ಹೈದರಾಬಾದ್: ತೆಲಂಗಾಣದಲ್ಲಿ ಜನ್ಮದಿನವೇ 16 ವರ್ಷದ ಬಾಲಕ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಆಸಿಫಾಬಾದ್ ಜಿಲ್ಲೆಯ ಬಾಬಾಪುರ್ ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ಸಿ.ಎಚ್.ಸಚಿನ್ ಎಂಬ ಬಾಲಕ ಜನ್ಮದಿನದಂದೇ ಮೃತಪಟ್ಟಿದ್ದು, ಇಡೀ ಗ್ರಾಮವೇ ದುಃಖದ ಮಡುವಿನಲ್ಲಿ ಮುಳುಗಿದೆ.
ಸಚಿನ್ ಬರ್ತ್‌ಡೇ ಹಿನ್ನೆಲೆಯಲ್ಲಿ ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಿದ್ದಾರೆ. ಇದಕ್ಕಾಗಿ ಮನೆಯ ಸುತ್ತ ಆತನ ಫೋಟೊಗಳನ್ನು ಫ್ಲೆಕ್ಸ್ ಮಾಡಿ ಹಾಕಿದ್ದರು. ನೆರೆಯ ಮನೆಯವರು, ಸಚಿನ್ ಸ್ನೇಹಿತರನ್ನು ಕೂಡ ಕರೆಯಲಾಗಿತ್ತು. ಇನ್ನೇನು ಸಚಿನ್ ಕೇಕ್ ಕತ್ತರಿಸಬೇಕು ಎನ್ನುವಷ್ಟರಲ್ಲೇ ಆತ ಕುಸಿದುಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದರು.
ಜನ್ಮದಿನದಂದೇ ಮಗನನ್ನು ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲುಮುಟ್ಟಿತ್ತು. ಇನ್ನು ಆತನಿಗೆಂದೇ ತಂದ ಕೇಕ್‌ಅನ್ನು ಶವದ ಬಳಿ ಇಟ್ಟು ಪೋಷಕರು ಕತ್ತರಿಸಿದಾಗ ಇಡೀ ಗ್ರಾಮದ ಜನರ ಕಣ್ಣಾಲಿಗಳು ಒದ್ದೆಯಾಗಿದ್ದವು. ಸಚಿನ್ ಕೈಯಿಂದಲೇ ಕೇಕ್ ಕತ್ತರಿಸಿದ ದೃಶ್ಯವು ಎಂತಹ ಕಟುಕ ಮನಸ್ಸನ್ನೂ ಕರಗಿಸುವಂತಿತ್ತು.
ಇದನ್ನೂ ಓದಿ: Youth Drowned : ತುಂಗಭದ್ರಾ ನದಿಯಲ್ಲಿ ಮುಳುಗಿ ಯುವಕ ಸಾವು; ಸಂಕ್ರಾಂತಿಗೆಂದು ಹಂಪಿಗೆ ಬಂದಿದ್ದಾಗ ದುರ್ಘಟನೆ
ಇತ್ತೀಚೆಗೆ ಹೆಚ್ಚಿನ ಪ್ರಮಾಣದಲ್ಲಿ ಯುವಕರು ಹಾಗೂ ಮಧ್ಯ ವಯಸ್ಕರಿಗೇ ಹೃದಯಾಘಾತ ಆಗುತ್ತಿರುವುದು, ಹೃದಯಾಘಾತದಿಂದ ಮೃತಪಡುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಇದರ ಕುರಿತು ಸಂಶೋಧನೆ ಆಗಬೇಕು ಎಂಬ ಆಗ್ರಹಗಳು ಕೂಡ ಕೇಳಿಬರುತ್ತಿವೆ.