ಹೈದ್ರಾಬಾದ್, ತೆಲಂಗಾಣ: ಹೈದ್ರಾಬಾದ್‌ನಲ್ಲಿ ನಿರ್ಮಿಸಲಾಗಿರುವ ಸಂವಿಧಾನಶಿಲ್ಪಿ ಡಾ. ಬಿ. ಆರ್.ಅಂಬೇಡ್ಕರ್ ಅವರ 125 ಅಡಿ ಎತ್ತರದ ಪ್ರತಿಮೆಯನ್ನು ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ (cm k chandrasekhar rao) ಅವರು ಏಪ್ರಿಲ್ 14, ಶುಕ್ರವಾರ ಸಂಜೆ ಲೋಕಾರ್ಪಣೆ ಮಾಡಿದರು. ಹೆಲಿಕಾಪ್ಟರ್ ಮೂಲಕ ಪ್ರತಿಮೆ ಮೇಲೆ ಹೂ ಮಳೆ ಸುರಿಸಲಾಯಿತು(Ambedkar Jayanti 2023).
50 ಅಡಿ ಎತ್ತರದ ವೇದಿಕೆ ಸೇರಿದಂತೆ ಒಟ್ಟಾರೆ 175 ಅಡಿ ಎತ್ತರದ ಪ್ರತಿಮೆ ಇದಾಗಿದೆ. ಭಾರತದ ಸಂಸತ್ತಿನ ಕಟ್ಟಡವನ್ನು ಹೋಲುವ ವೃತ್ತಾಕಾರದ ವೇದಿಕೆ ಈ ಮೂರ್ತಿಗಿದೆ. ಪ್ರತಿಮೆಯ ತೂಕ 474 ಟನ್ ಇದೆ. ಪ್ರತಿಮೆಯ ಒಳರಚನೆಗೆ 360 ಟನ್ ಸ್ಟೇನ್‌ಲೆಸ್ ಸ್ಟೀಲ್ ಮತ್ತು ಎರಕ ಹೊಯ್ಯಲು 114 ಟನ್ ಕಂಚನ್ನು ಬಳಸಲಾಗಿದೆ.
ಗುಜರಾತ್‌ನಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಏಕತಾ ಪ್ರತಿಮೆಯನ್ನು (597 ಅಡಿ) ನಿರ್ಮಿಸಿರುವ ಉತ್ತರ ಪ್ರದೇಶದ ನೋಯ್ಡಾದ ರಾಮ್ ಸುತಾರ್ ಆರ್ಟ್ ಕ್ರಿಯೇಷನ್ಸ್‌ನ ಹೆಸರಾಂತ ಶಿಲ್ಪಿಗಳಾದ ರಾಮ್ ವಂಜಿ ಸುತಾರ್ (98) ಮತ್ತು ಅವರ ಮಗ ಅನಿಲ್ ರಾಮ್ ಸುತಾರ್ (65) ಅವರೇ ಇದನ್ನೂ ವಿನ್ಯಾಸಗೊಳಿಸಿದ್ದಾರೆ.
ಇದನ್ನೂ ಓದಿ: ಡಾ.ಬಿ.ಆರ್. ಅಂಬೇಡ್ಕರ್ ಜನ್ಮದಿನ: ಮಹಾನಾಯಕನ 17 ನುಡಿಮುತ್ತುಗಳು
ಮೂರ್ತಿ ರಚನೆಯ ಒಟ್ಟಾರೆ ವೆಚ್ಚವನ್ನು 146.50 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಕೆಪಿಸಿ ಪ್ರಾಜೆಕ್ಟ್ಸ್ ಲಿಮಿಟೆಡ್ ಇದನ್ನು ನಿರ್ಮಿಸಿದೆ. ಪ್ರತಿಮೆಯನ್ನು ಸ್ಥಾಪಿಸಿದ ಪೀಠ ಒಟ್ಟು 26,258 ಚದರ ಅಡಿ ವಿಸ್ತೀರ್ಣದೊಂದಿಗೆ ಮೂರು ಮಹಡಿಗಳನ್ನು ಹೊಂದಿದೆ. ಇದರಲ್ಲಿ ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ಬಿಂಬಿಸುವ ಶಿಲ್ಪಗಳು, ಚಿತ್ರಗಳನ್ನು ಹೊಂದಿರುವ ವಸ್ತುಸಂಗ್ರಹಾಲಯ ಮತ್ತು 100 ಆಸನಗಳ ಸಭಾಂಗಣ ಇದೆ. ಗ್ರಂಥಾಲಯವನ್ನೂ ನಿರ್ಮಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೂರ್ತಿ ಸ್ಥಾಪಿಸಲಾಗಿರುವ 11 ಎಕರೆ ವಿಸ್ತೀರ್ಣದ ಸಂಪೂರ್ಣ ಆವರಣದಲ್ಲಿ ಉದ್ಯಾನ ಹಾಗೂ 450 ಕಾರುಗಳಿಗೆ ಪಾರ್ಕಿಂಗ್ ಸೌಲಭ್ಯ ಒದಗಿಸಲಾಗಿದೆ.