ಲಡಾಖ್: ಚೀನಾ ಸರ್ಕಾರ ಪ್ರಾಯೋಜಕತ್ವದ ಹ್ಯಾಕರ್‌ಗಳು ಲಡಾಖ್ ಸಮೀಪದಲ್ಲಿರುವ ಭಾರತದ ವಿದ್ಯುತ್ ಪೂರೈಕೆ ಕೇಂದ್ರವನ್ನು ಕೆಲ ತಿಂಗಳುಗಳಿಂದ ಗುರಿ ಮಾಡುತ್ತಿದ್ದಾರೆ ಎಂದು ಖಾಸಗಿ ಗುಪ್ತಚರ ಸಂಸ್ಥೆ ʻರೆಕಾರ್ಡೆಡ್ ಫ್ಯೂಚರ್ʼ ವರದಿಯಲ್ಲಿ ತಿಳಿಸಿದೆ. ಲಡಾಖ್ ಭಾಗದಲ್ಲಿ ಭಾರತ-ಚೀನಾ ನಡುವಿನ ಸೇನಾ ಬಿಕ್ಕಟ್ಟು ತಿಳಿಯಾಗಿರುವ ಬೆನ್ನಲ್ಲೇ ಇದೀಗ ಡ್ರ್ಯಾಗನ್ ರಾಷ್ಟ್ರದ ಹೊಸ ಸಂಚು ಬಯಲಾಗಿದೆ.
ಇತ್ತೀಚಿನ ಕೆಲ ತಿಂಗಳುಗಳಲ್ಲಿ ಭಾರತದ ಕನಿಷ್ಠ 7 ಸ್ಟೇಟ್ ಲೋಡ್ ಡಿಸ್ಪ್ಯಾಚ್ ಸೆಂಟರ್ಸ್ (SLDCs)ಗಳನ್ನು ಚೀನಾ ಹ್ಯಾಕರ್‌ಗಳು ಗುರಿಯಾಗಿಸಿದ್ದಾರೆ. ಈ ವಿದ್ಯುತ್ ಪೂರೈಕೆ ಕೇಂದ್ರಗಳು ಸಂಬಂಧಿತ ರಾಜ್ಯಗಳ ಒಳಗೆ ವಿದ್ಯುತ್ ಪೂರೈಕೆ ಮತ್ತು ಗ್ರಿಡ್ ಕಂಟ್ರೋಲ್ ಮಾಡುವ ಜವಾಬ್ದಾರಿಯನ್ನು ಹೊತ್ತಿವೆ. ಚೀನಾ ಸರ್ಕಾರದ ಪ್ರಾಯೋಜಕ್ವತದ ಹ್ಯಾಕರ್‌ಗಳು ಗುರಿಯಾಗಿಸಿರುವ SLDCs ಉತ್ತರ ಭಾರತದಲ್ಲಿ ಇದ್ದು, ವಿವಾದಿತ ಭಾರತ-ಚೀನಾ ಗಡಿಯಲ್ಲಿನ ಲಡಾಖ್ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಚೀನಾದ ಹ್ಯಾಕರ್‌ಗಳು ಮಹತ್ವದ ಮೂಲಸೌಕರ್ಯ ವ್ಯವಸ್ಥೆಗಳ ಕುರಿತಾದ ಮಾಹಿತಿಗಳನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವಿಶೇಷ ಪರಿಣತಿ ಹೊಂದಿರುವ ಖಾಸಗಿ ಗುಪ್ತಚರ ಸಂಸ್ಥೆ ರೆಕಾರ್ಡೆಡ್ ಫ್ಯೂಚರ್ ಎಚ್ಚರಿಸಿದೆ.
ಕಳೆದ 18 ತಿಂಗಳಿನಿಂದ ರಾಜ್ಯ ಹಾಗೂ ಪ್ರಾದೇಶಿಕ ವಿದ್ಯುತ್ ರವಾನೆ ಕೇಂದ್ರಗಳನ್ನು ಚೀನಾ ಸರ್ಕಾರಿ ಪ್ರಯೋಜಕ್ವತದ ಹ್ಯಾಕರ್‌ಗಳು ಗುರಿಯಾಗಿಸಿಕೊಳ್ಳುತ್ತಿದ್ದಾರೆ. ಮೊದಲು ರೆಡ್‌ಎಕೋದಿಂದ ಇದೀಗ ಟ್ಯಾಗ್-38ವರೆಗೆ ಕನ್ನ ಹಾಕುವ ಪ್ರವೃತ್ತಿ ಮುಂದುವರಿದಿದ್ದು, ಹ್ಯಾಕರ್‌ಗಳು ದೀರ್ಘಕಾಲದ ಚಟುವಟಿಕೆಯ ಉದ್ದೇಶ ಹೊಂದಿದ್ದಾರೆ ಎಂದು ಖಾಸಗಿ ಗುಪ್ತಚರ ಸಂಸ್ಥೆ ತಿಳಿಸಿದೆ.
ಸೀಮಿತ ಆರ್ಥಿಕ ಬೇಹುಗಾರಿಕೆ ಅಥವಾ ಸಾಂಪ್ರದಾಯಿಕ ಗುಪ್ತಚರ ಅವಕಾಶಗಳ ಅಡಿ ಚೀನಾದ ಹ್ಯಾಕರ್‌ಗಳು ಭಾರತದ ಪವರ್ ಗ್ರೀಡ್ ಸಂಪನ್ಮೂಲಗಳ ಮೇಲೆ ದೀರ್ಘಕಾಲದಿಂದ ಕಣ್ಣಿಟ್ಟಿವೆ. ಇದನ್ನು ಗಮನಿಸುತ್ತಿದ್ದರೆ ಭಾರತದ ಮಹತ್ವದ ಮೂಲಸೌಕರ್ಯ ವ್ಯವಸ್ಥೆಗಳ ಮಾಹಿತಿ ಸಂಗ್ರಹಿಸಲು ನೆರವಾಗುವ ಅಥವಾ ತನ್ನ ಭವಿಷ್ಯದ ಚಟುವಟಿಕೆಗಳಿಗೆ ಮೊದಲೇ ಸಿದ್ಧತೆ ನಡೆಸುವ ಉದ್ದೇಶ ಹೊಂದಿರುವಂತೆ ಕಾಣಿಸುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಹ್ಯಾಕಿಂಗ್ ಕೃತ್ಯ ನಡೆಯುವ ಸಾಧ್ಯತೆ ಇದೆ ಎಂದು ರೆಕಾರ್ಡೆಡ್ ಫ್ಯೂಚರ್ ಎಚ್ಚರಿಕೆ ಕೊಟ್ಟಿದೆ.