Site icon Vistara News

ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 11 ಜನರ ಸಾವು, 60ಕ್ಕೂ ಹೆಚ್ಚು ಮಂದಿಗೆ ಗಾಯ

Madhya Pradesh Fire Accident

Six killed, 60 injured in blaze at firecrackers unit in Madhya Pradesh's Harda town

ಭೋಪಾಲ್‌: ಮದ್ಯಪ್ರದೇಶದ ಹರ್ದಾ ಪಟ್ಟಣದಲ್ಲಿರುವ (Harda Town) ಪಟಾಕಿ ಕಾರ್ಖಾನೆಯಲ್ಲಿ (Firecrackers Factory) ಭೀಕರ ದುರಂತ ಸಂಭವಿಸಿದೆ. ಮಂಗಳವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಕಾರ್ಖಾನೆಯಲ್ಲಿ ಏಕಾಏಕಿ ಸ್ಫೋಟ ಸಂಭವಿಸಿದ್ದು, ಇದುವರೆಗೆ 11 ಜನ ಮೃತಪಟ್ಟಿದ್ದಾರೆ. 60ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿಯೇ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಬೈರಾಗಢ ಗ್ರಾಮದಲ್ಲಿರುವ ಕಾರ್ಖಾನೆಯಲ್ಲಿ ಏಕಾಏಕಿ ಸ್ಫೋಟ ಸಂಭವಿಸಿದ ಕಾರಣ ಹೆಚ್ಚಿನ ಜನ ಹೊರಗೆ ಓಡಿಬರಲು ಸಾಧ್ಯವಾಗಿಲ್ಲ. ಹಲವು ಸ್ಫೋಟಗಳು ಸಂಭವಿಸಿದ ಕಾರಣ ಕೆಲವರು ಕಾರ್ಖಾನೆಯಲ್ಲಿಯೇ ಸಜೀವವಾಗಿ ದಹನಗೊಂಡಿದ್ದಾರೆ. ಇನ್ನೂ ಒಂದಷ್ಟು ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇನ್ನೂ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಇನ್ನೂ ಹಲವು ಕಾರ್ಮಿಕರು ಕಾರ್ಖಾನೆಯಲ್ಲಿ ಸಿಲುಕಿರುವ ಕಾರಣ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.

“ಹರ್ದಾ ಪಟ್ಟಣದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ, ಹಲವು ಜನ ಮೃತಪಟ್ಟಿರುವ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ, ಕಾರ್ಖಾನೆಯಲ್ಲಿ ಸಿಲುಕಿರುವವರ ರಕ್ಷಣೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ತುರ್ತು ಸಂದರ್ಭಗಳಲ್ಲಿ ಇಂದೋರ್‌, ಭೋಪಾಲ್‌ ಸೇರಿ ಯಾವುದೇ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಸಿದ್ಧವಿರುವಂತೆ ಸೂಚಿಸಲಾಗಿದೆ” ಎಂದು ಮುಖ್ಯಮಂತ್ರಿ ಮೋಹನ್‌ ಯಾದವ್‌ ಅವರು ತಿಳಿಸಿದ್ದಾರೆ. ಹೆಚ್ಚಿನ ಆಂಬುಲೆನ್ಸ್‌ ವ್ಯವಸ್ಥೆಯನ್ನೂ ಮಾಡಲಾಗಿದೆ.

ಇದನ್ನೂ ಓದಿ: Bantwal News: ಗುಡ್ಡದಲ್ಲಿ ಬೆಂಕಿ ನಂದಿಸಲು ಹೋದ ವೃದ್ಧ ದಂಪತಿ ಸಜೀವ ದಹನ

4 ಲಕ್ಷ ರೂ. ಪರಿಹಾರ ಘೋಷಣೆ

ಮಧ್ಯಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೊಟದಿಂದಾಗಿ ಮೃತಪಟ್ಟಿರುವವರ ಕುಟುಂಬಕ್ಕೆ ಸಿಎಂ ಮೋಹನ್‌ ಯಾದವ್‌ ಅವರು ತಲಾ 4 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಕಾರ್ಖಾನೆಯಲ್ಲಿ ಇನ್ನೂ ಹಲವು ಸಣ್ಣ ಸಣ್ಣ ಸ್ಫೋಟಗಳು ಸಂಭವಿಸುತ್ತಿವೆ. ಹಾಗಾಗಿ, ಅಗ್ನಿಶಾಮಕ ಸಿಬ್ಬಂದಿಯು ಅಗ್ನಿ ನಂದಿಸುವಲ್ಲಿ ನಿರತರಾಗಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಜನರನ್ನು ರಕ್ಷಿಸುವ ಭರದಲ್ಲಿ ಜನರ ಶವಗಳನ್ನು ರಸ್ತೆ ಮೇಲೆಯೇ ಎಸೆದ ದೃಶ್ಯಗಳು ಭೀಕರವಾಗಿದ್ದವು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version