ತ್ರಿಶೂರ್: 17 ವರ್ಷದ ಹುಡುಗಿ ತನ್ನ ಹೆತ್ತ ಅಪ್ಪನಿಗೆ ಮರು ಜನ್ಮ ನೀಡಿ, ಅವರ ಪಾಲಿಗೆ ಅಮ್ಮನಂತಾಗಿದ್ದಾಳೆ. 12ನೇ ಕೇರಳದ ತ್ರಿಶೂರ್ನ 12ನೇ ತರಗತಿ ಹುಡುಗಿ ದೇವಾನಂದಾ ತನ್ನ ಅಪ್ಪನಿಗೆ ಲಿವರ್ ದಾನ ಮಾಡುವ (Daughter donated Liver) ಮೂಲಕ, ದೇಶದ ಅತಿ ಕಿರಿಯ ವಯಸ್ಸಿನ ಅಂಗಾಂಗ ದಾನಿ (ಬದುಕಿದ್ದಾಗಲೇ ಅಂಗದಾನ) ಎಂಬ ಹೆಗ್ಗಳಿಕೆಗೂ ಪಾತ್ರಳಾಗಿದ್ದಾಳೆ. ಇವಳ ತ್ಯಾಗದ ಸುದ್ದಿ ರಾಷ್ಟ್ರಾದ್ಯಂತ ಹಬ್ಬಿ ಮೆಚ್ಚುಗೆ-ಶ್ಲಾಘನೆಯ ಮಹಾಪೂರವೇ ಹರಿದುಬರುತ್ತಿದೆ.
ದೇವಾನಂದಾಳ ತಂದೆ ಪ್ರತೀಶ್, ಕೇರಳದ ತ್ರಿಶೂರ್ನಲ್ಲಿ ಕೆಫೆಯೊಂದನ್ನು ನಡೆಸುತ್ತಿದ್ದಾರೆ. 48ವರ್ಷದ ಇವರು ಅನಾರೋಗ್ಯಕ್ಕೀಡಾಗಿದ್ದರು. ಲಿವರ್ನಲ್ಲಿ ಕ್ಯಾನ್ಸರ್ಕಾರಕ ಹುಣ್ಣುಗಳು ಉಂಟಾಗಿದ್ದವಲ್ಲದೆ, ಲಿವರ್ ಸಂಬಂಧಿ ಇನ್ನಿತರ ಕಾಯಿಲೆಗಳೂ ವಿಕೋಪಕ್ಕೆ ಹೋಗಿದ್ದವು. ಲಿವರ್ (ಯಕೃತ್ತು) ಕಸಿಯ ಹೊರತಾಗಿ, ಇನ್ಯಾವುದೇ ಚಿಕಿತ್ಸೆಯಿಂದಲೂ ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದರು. ಆದರೆ ಲಿವರ್ ಕಸಿ ಮಾಡುವುದು ಸುಲಭವಾಗಿರಲಿಲ್ಲ. ಯಾರ ರಕ್ತದ ಗುಂಪೂ ಹೊಂದಾಣಿಕೆಯಾಗುತ್ತಿರಲಿಲ್ಲ.
ಆಗ ದೇವಾನಂದಾ ತಾನು ಲಿವರ್ ದಾನ ಮಾಡುವುದಾಗಿ ಮುಂದೆ ಬಂದಳು. ರಕ್ತದ ಗುಂಪು ಹೊಂದಾಣಿಕೆಯಾದರೂ ಕಾನೂನು ಪ್ರಕಾರ 18 ವರ್ಷ ಕೆಳಗಿನವರು ಅಂಗಾಂಗ ದಾನ ಮಾಡುವಂತಿಲ್ಲ ಎಂಬ ನಿಯಮ ದೇವಾನಂದಾಳಿಗೆ ತೊಡಕಾಯಿತು. ಆದರೆ ಸುಮ್ಮನೆ ಕೂರದ ಆಕೆ ಕೇರಳ ಹೈಕೋರ್ಟ್ಗೆ ಈ ಬಗ್ಗೆ ಅರ್ಜಿ ಸಲ್ಲಿಸಿ, ‘ನನ್ನ ಅಪ್ಪನಿಗೆ ನಾನು ನನ್ನ ಲಿವರ್ನ ಒಂದು ಭಾಗವನ್ನು ದಾನ ಮಾಡಲು ಸ್ವ ಇಚ್ಛೆಯಿಂದ ಮುಂದಾಗಿದ್ದೇನೆ, ಅನುಮತಿ ಕೊಡಿ’ ಎಂದು ಕೇಳಿಕೊಂಡಳು. ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ಸಮ್ಮತಿಯನ್ನೂ ನೀಡಿತು. ಕೋರ್ಟ್ ಒಪ್ಪಿಗೆಯ ನಂತರ ದೇವಾನಂದಾ ಉಳಿದೆಲ್ಲ ವೈದ್ಯಕೀಯ ತಪಾಸಣೆಗೂ ಒಳಪಟ್ಟಳು. ಅಂತಿಮವಾಗಿ ಫೆ.9ರಂದು ಕೊಚ್ಚಿಯ ರಾಜಗಿರಿ ಆಸ್ಪತ್ರೆಯಲ್ಲಿ, ಇಲ್ಲಿನ ಬಹು ಅಂಗಾಂಗ ಕಸಿ ಸೇವೆಗಳ ಮುಖ್ಯಸ್ಥ ಡಾ.ರಾಮಚಂದ್ರನ್ ನಾರಾಯಣ ಮೆನನ್ ನೇತೃತ್ವದ ತಂಡದಿಂದ, ತಂದೆ-ಮಗಳಿಬ್ಬರಿಗೂ ಸರ್ಜರಿಯಾಗಿದೆ. ಇಬ್ಬರೂ ಆರೋಗ್ಯವಾಗಿದ್ದಾರೆ.
