ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದ ಬೀರ್‌ಭೂಮ್‌ನಲ್ಲಿ ಭಾದು ಶೇಖ್ ಎಂಬ ತೃಣಮೂಲ ಕಾಂಗ್ರೆಸ್ ಮುಖಂಡರನ್ನು ಹತ್ಯೆ ಮಾಡಿದ ಪ್ರಕರಣದ ತನಿಖೆಯನ್ನೂ ಪಶ್ಚಿಮ ಬಂಗಾಳ ಹೈಕೋರ್ಟ್ ಕೇಂದ್ರೀಯ ತನಿಖಾ ದಳಕ್ಕೆ(CBI) ವಹಿಸಿದೆ.
ಶೇಕ್ ಹತ್ಯೆ ನಂತರ ಸಮೀಪದ ಬೊಗ್ಟುಯ್ ಗ್ರಾಮದಲ್ಲಿ ನಡೆದ ಹಿಂಸಾಚಾರದ ತನಿಖೆಯನ್ನು ಸಿಬಿಐ ಈಗಾಗಲೆ ನಡೆಸುತ್ತಿದೆ. ಎರಡೂ ಪ್ರಕರಣಗಳಿಗೆ ಸಂಬಂಧಿವಿರುವುದರಿಂದ ಶೇಖ್ ಹತ್ಯೆ ಪ್ರಕರಣವನ್ನೂ ಸಿಬಿಐ ತನಿಖೆ ನಡೆಸುವುದು ಸೂಕ್ತ ಎಂಬ ಅರ್ಜಿಯನ್ನು ಪುರಸ್ಕರಿಸಿ ನ್ಯಾಯಾಲಯ ಆದೇಶಿಸಿದೆ.
ಮಾರ್ಚ್ 21ರಂದು ಬೀರ್‌ಭೂಮ್ ಪಂಚಾಯತ್‌ನ ತೃಣಮೂಲ ಕಾಂಗ್ರೆಸ್ ಮುಖಂಡ ಭಾದು ಶೇಖ್ ಹತ್ಯೆ ನಡೆದಿತ್ತು. ಘಟನಾ ಸ್ಥಳದಿಂದ ಸುಮಾರು ಒಂದು ಕಿ.ಮೀ. ದೂರದಲ್ಲಿರುವ ಬೊಗ್ಟುಯ್ ಎಂಬಲ್ಲಿ ಕಿಡಿಗೆಡಿಗಳ ಗುಂಪೊಂದು ಹಲವು ಮನೆಗಳಿಗೆ ಬೆಂಕಿ ಹಚ್ಚಿತ್ತು. ಹಿಂಸಾಚಾರ ಘಟನೆಯಲ್ಲಿ ಸುಮಾರು 9 ಜನರ ಸಜೀವ ದಹನವಾಗಿತ್ತು. ಈ ಎರಡೂ ಪ್ರಕರಣವನ್ನು ಪ್ರಾರಂಭದಲ್ಲಿ ಪಶ್ಚಿಮ ಬಂಗಾಳ ಪೊಲೀಸರೇ ತನಿಖೆ ನಡೆಸುತ್ತಿದ್ದರು. ಹತ್ಯಾಕಾಂಡ ಪ್ರಕರಣವನ್ನು ಹೈಕೋರ್ಟ್ ಈಗಾಗಲೆ ಸಿಬಿಐಗೆ ವಹಿಸಿದ್ದು, ಮಾರ್ಚ್ 25ರಂದು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.
ಶೇಖ್ ಹತ್ಯೆ ನಡೆದ ಸುಮಾರು ಒಂದು ಗಂಟೆಯೊಳಗೆ ಮತ್ತೊಂದು ಹಿಂಸಾಚಾರ ಕೃತ್ಯ ದಾಖಲಾಗಿತ್ತು. ಆದ್ಧರಿಂದ ಎರಡೂ ಪ್ರಕರಣಗಳು ಒಂದಕ್ಕೊಂದು ಸಂಬಂಧ ಹೊಂದಿವೆ. ಎರಡೂ ಪ್ರಕರಣವನ್ನು ಸಿಬಿಐ ತನಿಖೆ ನಡೆಸುವುದು ಸೂಕ್ತ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆಯಾಗಿತ್ತು. ಈ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿದೆ.
ಮತ್ತಷ್ಟು ಓದಿ: ಕೋಮು ದಳ್ಳುರಿಗೆ ಹೊತ್ತಿ ಉರಿದ ರಾಜಸ್ಥಾನ: ಪ್ರಾಣ ಪಣಕ್ಕಿಟ್ಟು ನಾಲ್ವರನ್ನು ರಕ್ಷಿಸಿದ ಪೇದೆ
ಈಗಾಗಲೆ ಹತ್ಯಾಕಾಂಡ ಘಟನೆಯನ್ನು ತನಿಖೆ ನಡೆಸುತ್ತಿರುವ ಸಿಬಿಐ, ನಾಲ್ವರನ್ನು ಸೆರೆ ಹಿಡಿದಿದೆ. ಈ ನಾಲ್ವರು ಪಶ್ಚಿಮ ಬಂಗಾಳ ಮೂಲವರಾಗಿದ್ದು ಹತ್ಯೆ ನಡೆದ ಬಳಿಕ ಮುಂಬೈನಲ್ಲಿ ತಲೆಮರೆಸಿಕೊಂಡಿದ್ದರು ಎಂದು ಸಿಬಿಐ ಅಧಿಕಾರಿಗಳು ತಿಳಿಸದ್ದಾರೆ. ಭಾದು ಶೇಖ್ ಹತ್ಯೆ ಪ್ರಕರಣದಲ್ಲಿ ಬಂಧಿಸಿದ ನಾಲ್ವರು ಆರೋಪಿಗಳನ್ನು ಬಪ್ಪಾ, ಶಬು ಶೇಖ್, ತಾಜ್ ಮೊಹಮ್ಮದ್ ಹಾಗೂ ಸೆರಜುಲ್ ಎಂದು ಗುರುತಿಸಲಾಗಿದೆ.