ನವದೆಹಲಿ: ರಾಹುಲ್ ಗಾಂಧಿ (Rahul Gandhi) ಅವರಿಗೆ ನೀಡಲಾದ ಶಿಕ್ಷೆಗೆ ಸುಪ್ರೀಂ ಕೋರ್ಟ್ (Supreme Court) ತಡೆ ನೀಡಿದ ಬೆನ್ನಲ್ಲೇ ಅವರಿಗೆ ಮತ್ತೆ ಲೋಕಸಭೆ ಸದಸ್ಯತ್ವನ್ನು (Member of Parliament) ಮರುಸ್ಥಾಪಿಸಲಾಗಿದೆ. ಇದಾದ ಒಂದು ದಿನದ ಬಳಿಕ, ರಾಹುಲ್ ಗಾಂಧಿ ಅವರು ಈ ಹಿಂದೆ ವಾಸವಾಗಿದ್ದ ಸರ್ಕಾರಿ ಬಂಗಲೆಯನ್ನು (bungalow) ಮರು ಹಂಚಿಕೆ ಮಾಡಲಾಗಿದೆ. ಲೋಕಸಭೆ ಸದಸ್ಯತ್ವವನ್ನು ಕಳೆದುಕೊಂಡ ಬೆನ್ನಲ್ಲೇ ರಾಹುಲ್ ತಾವು ಈ ಹಿಂದೆ ವಾಸವಾಗಿದ್ದ 12, ತುಘಲಕ್ ಲೇನ್ ಬಂಗಲೆಯನ್ನು (Tughlaq Lane bungalow) ಖಾಲಿ ಮಾಡಿದ್ದರು. ಬಳಿಕ ತಮ್ಮ ತಾಯಿ ನಿವಾಸಕ್ಕೆ ಆಶ್ರಯಪಡೆದುಕೊಂಡಿದ್ದರು. ಈಗ ಅವರಿಗೆ ಅದೇ ಬಂಗಲೆಯನ್ನು ಮರು ಹಂಚಿಕೆ ಮಾಡಲಾಗಿದೆ.
2019ರ ಮೋದಿ ಉಪನಾಮ ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಅವರಿಗೆ ಸೂರತ್ ಸ್ಥಳೀಯ ನ್ಯಾಯಾಲಯವು 2 ವರ್ಷಗಳ ಗರಿಷ್ಠ ಶಿಕ್ಷೆಯನ್ನು ವಿಧಿಸಿತ್ತು. ಹಾಗಾಗಿ, ಕಾನೂನು ಪ್ರಕಾರ ರಾಹುಲ್ ಗಾಂಧಿ ಅವರ ಲೋಕಸಭೆ ಸದಸ್ಯತ್ವ ರದ್ದಾಗಿತ್ತು. ಬಳಿಕ ಅವರು ತಮ್ಮ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿದ್ದರು. ಆದರೆ, ರಾಹುಲ್ ಗಾಂಧಿ ಅವರು ಸ್ಥಳೀಯ ನ್ಯಾಯಾಲಯದ ತೀರ್ಪನ್ನು ಸೂರತ್ ಜಿಲ್ಲಾ ನ್ಯಾಯಾಲಯ ಹಾಗೂ ಗುಜರಾತ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಆದರೆ, ಇಲ್ಲೂ ಅವರಿಗೆ ಜಯ ದೊರೆತಿರಲಿಲ್ಲ. ಸುಪ್ರೀಂ ಕೋರ್ಟ್ ಮಾತ್ರ ರಾಹುಲ್‌ಗೆ ನೀಡಿದ ಶಿಕ್ಷೆಗೆ ತಡೆ ನೀಡಿತ್ತು. ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ರಾಹುಲ್ ಅವರು ಮತ್ತೆ ಸದಸ್ಯತ್ವಕ್ಕೆ ಮರಳಿದ್ದರು.
