ಗುಂಟೂರು: ಪೆದಕಾಕಾನಿ ಶ್ರೀ ಮಲ್ಲೇಶ್ವರ ಸ್ವಾಮಿ ದೇವಾಲಯದ ಸಿಬ್ಬಂದಿ ಕ್ಯಾಂಟಿನ್‌ನಲ್ಲಿ ಮಾಂಸಾಹಾರ ಅಡುಗೆ ಸಿದ್ಧಪಡಿಸುತ್ತಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕ್ಯಾಂಟಿನ್ ಸಿಬ್ಬಂದಿಯ ಈ ದುರ್ವರ್ತನೆ ಭಕ್ತರು ಹಾಗೂ ಹಿಂದೂ ಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ದೇವಾಲಯಕ್ಕೆ ಬರುವ ಭಕ್ತರಿಗೆ ಪ್ರತಿನಿತ್ಯ ಈ ಕ್ಯಾಂಟಿನ್‌ನಲ್ಲಿ ಅನ್ನದಾನ ಮಾಡಲಾಗುತ್ತದೆ. ಆದರೆ, ದೇಗುಲದ ಅದೇ ಕ್ಯಾಂಟಿನ್‌ನಲ್ಲಿ ಸಿಬ್ಬಂದಿ ಮಾಂಸಹಾರ ತಯಾರಿಸಿ ಸೇವಿಸಿರುವುದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
ಅಸಲಿಗೆ ನಡೆದಿದ್ದೇನು..?
ಪ್ರತಿನಿತ್ಯದಂತೆ ನಿನ್ನೆ ಮಧ್ಯಾಹ್ನ ಭಕ್ತರಿಗೆ ಅನ್ನದಾನ ಸಂತರ್ಪಣೆ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಆಲಯದ ಕ್ಯಾಂಟಿನ್‌ಗೆ ಸೈಕಲ್ ರಿಕ್ಷಾವೊಂದು ಬಂದಿದೆ. ಕ್ಯಾಂಟಿನ್ ಸಿಬ್ಬಂದಿ ರಿಕ್ಷಾಗೆಗೆ ಅನ್ನ, ಸಾಂಬಾರ್ ಹಾಗೂ ಮಾಂಸಾಹಾರದ ಅಡುಗೆಯನ್ನು ಇಡುವುದು ಭಕ್ತರ ಕಣ್ಣಿಗೆ ಬಿದ್ದಿದೆ. ಅಲ್ಲದೆ, ಕೆಲ ಭಕ್ತರು ಆಟೋದಲ್ಲಿ ಮಾಂಸಾಹಾರ ಸಾಗಿಸುವುದನ್ನು ಮೊಬೈಲ್‌ನಲ್ಲಿ ಫೋಟೋ ಹಿಡಿದಿದ್ದಾರೆ.
ಪೆದಕಾಕಾನಿ ದೇವಾಲಯದ ಕ್ಯಾಂಟಿನ್ ಸೀಜ್: ಪರವಾನಗಿ ರದ್ದು
ವೈಸಿಪಿ ಮುಖಂಡ ಷರೀಫ್ ಬೇರೆಯವರ ಹೆಸರಿನಲ್ಲಿ ಲೈಸೆನ್ಸ್ ಪಡೆದು ಕ್ಯಾಂಟಿನ್ ನಡೆಸುತ್ತಿದ್ದಾರೆ. ದೇವಸ್ಥಾನದ ಕ್ಯಾಂಟಿನ್‌ನಲ್ಲಿ ಮಾಂಸಹಾರ ತಯಾರಿಸಿ ಬೇರೆಡೆಗೆ ಸರಬರಾಜು ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ದೇವಸ್ಥಾನ ಆಡಳಿತ ಮಂಡಳಿ ಅಧಿಕಾರಿಗಳು ಆಲಯದ ಕ್ಯಾಂಟಿನ್‌ಗೆ ಬೀಗ ಜಡಿದಿದ್ದಾರೆ. ಅಲ್ಲದೆ, ಕ್ಯಾಂಟಿನ್ ನಡೆಸುತ್ತಿದ್ದವರ ಪರವಾನಗಿಯನ್ನು ರದ್ದು ಮಾಡಲಾಗಿದೆ.
ಆಡಳಿತ ಮಂಡಳಿ ವಿರುದ್ಧ ಭಕ್ತರ ಪ್ರತಿಭಟನೆ
ದೇವಸ್ಥಾನ ಆಡಳಿತ ಮಂಡಳಿಯ ನಿರ್ಲಕ್ಷ್ಯಕ್ಕೆ ಇದೀಗ ಭಕ್ತರು ಹಾಗೂ ಹಿಂದೂ ಪರ ಸಂಘಟನೆಗಳ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ದೇವಸ್ಥಾನ ಆಡಳಿತ ಮಂಡಳಿ ಕಚೇರಿ ಎದುರು ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಭಕ್ತರು ಭಾರಿ ಪ್ರತಿಭಟನೆ ನಡೆಸಿದರು. ಆಲಯದ ಕ್ಯಾಂಟಿನ್‌ನಲ್ಲಿ ಮಾಂಸಾಹಾರ ತಯಾರಿಸುತ್ತಿದ್ದರೂ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.