ದಿಸ್ಪುರ: ಅಸ್ಸಾಂನ ದೇರ್‌ಗಾಂವ್‌ನಲ್ಲಿ ಭೀಕರ ರಸ್ತೆ ಅಪಘಾತ (Bus Accident) ಸಂಭವಿಸಿದ್ದು, 14 ಮಂದಿ ಮೃತಪಟ್ಟಿದ್ದಾರೆ. ಸುಮಾರು 30 ಜನ ಗಾಯಗೊಂಡಿದ್ದು, ಇವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ದೇರ್‌ಗಾಂವ್‌ನಲ್ಲಿ (Dergaon ) ಬುಧವಾರ (ಜನವರಿ 3) ಬೆಳಗ್ಗೆ 5 ಗಂಟೆ ಸುಮಾರಿಗೆ ಬಸ್ ಹಾಗೂ ಟ್ರಕ್ (Bus Collides With Truck) ಡಿಕ್ಕಿಯಾಗಿವೆ. ಅಪಘಾತದ ತೀವ್ರತೆಗೆ ಬಸ್‌ನಲ್ಲಿದ್ದ 14 ಮಂದಿಯು ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತಿನ್ಸುಕಿಯಾ ಜಿಲ್ಲೆಯಲ್ಲಿರುವ ತಿಲಿಂಗಾ ದೇವಾಲಯಕ್ಕೆ ಬಸ್‌ನಲ್ಲಿ ಸುಮಾರು 45 ಜನ ಹೊರಟಿದ್ದರು. ದೇವರ ದರ್ಶನ ಪಡೆಯಲು ತೆರಳುವಾಗಲೇ ಅಪಘಾತ ಸಂಭವಿಸಿದೆ. ಗೋಲಾಘಾಟ್‌ನ ಕಮರ್‌ಗಾಂವ್‌ಗೆ ಪಿಕ್‌ನಿಕ್ ಹೋಗಿದ್ದ ಇವರು ದೇವರ ದರ್ಶನ ಮಾಡಿಕೊಂಡು ತೆರಳುವ ಉದ್ದೇಶ ಹೊಂದಿದ್ದರು. ಅಪಘಾತ ಸಂಭವಿಸುತ್ತಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆಂಬುಲೆನ್ಸ್ ವ್ಯವಸ್ಥೆ ಮಾಡಿದರು. ಜೊರ್ಹಾತ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
#WATCH | Assam: At least 12 people died and 25 others injured after a bus collided with a truck in Golaghat district. The accident took place at around 5 am in Balijan area near Dergaon in Golaghat: Rajen Singh, Golaghat SP pic.twitter.com/1F9JavLkJh
— ANI (@ANI) January 3, 2024
ರಾಂಗ್ ಸೈಡ್‌ನಲ್ಲಿದ್ದ ಟ್ರಕ್
ಅಪಘಾತ ಸಂಭವಿಸಿದ ಕುರಿತು ಗೋಲಾಘಾಟ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇನ್ ಸಿಂಗ್ ಮಾಹಿತಿ ನೀಡಿದ್ದಾರೆ. “ಬೆಳಗಿನ ಜಾವ 5 ಗಂಟೆ ಸುಮಾರಿಗೆ ಬಸ್‌ಗೆ ಟ್ರಕ್ ಡಿಕ್ಕಿಯಾಗಿದೆ. ಚತುಷ್ಪಥ ರಸ್ತೆಯಲ್ಲಿ ಬಸ್ ಸರಿಯಾದ ಲೇನ್‌ನಲ್ಲಿಯೇ ಹೊರಟಿತ್ತು. ಆದರೆ, ಟ್ರಕ್ ಡ್ರೈವರ್ ರಾಂಗ್ ಸೈಡ್‌ನಲ್ಲಿ ಬರುತ್ತಿದ್ದ. ಇದೇ ವೇಳೆ ಟ್ರಕ್ ಚಾಲಕನ ನಿಯಂತ್ರಣ ತಪ್ಪಿ ಬಸ್‌ಗೆ ಟ್ರಕ್ ಡಿಕ್ಕಿಯಾಗಿದೆ. ಅಪಘಾತ ಸಂಭವಿಸುತ್ತಲೇ ಟ್ರಕ್ ಚಾಲಕನು ಪರಾರಿಯಾಗಿದ್ದಾನೆ. ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Road Accident : ಎಲೆಕ್ಟ್ರಿಕ್ ಬಸ್- ಜೀಪ್ ಮಧ್ಯೆ ಭೀಕರ ಅಪಘಾತ; ನಾಲ್ವರು ಸಾವು
ಟ್ರಕ್ ಗುದ್ದಿದ ತೀವ್ರತೆಗೆ ಇಡೀ ಬಸ್ ನಜ್ಜುಗುಜ್ಜಾಗಿದೆ. 14 ಜನ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೃತರು ಎಲ್ಲಿಯವರು ಎಂಬುದು ಸೇರಿ ಅವರ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದುವರೆಗೆ ಬಸ್‌ನಲ್ಲಿದ್ದವರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. 14 ಜನರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಗಾಯಾಳುಗಳ ಮಾಹಿತಿ ಆಧರಿಸಿ ಬಳಿಕ ವರದಿ ತಯಾರಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