Site icon Vistara News

Tejas Mk2 | ದೇಶೀಯ ತೇಜಸ್‌ ಯುದ್ಧ ವಿಮಾನಗಳಿಗೆ 16 ರಾಷ್ಟ್ರದಿಂದ ಬೇಡಿಕೆ, ಮೇಕ್‌ ಇನ್‌ ಇಂಡಿಯಾಗೆ ಬಲ

Tejas Mk2

ನವದೆಹಲಿ: ದೇಶದ ರಕ್ಷಣಾ ಕ್ಷೇತ್ರದಲ್ಲೂ ಆತ್ಮನಿರ್ಭರತೆ ಸಾಧಿಸಲು ಕೇಂದ್ರ ಸರ್ಕಾರವು ಮೇಕ್‌ ಇನ್‌ ಇಂಡಿಯಾಗೆ (Make In India) ಒತ್ತು ನೀಡುತ್ತಿರುವ ಕಾರಣ ಭಾರತದ ಯುದ್ಧವಿಮಾನ, ಶಸ್ತ್ರಾಸ್ತ್ರಗಳಿಗೆ ಬೇರೆ ದೇಶಗಳಿಂದ ಹೆಚ್ಚಿನ ಬೇಡಿಕೆ ಉಂಟಾಗಿದೆ. ಇದೇ ಕಾರಣದಿಂದಾಗಿ ಕಳೆದ ಐದು ವರ್ಷದಲ್ಲಿ ರಕ್ಷಣಾ ರಫ್ತು ಶೇ.339ರಷ್ಟು ಹೆಚ್ಚಾಗಿದೆ. ಇದರ ಬೆನ್ನಲ್ಲೇ ದೇಶೀಯ ಎಲ್‌ಸಿಎ ತೇಜಸ್‌ ಎಂಕೆ2 (Tejas Mk2) ಯುದ್ಧವಿಮಾನಗಳ ಖರೀದಿಗೆ 16 ದೇಶಗಳು ಆಸಕ್ತಿ ತೋರಿವೆ. ಇದಕ್ಕಾಗಿ ಉತ್ಪಾದನೆ ಕ್ಷಿಪ್ರಗೊಳಿಸಲು ಸರ್ಕಾರ ಹಲವು ಪ್ರಯತ್ನ ಮಾಡುತ್ತಿದೆ ಎಂದು ತಿಳಿದುಬಂದಿದೆ. ಇದರಿಂದ ಮೇಕ್‌ ಇನ್‌ ಇಂಡಿಯಾಗೆ ಬಲ ಬರಲಿದೆ ಎಂದೇ ಹೇಳಲಾಗುತ್ತಿದೆ.

“ಕಳೆದ ಸೆಪ್ಟೆಂಬರ್‌ನಲ್ಲಿಯೇ ಕೇಂದ್ರ ಸರ್ಕಾರವು ಎಲ್‌ಸಿಎ ತೇಜಸ್‌ ಎಂಕೆ2 ಯುದ್ಧವಿಮಾನಗಳ ಉತ್ಪಾದನೆ ಹೆಚ್ಚಿಸುವ ನಿರ್ಧಾರ ತೆಗೆದುಕೊಂಡಿದೆ. ಈಗ 16 ದೇಶಗಳು ಯುದ್ಧವಿಮಾನಗಳ ಖರೀದಿಗೆ ಆಸಕ್ತಿ ತೋರಿವೆ. ಹಾಗಾಗಿ, ಯುದ್ಧವಿಮಾನಗಳ ಉತ್ಪಾದನೆ ಕ್ಷಿಪ್ರಗೊಳಿಸುವ ದಿಸೆಯಲ್ಲಿ ಖಾಸಗಿ ಏಜೆನ್ಸಿಗಳನ್ನು ಸಂಪರ್ಕಿಸುವ ಪ್ರಯತ್ನ ನಡೆಯುತ್ತಿದೆ” ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

“ಸದ್ಯ, ದೇಶೀಯವಾಗಿ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (HAL) ಲಘು ತೇಜಸ್‌ ಎಂಕೆ2 ಯುದ್ಧವಿಮಾನಗಳನ್ನು ಉತ್ಪಾದಿಸುತ್ತಿದೆ. ಈಗಾಗಲೇ 48 ಸಾವಿರ ಕೋಟಿ ರೂ. ವೆಚ್ಚದಲ್ಲಿ 73 ತೇಜಸ್ ಎಂಕೆ1ಎ (‌Tejas MK1A) ಯುದ್ಧವಿಮಾನಗಳ ಉತ್ಪಾದನೆ ಮಾಡುತ್ತಿದೆ. ಇದು ಭಾರತದ ಸೇನೆಗೆ ಬೇಕಾಗುವಷ್ಟು ಯುದ್ಧವಿಮಾನಗಳನ್ನು ನಿರ್ಮಿಸುತ್ತದೆ. ಬೇರೆ ದೇಶಗಳಿಗೆ ರಫ್ತು ಮಾಡಲು ಉತ್ಪಾದನೆ ಹೆಚ್ಚಿಸುವ ದಿಸೆಯಲ್ಲಿ ಖಾಸಗಿ ಏಜೆನ್ಸಿಗಳ ಮೊರೆ ಹೋಗಲು ಸರ್ಕಾರ ಚಿಂತನೆ ನಡೆಸಿದೆ. ಇದಕ್ಕಾಗಿ ಉನ್ನತ ಮಟ್ಟದ ಚರ್ಚೆ, ಸಂವಾದವೂ ನಡೆಸಲಾಗುತ್ತಿದೆ. ರಫ್ತು ಕಾರಣಕ್ಕಾಗಿ ವರ್ಷಕ್ಕೆ 24 ಯುದ್ಧವಿಮಾನ ಉತ್ಪಾದಿಸುವ ಗುರಿ ಇದೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | INS Vikrant | ಐಎನ್ಎಸ್ ವಿಕ್ರಾಂತ್ ಕಾರ್ಯಾರಂಭ, ನೌಕಾಪಡೆಗೆ ಹೊಸ ಧ್ವಜ ನೀಡಿದ ಪ್ರಧಾನಿ ಮೋದಿ

Exit mobile version