ನವ ದೆಹಲಿ: ಯುದ್ಧಭೂಮಿ ಸುಡಾನ್ನಿಂದ ಭಾರತೀಯರನ್ನು ರಕ್ಷಣೆ ಮಾಡಲು ಕೇಂದ್ರ ಸರ್ಕಾರ ಪ್ರಾರಂಭ ಮಾಡಿರುವ ಆಪರೇಶನ್ ಕಾವೇರಿ (Operation Kaveri) ವೇಗ ಪಡೆದುಕೊಂಡಿದೆ. 135 ಭಾರತೀಯರನ್ನು ಒಳಗೊಂಡ 10ನೇ ಬ್ಯಾಚ್, ಪೋರ್ಟ್ ಸುಡಾನ್ನಿಂದ ಹೊರಟಿದ್ದು, ಶೀಘ್ರದಲ್ಲಿಯೇ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಲ್ಯಾಂಡ್ ಆಗಲಿದೆ. ಐಎಎಫ್ ಸಿ 130ಜೆ ವಿಮಾನದಲ್ಲಿ ಪೋರ್ಟ್ ಸುಡಾನ್ನಿಂದ ಹೊರಟಿದ್ದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಅವರು ಟ್ವೀಟ್ ಮಾಡಿ ತಿಳಿಸಿದ್ದಾರೆ. ಸುಡಾನ್‌ನಲ್ಲಿ ಏಪ್ರಿಲ್ 15ರಿಂದ ಸೇನೆ ಮತ್ತು ಅರೆಸೇನಾ ಪಡೆಗಳ ನಡುವೆ ಸಂಘರ್ಷ ಏರ್ಪಟ್ಟಿದೆ. ದೇಶವನ್ನು ರಕ್ಷಿಸಬೇಕಾದವರೇ ಪರಸ್ಪರ ಹೊಡೆದಾಡಿಕಕೊಳ್ಳುತ್ತಿದ್ದಾರೆ. ಇವರಿಬ್ಬರ ಯುದ್ಧದ ಪರಿಣಾಮ ಇದುವರೆಗೆ 500ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ಸುಡಾನ್‌ನಲ್ಲಿ 3000ಕ್ಕೂ ಹೆಚ್ಚು ಭಾರತೀಯರು ಇದ್ದಾರೆ. ಅವರನ್ನೆಲ್ಲ ಸುರಕ್ಷಿತವಾಗಿ ತಾಯ್ನಾಡಿಗೆ ಕರೆದುಕೊಂಡು ಬರುವ ಹೊಣೆ ನಮ್ಮದು ಎಂದು ಕೇಂದ್ರ ಸರ್ಕಾರ ಹೇಳಿದೆ. ಅದಕ್ಕಾಗಿಯೇ ಆಪರೇಶನ್ ಕಾವೇರಿಯನ್ನು ಅದು ಪ್ರಾರಂಭಿಸಿದೆ. ಪೋರ್ಟ್ ಸುಡಾನ್ನಿಂದ ಸೌದಿ ಅರೇಬಿಯಾದ ಜೆಡ್ಡಾಕ್ಕೆ ಕರೆತಂದು, ಅಲ್ಲಿಂದ ವಿಮಾನದ ಮೂಲಕ ದೆಹಲಿ/ಮುಂಬಯಿಗೆ ಭಾರತೀಯರನ್ನು ಕಳಿಸಲಾಗುತ್ತಿದೆ. ಪೋರ್ಟ್ ಸುಡಾನ್ನಿಂದ ಭಾರತೀಯರನ್ನು ಜೆಡ್ಡಾಕ್ಕೆ ಕರೆದೊಯ್ಯಲು ಐಎನ್ಎಸ್ ಸುಮೇಧಾ, ಐಎನ್ಎಸ್ ತೇಜ್, ಐಎನ್ಎಸ್ ತರ್ಕಾಶ್ ನೌಕೆಗಳು ಮತ್ತು ಐಎಎಫ್ ಸಿ 130ಜೆ ವಿಮಾನಗಳನ್ನು ನಿಯೋಜಿಸಲಾಗಿದೆ. 9ನೇ ಬ್ಯಾಚ್ನಲ್ಲಿ ಐಎನ್ಎಸ್ ತರ್ಕಾಶ್ ಹಡಗಿನಲ್ಲಿ 326 ಭಾರತೀಯರನ್ನು ಮತ್ತು ಐಎಎಫ್ ಸಿ 130 ಜೆ ವಿಮಾನದಲ್ಲಿ 135 ಜನರನ್ನು ಜೆಡ್ಡಾಕ್ಕೆ ಕರೆತರಲಾಗಿದೆ. 8ನೇ ಬ್ಯಾಚ್ನಲ್ಲಿ 121 ಭಾರತೀಯರು ಸುಡಾನ್ನಿಂದ ಹೊರಟಿದ್ದಾರೆ.
ಇದನ್ನೂ ಓದಿ: Operation Kaveri: ಸುಡಾನ್‌ನಲ್ಲಿ 68 ಕನ್ನಡಿಗರು ಅತಂತ್ರ; ನೆರವಿಗೆ ಬಾರದ ಆಪರೇಷನ್ ಕಾವೇರಿ ಟೀಂ
ಮತ್ತೊಂದು ಹಂತದಲ್ಲಿ ಭಾರತೀಯರನ್ನು ಜೆಡ್ಡಾದಿಂದ ತಾಯ್ನೆಲಕ್ಕೆ ಕರೆತರುವ ಕಾರ್ಯಾಚರಣೆಯೂ ನಡೆಯುತ್ತಿದೆ. ಈಗಾಗಲೇ ಎರಡು ಬ್ಯಾಚ್ಗಳು ಭಾರತಕ್ಕೆ ಬಂದಿದ್ದು, ಮೊದಲ ವಿಮಾನ ದೆಹಲಿಯಲ್ಲಿ, ಮತ್ತೊಂದು ವಿಮಾನ ಮುಂಬಯಿಯಲ್ಲಿ ಲ್ಯಾಂಡ್ ಆಗಿದೆ. ಅಲ್ಲಿಂದ ಬಂದವರು ಭಾರತ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತಿದ್ದಾರೆ. ಅಲ್ಲಿ ತಮ್ಮ ಸ್ಥಿತಿ ಹೇಗಿತ್ತು ಎಂಬುದನ್ನೂ ವಿವರಿಸಿದ್ದಾರೆ. ಜೆಡ್ಡಾದಿಂದ ದೆಹಲಿಗೆ ಬಂದಿಳಿದ ಹರಿಯಾಣ ಮೂಲದ ಸುಖ್ವಿಂದರ್ ಸಿಂಗ್ ಎಂಬುವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ‘ಯುದ್ಧ ಪೀಡಿತ ಸುಡಾನ್‌ನಲ್ಲಿ ನಮ್ಮ ಪರಿಸ್ಥಿತಿ ಭೀಕರವಾಗಿತ್ತು. ನಾವು ಮರಣಶಯ್ಯೆಯಲ್ಲಿದ್ದೇವೆ ಎಂಬ ಭಾವನೆ ಹುಟ್ಟಿತ್ತು’ ಎಂದಿದ್ದಾರೆ.