Site icon Vistara News

ಕಣಿವೆ ರಾಜ್ಯದಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು: ಭರ್ಜರಿ ಕಾರ್ಯಾಚರಣೆ

ಶ್ರೀನಗರ: ಪುಲ್ವಾಮಾ ಜಿಲ್ಲೆಯ ತ್ರಾಲ್‌ನಲ್ಲಿ ಬುಧವಾರ ಬೆಳಿಗ್ಗೆ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರು ಮೃತಪಟ್ಟಿದ್ದಾರೆ. ಹತ್ಯೆಯಾದ ಉಗ್ರರನ್ನು ಎಜಿಯುಎಚ್ ಸದಸ್ಯ ಸಫತ್ ಮುಜಾಫರ್ ಸೋಫಿ ಅಲಿಯಾಸ್ ಮೌವಿಯಾ ಮತ್ತು ಎಲ್‌ಇಟಿ ಭಯೋತ್ಪಾದಕ ಉಮರ್ ತೆಲಿ ಎಂದು ಗುರುತಿಸಲಾಗಿದೆ.

ಭದ್ರತಾ ಪಡೆಗಳ ಗುಂಡಿನ ದಾಳಿಯಲ್ಲಿ ಮೃತಪಟ್ಟಿರುವ ಉಗ್ರರಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.

ಇದಕ್ಕೂ ಮುನ್ನ ಆವಂತಿಪೊರಾದ ತ್ರಾಲ್ ಪ್ರದೇಶದಲ್ಲಿ ಬುಧವಾರ ಬೆಳಿಗ್ಗೆ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ತೀವ್ರ ಗುಂಡಿನ ಚಕಮಕಿ ನಡೆದಿತ್ತು.

ಉಮರ್ ತೆಲಿ ಮತ್ತು ಸಫತ್ ಸ್ಥಳೀಯ ಉಗ್ರರಾಗಿದ್ದು, ಇಬ್ಬರೂ ಶ್ರೀನಗರದ ಖಾನ್ಮೋಹ್ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಸರಪಂಚ್ ಹತ್ಯೆ ಸೇರಿದಂತೆ ಶ್ರೀನಗರ ಭಾಗದಲ್ಲಿ ಅನೇಕ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದರು. ನಾಗರಿಕರ ಹತ್ಯೆ ಮತ್ತು ಇತರೆ ದುಷ್ಕೃತ್ಯಗಳನ್ನು ಎಸಗಿದ ಬಳಿಕ ಇಬ್ಬರು ಉಗ್ರರು ತ್ರಾಲ್‌ಗೆ ಪರಾರಿಯಾಗಿದ್ದರು.

Exit mobile version