ಇದನ್ನೂ ಓದಿ: ಲಿವರ್ ಸಮಸ್ಯೆ: ನವಜೋತ್ ಸಿಂಗ್ ಸಿಧು ಈಗ ಸೆರೆಮನೆಯಿಂದ ಆಸ್ಪತ್ರೆಗೆ!
ಡಯೆಟ್ ಅನಿವಾರ್ಯವಾಗಿತ್ತು
ಒಬ್ಬ ಆರೋಗ್ಯವಂತ ವ್ಯಕ್ತಿಯ ಲಿವರ್ನ ಒಂದು ಭಾಗವನ್ನು ಅನಾರೋಗ್ಯಕರ ವ್ಯಕ್ತಿಗೆ ಹಾಕಬಹುದಾಗಿದೆ. ಆರೋಗ್ಯವಂತ ವ್ಯಕ್ತಿಯಲ್ಲಿ ಮತ್ತೆ ಲಿವರ್ ಬೆಳೆಯುತ್ತದೆ. ಆದರೂ ಇದು ಅಷ್ಟೇ ಅಪಾಯಕಾರಿಯೂ ಹೌದು ಎನ್ನುತ್ತದೆ ವೈದ್ಯಕೀಯ ಲೋಕ. ಈಗಿಲ್ಲಿ ಪ್ರತೀಶ್ ಅವರಿಗೆ ಲಿವರ್ ಕಸಿ ಮಾಡಬೇಕು ಎಂದಾಗಲೂ ಕುಟುಂಬದವರು ದಾನಿಗಳಿಗಾಗಿ ಎಷ್ಟೆಷ್ಟೋ ಹುಡುಕಾಟ ನಡೆಸಿದರು. ಆಮೇಲೆ ಮಗಳು ದೇವಾನಂದಾಳೇ ಮುಂದೆ ಬಂದಳು. ದೇವಾನಂದಾ ಕೂಡ ಲಿವರ್ ದಾನ ಮಾಡುವ ಮೊದಲು ಅದರ ಆರೋಗ್ಯಕ್ಕಾಗಿ ತನ್ನ ಆಹಾರ ಕ್ರಮ ಬದಲಿಸಿಕೊಂಡಳು. ಡಯೆಟ್ ಮಾಡಿದ್ದಳು, ಪ್ರತಿದಿನ ವ್ಯಾಯಾಮ ಮಾಡುತ್ತಿದ್ದಳು. ಹೀಗೆ ಅಪ್ಪನಿಗಾಗಿ ಮಿಡಿದು, ಅವರಿಗಾಗಿ ಲಿವರ್ ದಾನ ಮಾಡಿದ ದೇವಾನಂದಾಳನ್ನು ಆಸ್ಪತ್ರೆಯ ಸಿಬ್ಬಂದಿಯೂ ಮೆಚ್ಚಿಕೊಂಡಿದ್ದಾರೆ. ಆಕೆಯ ವೈದ್ಯಕೀಯ ತಪಾಸಣೆ, ಸರ್ಜರಿಯ ಬಿಲ್ನ್ನು ಮನ್ನಾ ಮಾಡಿದ್ದಾರೆ. ಅಂದರೆ ಕೇವಲ, ಆಕೆಯ ಅಪ್ಪನಿಗೆ ಕಸಿ ಮಾಡಲು ಮಾತ್ರ ಹಣ ಪಡೆಯಲಾಗಿದೆ.