Site icon Vistara News

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 15 ಪಿಎಎಫ್​ಎಫ್​ ಉಗ್ರರನ್ನು ಕೊಂದ ಭಾರತೀಯ ಸೇನೆ

Security Force

ಜಮ್ಮು-ಕಾಶ್ಮೀರದಲ್ಲಿ ಉಗ್ರರ ವಿರುದ್ಧ ನಿರಂತರ ಹೋರಾಡುತ್ತಿರುವ ಭಾರತೀಯ ಸೇನೆ ಇದೀಗ ಪೀಪಲ್ಸ್​​ ಆ್ಯಂಟಿ ಫ್ಯಾಸಿಸ್ಟ್​ ಫ್ರಂಟ್​ (PAFF) ಸಂಘಟನೆಯ 15 ಉಗ್ರರನ್ನು ಕೊಲ್ಲುವ (Terrorists Killed)ಮೂಲಕ ಒಂದು ಬಹುದೊಡ್ಡ ದಾಳಿಯನ್ನು ತಡೆಗಟ್ಟಿದೆ. ಜೂ.16 ಮತ್ತು 24ರಂದು ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ಈ ಸಂಘಟನೆ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿತ್ತು. ಇವೆರಡೂ ಪ್ರತ್ಯೇಕ ಕಾರ್ಯಾಚರಣೆಗಳಿಂದ ಒಟ್ಟು 15 ಭಯೋತ್ಪಾದಕರು ಹತ್ಯೆಗೀಡಾಗಿದ್ದಾಗಿ (15PAFF Terrorists Killed) Indian Aerospace Defence News ಟ್ವೀಟ್ ಮಾಡಿ ತಿಳಿಸಿದೆ.

ಅಂದಹಾಗೇ, ಈ ಪಿಎಎಫ್​ಎಫ್ ಎಂಬುದು ಜೈಷೆ ಮೊಹಮ್ಮದ್​ ಸಂಘಟನೆಯ ಪ್ರಾತಿನಿಧಿಕ ಸಂಘಟನೆಯಾಗಿದ್ದು, 2020ರಿಂದಲೂ ಜಮ್ಮು-ಕಾಶ್ಮೀರದಲ್ಲಿ ಸಕ್ರಿಯವಾಗಿದೆ. ಇದೂ ಒಂದು ಉಗ್ರ ಸಂಘಟನೆ ಎಂದು 2023ರ ಜನವರಿಯಲ್ಲಿ ಭಾರತದ ಕೇಂದ್ರ ಗೃಹ ಇಲಾಖೆ ಗೊತ್ತುಪಡಿಸಿದೆ. ಕಾಶ್ಮೀರದಲ್ಲಿ ಅಸ್ಥಿರತೆ ಹುಟ್ಟಿಸಲೆಂದೇ ರೂಪುಗೊಂಡಿರುವ ಪಿಎಎಫ್​ಎಫ್​ ವಿರುದ್ಧ ಸೇನೆ ತೀಕ್ಷ್ಣ ಕಾರ್ಯಾಚರಣೆ ನಡೆಸುತ್ತಿದೆ.

ಹಾಗೇ, ಮಂಗಳವಾರ (ಜೂ.27)ದಂದು ಜಮ್ಮು-ಕಾಶ್ಮೀರದ ಕುಲಗಾಂವ್​ ಜಿಲ್ಲೆಯ ಹೂವ್​ರಾ ಎಂಬಲ್ಲಿ ಭಾರತೀಯ ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಜಂಟಿಯಾಗಿ ನಡೆಸಿದ್ದ ಕಾರ್ಯಾಚರಣೆಯಲ್ಲಿ ಅಲ್-ಬದ್ರ್​ (ಪಾಕಿಸ್ತಾನ ಗುಪ್ತಚರ ದಳ ಐಎಸ್​ಐನಿಂದ ರಚಿತವಾಗಿರುವ ಸಂಘಟನೆ) ಉಗ್ರನೊಬ್ಬ ಹತ್ಯೆಗೀಡಾಗಿದ್ದಾನೆ. ಹಾಗೇ, ಪೊಲೀಸ್ ಸಿಬ್ಬಂದಿಯೊಬ್ಬರಿಗೆ ಗಾಯವಾಗಿದೆ. ​ಹತ್ಯೆಗೀಡಾದ ಉಗ್ರನನ್ನು ಅದಿಲ್ ಮಜೀದ್ ಲೋನ್​ ಎಂದು ಗುರುತಿಸಲಾಗಿದ್ದು, ಈತ ಕುಲಗಾಂವ್​​ನ ಅಕ್ಬರಾಬಾದ್​ ಹೂವ್​ರಾ ಏರಿಯಾದ ನಿವಾಸಿಯಾಗಿದ್ದ. ಇವನ ಬಳಿ ಇದ್ದ ಹಲವು ಶಸ್ತ್ರಾಸ್ತ್ರಗಳನ್ನು, ಮದ್ದುಗುಂಡುಗಳು, ಗ್ರೆನೇಡ್​, ಮಾರಕಾಸ್ತ್ರಗಳನ್ನು ಸೇನೆ ವಶಪಡಿಸಿಕೊಂಡಿದೆ

Exit mobile version