ಮುಂಬೈ: ಮಹಾರಾಷ್ಟ್ರದ ನವಿ ಮುಂಬೈನಲ್ಲಿ ನಡೆದ ಮಹಾರಾಷ್ಟ್ರ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡವರಲ್ಲಿ ಎಂಟು ಜನ ಉಷ್ಣ ಗಾಳಿಯಿಂದಾಗಿ ಮೃತಪಟ್ಟಿದ್ದಾರೆ. ಬಯಲು ಪ್ರದೇಶದಲ್ಲಿ ಸಮಾರಂಭ ನಡೆದ ಕಾರಣ ಕಾರ್ಯಕ್ರಮ ನೋಡುತ್ತ ಕುಳಿತವರಲ್ಲಿ 13 ಮಂದಿ ಬಿಸಿಲಿನ ಹೊಡೆತಕ್ಕೆ ಬಲಿಯಾಗಿದ್ದಾರೆ. ಇನ್ನು 600ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದುಬಂದಿದೆ.
ಮಹಾರಾಷ್ಟ್ರ ಸರ್ಕಾರವು ನಾಗರಿಕರ ಸಮಾಜ ಸೇವೆ ಪರಿಗಣಿಸಿ ಮಹಾರಾಷ್ಟ್ರ ಭೂಷಣ ಪ್ರಶಸ್ತಿಯನ್ನು ನೀಡುತ್ತದೆ. ಅದರಂತೆ, ಸಾಮಾಜಿಕ ಕಾರ್ಯಕರ್ತ ದತ್ತಾತ್ರೇಯ ನಾರಾಯಣ್ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಮುಖ್ಯಮಂತ್ರಿ ಏಕನಾಥ್ ಶಿಂಧೆ ಹಾಗೂ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಕೂಡ ಸಮಾರಂಭದಲ್ಲಿ ಭಾಗಿಯಾಗಿದ್ದರು. ಹೀಗೆ ಕಾರ್ಯಕ್ರಮ ನಡೆಯುವಾಗಲೇ ಸುಡುವ ಬಿಸಿಲಿನಿಂದಾಗಿ 13 ಜನ ಮೃತಪಟ್ಟಿದ್ದಾರೆ.
ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಹಸ್ರಾರು ಜನ
ನವಿ ಮುಂಬೈನ ಬೃಹತ್ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ, ಟೆಂಟ್ ಹಾಕದ ಕಾರಣ ಸಾವಿರಾರು ಜನ ಬಿಸಿಲಿನಲ್ಲಿಯೇ ಕುಳಿತು ಕಾರ್ಯಕ್ರಮ ವೀಕ್ಷಿಸಬೇಕಾಯಿತು. ಅದರಲ್ಲೂ, ದತ್ತಾತ್ರೇಯ ನಾರಾಯಣ್ ಅವರ ಸಾವಿರಾರು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬೆಳಗ್ಗೆ 11.30ಕ್ಕೆ ಆರಂಭವಾದ ಕಾರ್ಯಕ್ರಮವು ಮಧ್ಯಾಹ್ನ 1 ಗಂಟೆಯವರೆಗೂ ನಡೆಯಿತು. ಹಾಗಾಗಿ, 35 ಡಿಗ್ರಿ ಸೆಲ್ಸಿಯಸ್ ತಾಪಮಾನವು ಜನರನ್ನು ಬಸವಳಿಯುವಂತೆ ಮಾಡಿತು. ಆಯಾಸ, ನಿರ್ಜಲೀಕರಣದಿಂದ ಜನ ಸಾವಿಗೀಡಾಗಿದ್ದಾರೆ. ಇದೇ ಕಾರಣದಿಂದ ನೂರಾರು ಜನ ಅಸ್ವಸ್ಥರಾಗಿದ್ದಾರೆ.
5 ಲಕ್ಷ ರೂಪಾಯಿ ಪರಿಹಾರ ಘೋಷಣೆ
ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ನಡೆದ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಮಹಾರಾಷ್ಟ್ರ ಸರ್ಕಾರ ತಲಾ 5 ಲಕ್ಷ ರೂಪಾಯಿ ಘೋಷಿಸಿದೆ. ಅಸ್ವಸ್ಥರಾದ ನೂರಾರು ಜನರನ್ನು ನವಿ ಮುಂಬೈನ ಕಮೋಥೆಯಲ್ಲಿರುವ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಆಸ್ಪತ್ರೆಗೆ ಭೇಟಿ ನೀಡಿ ಜನರ ಆರೋಗ್ಯ ಪರಿಶೀಲಿಸಿದ್ದಾರೆ. ಚಿಕಿತ್ಸೆಗೆ ಸರ್ಕಾರದಿಂದ ಎಲ್ಲ ವ್ಯವಸ್ಥೆ ಮಾಡಲಾಗುವುದು ಎಂಬ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಕಾರ್ಯಕ್ರಮದ ಆಯೋಜನೆಯಲ್ಲಿ ಉಂಟಾದ ಅಚಾತುರ್ಯದ ಕುರಿತು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ: Boy Drowned: ಬೆಂಗಳೂರಿನ ಜೆ.ಪಿ.ಪಾರ್ಕ್‌ನಲ್ಲಿ ಆಟ ಆಡುವಾಗ ಕೆರೆಗೆ ಬಿದ್ದು ಬಾಲಕ ಸಾವು