ರಾಹುಲ್ ಗಾಂಧಿ ಅವರು ಸಂಸದರಾಗಿ ಬಂಗಲೆ ಮಂಜೂರು ಮಾಡಲು ಎಸ್ಟೇಟ್ ಕಚೇರಿಯಿಂದ ಅಧಿಕೃತ ದೃಢೀಕರಣವನ್ನು ಪಡೆದಿದ್ದಾರೆಯ ಸದ್ಯಕ್ಕೆ ಅವರಿಗೆ 12, ತುಘಲಕ್ ಲೇನ್ ಅನ್ನು ನೀಡಲಾಗಿದೆ. ಆದಾಗ್ಯೂ, ಗಾಂಧಿ ಬಂಗಲೆಯನ್ನು ತೆಗೆದುಕೊಳ್ಳುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಮತ್ತು ಸಂಸದರು ಇದಕ್ಕೆ ಪ್ರತಿಕ್ರಿಯಿಸಲು ಎಂಟು ದಿನಗಳ ಕಾಲಾವಕಾಶವಿದೆ. ಕೇರಳದ ವಯನಾಡ ಕ್ಷೇತ್ರದ ಸಂಸದರಾಗಿರುವ ರಾಹುಲ್ ಗಾಂಧಿ ಅವರಿಗೆ 12, ತುಗಲಕ್ ಲೇನ್‌ನಲ್ಲಿರುವ ಸರ್ಕಾರಿ ಬಂಗಲೆಯನ್ನು ಹಂಚಿಕೆ ಮಾಡಲಾಗಿತ್ತು. ಈ ಮೊದಲು ಅವರು 2004ರಿಂದ ಸತತವಾಗಿ ಲೋಕಸಭೆಗೆ ಆಯ್ಕೆಯಾಗುತ್ತಾ ಬಂದಿದ್ದರು.
ಹಿಂದೂಸ್ತಾನದ ಜನರು 19 ವರ್ಷಗಳ ಕಾಲ ಈ ಮನೆಯನ್ನು ನನಗೆ ನೀಡಿದರು. ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಇಂದಿನ ದಿನಗಳಲ್ಲಿ ಸತ್ಯ ಮಾತನಾಡಲು ಬೆಲೆ ತೆರಬೇಕಾಗುತ್ತದೆ. ನಾನು ಎಷ್ಟೇ ಕಷ್ಟವಾದರೂ ಅಂಥ ಬೆಲೆ ತೆರಲು ಸಿದ್ಧನಾಗಿದ್ದೇನೆ ಎಂದು ಎಂದು ಏಪ್ರಿಲ್ ನಲ್ಲಿ ಬಂಗಲೆ ಖಾಲಿ ಮಾಡಿದ ಬಳಿಕ ರಾಹುಲ್ ಗಾಂಧಿ ಅವರು ಹೇಳಿದ್ದರು.
ಈ ಸುದ್ದಿಯನ್ನೂ ಓದಿ: No Confidence Motion: ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಚರ್ಚೆ ಶುರು, ರಾಹುಲ್ ಗಾಂಧಿ ಏಕೆ ಮಾತನಾಡಲಿಲ್ಲ?
ದಿಲ್ಲಿಯಲ್ಲಿ ಮನೆ ಹುಡುಕುತ್ತಿದ್ದ ರಾಹುಲ್ ಗಾಂಧಿ ಅವರು, ದಿಲ್ಲಿಯ ಮಾಜಿ ಸಿಎಂ ಮತ್ತು ಕಾಂಗ್ರೆಸ್ ಪಕ್ಷದ ನಾಯಕಿಯಾಗಿದ್ದ ಶೀಲಾ ದೀಕ್ಷಿತ್ ಅವರ ಮನೆಗೆ ಶಿಫ್ಟ್ ಆಗಲಿದ್ದಾರೆಂದು ಹೇಳಲಾಗಿತ್ತು. ಇದಲ್ಲದೇ, ಅನೇಕ ಕಾಂಗ್ರೆಸ್ ನಾಯಕರು ತಮ್ಮ ಮನೆಗಳನ್ನು ರಾಹುಲ್ ಗಾಂಧಿ ಅವರಿಗೆ ನೀಡಲಾದ ಮುಂದಾದ ವರದಿಗಳಿದ್ದವು.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.