ಸ್ಥಳಕ್ಕೆ ಧಾವಿಸಿದ ಅಜ್ಮೇರ್ನ ಹೆಚ್ಚುವರಿ ಎಸ್ಪಿ ಸುಶೀಲ್ ಕುಮಾರ್ ಪರಿಶೀಲನೆ ನಡೆಸಿದ್ದಾರೆ. ಕೇಬಲ್ ತುಂಡಾದ ಕಾರಣಕ್ಕೆ ಹೀಗೆ ಟವರ್ನಿಂದ ಚಕ್ರ ಕುಸಿದುಬಿತ್ತು ಎಂದು ಹೇಳಲಾಗಿದೆ. ಇನ್ನು ಗಾಯಗೊಂಡವರು ಯಾರಿಗೂ ಜೀವಕ್ಕೆ ಅಪಾಯವಿಲ್ಲ ಎಂದೂ ಮಾಹಿತಿ ಲಭ್ಯವಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.