ಮುಂಬಯಿ: ಮಾಜಿ ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬಣಕ್ಕೆ ತೀವ್ರ ಹಿನ್ನಡೆ ಉಂಟಾಗಿದ್ದು, ಪಕ್ಷದ ೧೨ ಸಂಸದರು ಇದೀಗ ಸಿಎಂ ಏಕನಾಥ್ ಶಿಂಧೆ ಬಣದ ಜತೆ ಸಂಪರ್ಕದಲ್ಲಿದ್ದಾರೆ.
ಈ ೧೨ ಸಂಸದರು ದಿಲ್ಲಿಯಲ್ಲಿ ನಾಳೆ ಸುದ್ದಿಗೋಷ್ಠಿ ನಡೆಸುವ ನಿರೀಕ್ಷೆ ಇದೆ. ಸ್ವತಃ ಸಿಎಂ ಏಕನಾಥ್ ಶಿಂಧೆ ಕೂಡ ದಿಲ್ಲಿಗೆ ತೆರಳುತ್ತಿದ್ದಾರೆ. ಲೋಕಸಭೆಯಲ್ಲಿ ಶಿವಸೇನಾದ ೧೮ ಸಂಸದರು ಇದ್ದಾರೆ.
ಕಳೆದ ಜೂನ್ ೩೦ರಂದು ಮಹಾರಾಷ್ಟ್ರ ಸಿಎಂ ಆದ ಬಳಿಕ ಎರಡನೇ ಸಲ ಶಿಂಧೆ ಅವರು ದಿಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಜುಲೈ ೮ ಮತ್ತು ೯ರಂದು ಶಿಂಧೆ ಹಾಗೂ ಡಿಸಿಎಂ ದೇವೇಂದ್ರ ಫಡ್ನವಿಸ್ ಅವರು ದಿಲ್ಲಿಗೆ ಹೋಗಿದ್ದರು. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾಗಿದ್ದರು.
ಮೂಲಗಳ ಪ್ರಕಾರ ಶಿಂಧೆ ಬಣದ ಜತೆ ಸಂಪರ್ಕದಲ್ಲಿರುವ ಸಂಸದರು- ಧೈರ್ಯಶೀಲ್ ಸಾಂಭಾಜಿ ರಾವ್ ಮಾನೆ, ಸದಾಶಿವ್ ಲೊಖಂಡೆ, ಹೇಮಂತ್ ಗೋಡ್ಸೆ, ಹೇಮಂತ್ ಪಾಟೀಲ್, ರಾಜೇಂದ್ರ ಗವಿತ್, ಸಂಜಯ್ ಮಾಂಡ್ಲಿಕ್, ಶ್ರೀಕಾಂತ್ ಶಿಂಧೆ, ಶ್ರೀರಂಗ್ ಬರ್ನೆ, ರಾಹುಲ್ ಶೆವಾಲೆ, ಪ್ರತಾಪರಾವ್ ಗಣಪತರಾವ್ ಜಾಧವ್, ಕೃಪಾಲ್ ತುಮಾನೆ, ಭಾವ್ನಾ ಗಾವ್ಳಿ.
ಆದರೆ ಈ ಬೆಳವಣಿಗೆಯನ್ನು ಶಿವಸೇನಾ ಸಂಸದ ಸಂಜಯ್ ರಾವತ್ ನಿರಾಕರಿಸಿದ್ದಾರೆ. ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ರಾವ್ ಸಾಹೇಬ್ ದಾನ್ವೆ ಅವರು ಕಳೆದ ವಾರ, ಉದ್ಧವ್ ಬಣದ ೧೨ ಸಂಸದರು ಶಿಂಧೆಯವರ ಸಂಪರ್ಕದಲ್ಲಿದ್ದು, ಪಕ್ಷಾಂತರಕ್ಕೆ ಸಜ್ಜಾಗಿದ್ದಾರೆ ಎಂದು ತಿಳಿಸಿದ್ದರು.