ನವದೆಹಲಿ: ಜೈಲು ಅಂದರೆ, ಅಲ್ಲೆಲ್ಲ ಕನಿಷ್ಠ ಮೂಲ ಸೌಕರ್ಯಗಳಿರುತ್ತವೆ. ಒಂದೇ ಸೆಲ್‌ನಲ್ಲಿ ನಾಲ್ಕೈದು ಕೈದಿಗಳೊಂದಿಗೆ ಮಲಗಬೇಕು, ಸಾಮೂಹಿಕ ಶೌಚಾಲಯ, ಸೊಳ್ಳೆಗಳ ಕಾಟ, ಸಹ ಕೈದಿಗಳ ಉಪಟಳ, ತಣ್ಣೀರಿನ ಸ್ನಾನ ಮಾಡಬೇಕು, ಜೈಲಧಿಕಾರಿಗಳು ಹೇಳಿದ ಕೆಲಸ ಮಾಡಬೇಕು. ಆದರೆ, ಭಾರತದ ಜೈಲುಗಳಲ್ಲಿ ದುಡ್ಡು ಕೊಟ್ಟರೆ ಏನು ಬೇಕಾದರೂ ಸೌಕರ್ಯ ಸಿಗುತ್ತದೆ ಎಂಬ ಆರೋಪ ಮೊದಲಿನಿಂದಲೂ ಇದೆ. ಇಂತಹ ಆರೋಪಕ್ಕೆ ನಿದರ್ಶನ ಎಂಬಂತೆ, ತಿಹಾರ ಜೈಲಿನಲ್ಲಿರುವ (Tihar Jail) 125 ಕೈದಿಗಳಿಗೆ ಎಚ್‌ಐವಿ ಪಾಸಿಟಿವ್ (HIV Positive) ಬಂದಿದೆ. ಅಷ್ಟೇ ಅಲ್ಲ, 200 ಕೈದಿಗಳು ಸೆಕ್ಸ್ ಸಂಬಂಧಿ ಕಾಯಿಲೆಯಿಂದ (Syphilis) ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ.
ತಿಹಾರ ಜೈಲಿನಲ್ಲಿ ಒಟ್ಟು 14 ಸಾವಿರ ಕೈದಿಗಳಿದ್ದಾರೆ. ಇವರಲ್ಲಿ 10,500 ಕೈದಿಗಳ ಆರೋಗ್ಯ ತಪಾಸಣೆ ಮಾಡಿಸಿದಾಗ, ಅವರಲ್ಲಿ 125 ಮಂದಿಗೆ ಎಚ್‌ಐವಿ ಪಾಸಿಟಿವ್, ಇನ್ನೂ 200 ಮಂದಿ ಸಿಫಿಲ್ಸ್ ಎಂಬ ಸೆಕ್ಸ್ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ. ತಿಹಾರ ಜೈಲಿನಲ್ಲಿ ನಿಯಮಿತವಾಗಿ ಕೈದಿಗಳ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಅವರು ಮಾರಕ ಕಾಯಿಲೆಗಳಿಂದ ಬಳಲುತ್ತಿದ್ದಾರೆಯೇ? ಅವರ ಆರೋಗ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಲು ತಪಾಸಣೆ ಮಾಡಲಾಗುತ್ತದೆ.
ಇತ್ತೀಚೆಗೆ ತಿಹಾರ ಜೈಲಿನ ಡಿಜಿ ಆಗಿ ಸತೀಶ್ ಗೋಲ್ಚಾ ಅವರು ಅಧಿಕಾರ ವಹಿಸಿಕೊಂಡಿದ್ದು, ಅವರು ಕೈದಿಗಳ ಆರೋಗ್ಯ ತಪಾಸಣೆಗೆ ಸೂಚಿಸಿದ್ದರು. ಅದರಂತೆ, ಕಳೆದ ಮೇ ಹಾಗೂ ಜೂನ್ ತಿಂಗಳಲ್ಲಿ 10,500 ಕೈದಿಗಳ ಆರೋಗ್ಯ ತಪಾಸಣೆ ಮಾಡಿಸಲಾಗಿದೆ. ಇನ್ನೂ, 3,500 ಕೈದಿಗಳ ಆರೋಗ್ಯ ತಪಾಸಣೆ ಬಾಕಿ ಇದೆ ಎಂದು ತಿಳಿದುಬಂದಿದೆ. ಹಾಗಾಗಿ, ಇನ್ನೂ ಇಂತಹ ಕಾಯಿಲೆ ಪೀಡಿತರ ಸಂಖ್ಯೆ ಜಾಸ್ತಿ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಅಸುರಕ್ಷಿತ ಲೈಂಗಿಕ ಸಂಪರ್ಕ ಸೇರಿ ಹಲವು ಕಾರಣಗಳಿಂದಾಗಿ ಎಚ್‌ಐವಿ ತಗುಲುತ್ತದೆ. ಆದರೆ, ಜೈಲಿನಲ್ಲಿರುವ ನೂರಾರು ಕೈದಿಗಳಿಗೆ ಹೇಗೆ ಏಕಾಏಕಿ ಎಚ್‌ಐವಿ ತಗುಲಿತು ಎಂಬ ಪ್ರಶ್ನೆ ಕಾಡುತ್ತಿದೆ. ಇನ್ನು, ಜೈಲಿನಲ್ಲಿ 125 ಕೈದಿಗಳಿಗೆ ಎಚ್‌ಐವಿ ಇದೆ ಎಂಬ ಮಾಹಿತಿ ಲಭ್ಯವಾಗುತ್ತಲೇ ಇತರ ಕೈದಿಗಳಲ್ಲಿ ಆತಂಕ ಮನೆಮಾಡಿದೆ ಎಂದು ತಿಳಿದುಬಂದಿದೆ. ಇವರ ಆರೋಗ್ಯ ಸುಧಾರಣೆಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂಬುದಾಗಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ: K Kavitha : ತಿಹಾರ್ ಜೈಲಿನಿಂದಲೇ ಕವಿತಾ ಅರೆಸ್ಟ್; ಇದೀಗ ಸಿಬಿಐ ಸರದಿ