ಡೆಹ್ರಾಡೂನ್: ನೆಹರು ಕಾಲೋನಿಯ ದಲನ್‌ವಾಲಾ ನಿವಾಸಿ ವೃದ್ಧೆ ಪುಷ್ಪಾ ಮುಂಜಿಯಾಲ್ ಎಂಬುವರು ರಾಹುಲ್ ಗಾಂಧಿ ಅವರನ್ನು ತಮ್ಮ ಆಸ್ತಿಯ ವಾರಸುದಾರರನ್ನಾಗಿ ಮಾಡುವಂತೆ ಜಿಲ್ಲಾ ನ್ಯಾಯಾಲಯಕ್ಕೆ ವಿಲ್ ಸಲ್ಲಿಸಿದ್ದಾರೆ.
ರಾಹುಲ್ ಗಾಂಧಿಯವರ ಆಲೋಚನೆಗಳಿಂದ ನಾನು ಪ್ರಭಾವಿತಳಾಗಿದ್ದೇನೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಗಾಂಧಿ ಕುಟುಂಬ ದೇಶಕ್ಕಾಗಿ ಅತ್ಯುನ್ನತ ತ್ಯಾಗ ಮಾಡಿದೆ. ಹೀಗಾಗಿ ನಾನು ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಪುಪ್ಪಾ ಮುಂಜಿಯಾಲ್ ಹೇಳಿದ್ದಾರೆ.
ತಮ್ಮ ಆಸ್ತಿಯ ವಿವರವನ್ನು ನ್ಯಾಯಾಲಯಕ್ಕೆ ನೀಡಿರುವ ಅವರು, ಸಂಪೂರ್ಣ ಆಸ್ತಿಯ ಮಾಲೀಕತ್ವವನ್ನು ರಾಹುಲ್ ಗಾಂಧಿಗೆ ಹಸ್ತಾಂತರಿಸುವಂತೆ ಮನವಿ ಮಾಡಿದ್ದಾರೆ. ತಾವು ಬರೆಸಿದ ವಿಲ್ ನ ದಾಖಲೆಗಳನ್ನು 78 ವರ್ಷದ ಅಜ್ಜಿ ಕಾಂಗ್ರೆಸ್ ಪಕ್ಷದ ನಾಯಕರಿಗೆ ಹಸ್ತಾಂತರಿಸಿದ್ದಾರೆ.
ವೃದ್ಧೆ ಪುಷ್ಪಾ ಮುಂಜಿಯಾಲ್ ಅವರ ಬಳಿ ₹ 50 ಲಕ್ಷ ರೂಪಾಯಿ ಮೌಲ್ಯದ ಆಸ್ತಿ ಮತ್ತು ಸುಮಾರು 10 ಪವನ ಬಂಗಾರವಿದೆ. ಇದೀಗ ತನ್ನ ಸಂಪೂರ್ಣ ಆಸ್ತಿಯನ್ನು ಈ ವೃದ್ಧೆ ರಾಹುಲ್ ಗಾಂಧಿಯವರ ಹೆಸರಿಗೆ ವರ್ಗಾಯಿಸಿದ್ದಾರೆ.
ಪುಷ್ಪಾ ಮುಂಜಿಯಾಲ್ ಅವರು ತಮ್ಮ ಆಸ್ತಿಯ ದಾಖಲೆ ಪತ್ರವನ್ನು ರಾಹುಲ್ ಗಾಂಧಿ ಅವರಿಗೆ ಕಾಂಗ್ರೆಸ್ ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಪ್ರೀತಮ್ ಸಿಂಗ್ ಅವರ ನಿವಾಸದಲ್ಲಿ ವರ್ಗಾಯಿಸಿದರು. ವೃದ್ಧೆ ಪುಷ್ಪಾ ಮುಂಜಿಯಾಲ್ ಅವರು ರಾಹುಲ್ ಗಾಂಧಿ ಅವರಿಗೆ ಹಸ್ತಾಂತರಿಸಿದ ಆಸ್ತಿ ಡೆಹ್ರಾಡೂನ್‌ನ ಐಷಾರಾಮಿ ಸ್ಥಳದಲ್ಲಿದ್ದು, ಹೆಚ್ಚಿನ ಮೌಲ್ಯ ಹೊಂದಿದೆ ಎಂದು ತಿಳಿದು ಬಂದಿದೆ.