ರಾಯ್‌ಪುರ: ಛತ್ತೀಸ್‌ಗಢದಲ್ಲಿ ನಕ್ಸಲರ ನಿಗ್ರಹಕ್ಕೆ ಪಣ ತೊಟ್ಟಿರುವ ಭದ್ರತಾ ಸಿಬ್ಬಂದಿಯು ಶುಕ್ರವಾರ (ಮೇ 10) ಭರ್ಜರಿಯಾಗಿಯೇ ಬೇಟೆಯಾಡಿದೆ. ಛತ್ತೀಸ್‌ಗಢದ (Chhattisgarh) ಬಿಜಾಪುರ ಜಿಲ್ಲೆಯಲ್ಲಿ (Bijapur District) ಭದ್ರತಾ ಸಿಬ್ಬಂದಿಯು ಶುಕ್ರವಾರ 12 ಮಾವೋವಾದಿಗಳನ್ನು (Naxals Encounter) ಹೊಡೆದುರುಳಿಸಿದ್ದಾರೆ. ನಕ್ಸಲರು ಅಡಗಿರುವ ಕುರಿತು ನಿಖರ ಮಾಹಿತಿ ಮೇರೆಗೆ ಭದ್ರತಾ ಸಿಬ್ಬಂದಿಯು ಕಾರ್ಯಾಚರಣೆ ಕೈಗೊಂಡಿದ್ದಾರೆ. ನಕ್ಸಲರು ಕೂಡ ಪ್ರತಿ ದಾಳಿ ನಡೆಸಿದ್ದು, ಇದೇ ವೇಳೆ ಮುನ್ನಡೆ ಸಾಧಿಸಿದ ಭದ್ರತಾ ಸಿಬ್ಬಂದಿಯು 12 ನಕ್ಸಲರನ್ನು ಹತ್ಯೆಗೈದಿದ್ದಾರೆ.
ನಕ್ಸಲರ ನಿಗ್ರಹದ ಕಾರ್ಯಾಚರಣೆ ಕುರಿತು ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣುದೇವ್ ಸಾಯಿ ಅವರು ಮಾಹಿತಿ ನೀಡಿದ್ದಾರೆ. “ಬಿಜಾಪುರ ಜಿಲ್ಲೆಯ ಗಂಗಲೂರ್ ಅರಣ್ಯ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿಯು ಕಾರ್ಯಾಚರಣೆ ಕೈಗೊಂಡು 12 ನಕ್ಸಲರನ್ನು ಹತ್ಯೆಗೈದಿದ್ದಾರೆ. ಇದುವರೆಗೆ ಎಲ್ಲ 12 ಶವಗಳು ಪತ್ತೆಯಾಗಿವೆ. ನಮ್ಮ ಭದ್ರತಾ ಸಿಬ್ಬಂದಿ ಹಾಗೂ ಹಿರಿಯ ಅಧಿಕಾರಿಗಳಿಗೆ ಅಭಿನಂದನೆಗಳು” ಎಂದು ತಿಳಿಸಿದ್ದಾರೆ. ಭದ್ರತಾ ಸಿಬ್ಬಂದಿ, ಪೊಲೀಸರು ಕೈಗೊಂಡ ಜಂಟಿ ಕಾರ್ಯಾಚರಣೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.
#WATCH | Chhattisgarh CM Vishnu Deo Sai says, "An encounter broke out with the Naxals in Gangaloor area of Bijapur district…12 dead bodies of the Naxals have been found. I congratulate our jawans & senior officers…" https://t.co/OXMg9oAXUO pic.twitter.com/I9woGLlGRf
— ANI (@ANI) May 10, 2024
13 ನಕ್ಸಲರ ಹತ್ಯೆ
ಏಪ್ರಿಲ್ 2ರಂದು ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿ ನಡೆಸಿದ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಒಬ್ಬ ಮಹಿಳೆ ಸೇರಿದಂತೆ 13 ಮಂದಿ ನಕ್ಸಲರು ಹತರಾಗಿದ್ದರು. ಬಿಜಾಪುರ ಜಿಲ್ಲೆಯಲ್ಲಿ ಸಿಆರ್‌ಪಿಎಫ್ ಮತ್ತು ಛತ್ತೀಸ್‌ಗಢ ಪೊಲೀಸರ ಭದ್ರತಾ ಪಡೆಗಳೊಂದಿಗಿನ ಭೀಕರ ಗುಂಡಿನ ಚಕಮಕಿಯಲ್ಲಿ 13 ನಕ್ಸಲರು ಹತರಾಗಿದ್ದರು. ಇದು 2024ರಲ್ಲಿ ನಡೆದ ಬೃಹತ್ ನಕ್ಸಲ್ ನಿಗ್ರಹ ಕಾರ್ಯಾಚರಣೆ ಎನಿಸಿತ್ತು. ಇದಾದ ಕೆಲ ದಿನಗಳ ಬಳಿಕವೂ ಮೂವರು ನಕ್ಸಲರನ್ನು ಹತ್ಯೆಗೈಯಲಾಗಿತ್ತು. ಒಂದು ವಾರದ ಹಿಂದಷ್ಟೇ 10 ನಕ್ಸಲರನ್ನು ಹತ್ಯೆ ಮಾಡಲಾಗಿತ್ತು.
5 ತಿಂಗಳಲ್ಲಿ 70ಕ್ಕೂ ನಕ್ಸಲರ ಖತಂ
ಪ್ರಸಕ್ತ ವರ್ಷದಲ್ಲಿ ಭದ್ರತಾ ಸಿಬ್ಬಂದಿಯು ನಕ್ಸಲರ ವಿರುದ್ಧ ಭಾರಿ ಸಮರ ಸಾರಿದ್ದಾರೆ. ಶುಕ್ರವಾರ ಹತ್ಯೆಗೈದ 12 ನಕ್ಸಲರು ಸೇರಿ ಪ್ರಸಕ್ತ ವರ್ಷದ ಐದು ತಿಂಗಳಲ್ಲಿ 70ಕ್ಕೂ ಅಧಿಕ ಮಾವೋವಾದಿಗಳನ್ನು ಭದ್ರತಾ ಸಿಬ್ಬಂದಿಯು ಹತ್ಯೆ ಮಾಡಿದ್ದಾರೆ. 2023ರಲ್ಲಿ ಭದ್ರತಾ ಸಿಬ್ಬಂದಿಯು 22 ಮಾವೋವಾದಿಗಳನ್ನು ಎನ್‌ಕೌಂಟರ್ ಮಾಡಿದ್ದರು. ಲೋಕಸಭೆ ಚುನಾವಣೆಗೆ ವೇಳೆಯೇ ತೆಲಂಗಾಣ ಗಡಿ ಹಾಗೂ ಛತ್ತೀಸ್‌ಗಢದ ಸುಕ್ಮಾ, ಬಿಜಾಪುರ ಸೇರಿ ಹಲವೆಡೆ ಮಾವೋವಾದಿಗಳ ಉಪಟಳ ಜಾಸ್ತಿ ಇರುತ್ತದೆ. ಹಾಗಾಗಿ, ಭದ್ರತಾ ಸಿಬ್ಬಂದಿಯು ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Naxals Killed: ಮತ್ತೆ ಮೂವರು ನಕ್ಸಲರನ್ನು ಹತ್ಯೆಗೈದ ಭದ್ರತಾ ಸಿಬ್ಬಂದಿ; ಈ ವರ್ಷದ ಸ್ಕೋರ್ 49