ಲಖನೌ: ಕರ್ನಾಟಕದ (Karnataka) ಹಲವೆಡೆ, ಅದರಲ್ಲೂ ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ರಸ್ತೆಗಳು ಕೊಚ್ಚಿಕೊಂಡು ಹೋಗಿದ್ದು, ಮನೆಗಳು ಕುಸಿದಿವೆ. ಇದರಿಂದ ನಾಡಿನ ಜನರ ಜೀವನ ಅಸ್ತವ್ಯಸ್ತಗೊಂಡಿದೆ. ಕರ್ನಾಟಕ ಮಾತ್ರವಲ್ಲ, ಉತ್ತರ ಪ್ರದೇಶದಲ್ಲೂ (Uttar Pradesh) ವರುಣನ ಆರ್ಭಟವು (Rain News) ಜೋರಾಗಿದೆ. ಕಳೆದ 24 ಗಂಟೆಗಳಲ್ಲಿಯೇ ಮಳೆ ಸಂಬಂಧಿ ಅವಘಡಗಳಿಂದ 13 ಜನ ಮೃತಪಟ್ಟಿದ್ದು, ನೂರಾರು ಜನ ಗಾಯಗೊಂಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಮಳೆ ಸಂಬಂಧಿ ಅವಘಡಗಳ ಕುರಿತು ಉತ್ತರ ಪ್ರದೇಶ ಪರಿಹಾರ ಇಲಾಖೆಯ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ. ಮಳೆ ಸಂಬಂಧಿ ಅವಘಡಗಳಾದ ಸಿಡಿಲು, ಕಟ್ಟಡ ಕುಸಿತ, ಭೂಕುಸಿತ ಸೇರಿ ಹಲವು ರೀತಿಯ ಅವಘಡಗಳಿಂದ 13 ಜನ ಮೃತಪಟ್ಟಿದ್ದಾರೆ. ಶುಕ್ರವಾರ ಸಂಜೆ 6.30ರಿಂದ ಶನಿವಾರ ಸಂಜೆ 6.30ರ ಅವಧಿಯ 24 ಗಂಟೆಗಳಲ್ಲಿಯೇ ಇಷ್ಟು ಜನ ಮೃತಪಟ್ಟಿದ್ದಾರೆ. ನೂರಾರು ಜನ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
मुज़फ्फरनगर में सिचाई विभाग के गंग नहर रजवाहों में जल स्तर बढ़ने से मिटटी का कटान हो रहा है जिस कारन PWD द्वारा बनाई सड़के ज़मीन में धसने लगी है.#Uttrakhand #UttarPradesh #Rain #PWD pic.twitter.com/ilZRXYqkEV
— Amarjeet Singh (@amarjeetin_) July 6, 2024
ಕಳೆದ 24 ಗಂಟೆಗಳಲ್ಲಿ ಉತ್ತರ ಪ್ರದೇಶದಲ್ಲಿ ಸರಾಸರಿ 18.3 ಮಿಲಿಮೀಟರ್ ಮಳೆಯಾಗಿದೆ. ಫತೇಪುರದಲ್ಲಿ ಇಬ್ಬರು, ರಾಯ್‌ಬರೇಲಿಯಲ್ಲಿ ಇಬ್ಬರು, ಬುಲಂದ್‌ಶಹರ್, ಕನೌಜ್, ಮೈನ್‌ಪುರಿ, ಕೌಶಂಬಿ, ಫಿರೋಜಾಬಾದ್, ಪ್ರತಾಪ್‌ಗಢ ಹಾಗೂ ಉನ್ನಾವೋ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಉತ್ತರ ಪ್ರದೇಶದ 75 ಜಿಲ್ಲೆಗಳ ಪೈಕಿ 45 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಸತತ ಮಳೆಯಿಂದಾಗಿ ರಾಜ್ಯದ ಬಹುತೇಕ ನದಿಗಳು ಉಕ್ಕಿ ಹರಿಯುತ್ತಿವೆ. ಮೀನುಗಾರಿಕೆಗೆ ತೆರಳದಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಅಸ್ಸಾಂನಲ್ಲಿ 52 ಮಂದಿ ಸಾವು
ಅಸ್ಸಾಂನಲ್ಲಿ ಮಳೆಯಿಂದಾಗಿ ಕಳೆದ 24 ಗಂಟೆಗಳಲ್ಲಿ ಸುಮಾರು 52 ಮಂದಿ ಮೃತಪಟ್ಟಿದ್ದು, ನೂರಾರು ಮಂದಿ ಮನೆ ಕಳೆದುಕೊಂಡಿದ್ದಾರೆ. ನೆರೆಯಿಂದಾಗಿ ಅಂದಾಜು 24 ಲಕ್ಷ ಮಂದಿ ತೊಂದರೆಗೆ ಒಳಗಾಗಿದ್ದಾರೆ. ರಾಜ್ಯದ ಮುಕ್ಕಾಲು ಭಾಗಗಳಲ್ಲಿ ನೆರೆ ಆವರಿಸಿದೆ. ರಾಜ್ಯದ 35 ಜಿಲ್ಲೆಗಳ ಪೈಕಿ 30 ಜಿಲ್ಲೆಗಳು ತೀವ್ರವಾಗಿ ಪ್ರವಾಹದ ಹೊಡೆತಕ್ಕೆ ಸಿಲುಕಿವೆ. ಒಂದು ತಿಂಗಳಿನಿಂದ ಇಲ್ಲಿನ ಪರಿಸ್ಥಿತಿ ಭೀಕರವಾಗಿದ್ದು, ಪ್ರಾಣಹಾನಿಯ ಜತೆಗೆ ವ್ಯಾಪಕ ಪ್ರಮಾಣದಲ್ಲಿ ಬೆಳೆ ನಾಶ ಉಂಟಾಗಿದೆ. ಈ ಈಶಾನ್ಯ ರಾಜ್ಯದ ಸಾವಿರಾರು ಜನರು ಸ್ಥಳಾಂತರಗೊಂಡಿದ್ದಾರೆ ಮತ್ತು ನಿರಾಶ್ರಿತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Karnataka Weather : ಚಾರಣಪ್ರಿಯರಿಗೆ ಶಾಕ್; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್ ನಿಷೇಧ