ನವ ದೆಹಲಿ: ಅರುಣಾಚಲ ಪ್ರದೇಶದ ಕುರುಂಗ್ ಕುಮೆ ಜಿಲ್ಲೆಯ, ಭಾರತ-ಚೀನಾ ಗಡಿ ಭಾಗವಾದ ಡಾಮಿನ್ ವೃತ್ತದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದ ಕಾರ್ಮಿಕರು ಕಳೆದ 14ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಒಬ್ಬ ಕೆಲಸಗಾರ ಮೃತಪಟ್ಟಿದ್ದು ದೃಢವಾಗಿದೆ. ಇನ್ನು 18 ಕಾರ್ಮಿಕರು ಕಾಣಿಸುತ್ತಿಲ್ಲ. ಈ ಸ್ಥಳದಲ್ಲಿ ಗಡಿ ರಸ್ತೆಗಳ ಸಂಸ್ಥೆ (Border Roads Organisation)ಯಿಂದ ರಸ್ತೆ ನಿರ್ಮಾಣ ನಡೆಯುತ್ತಿದೆ. ಈ ಕಾಮಗಾರಿ ಸ್ಥಳದಿಂದ ಒಟ್ಟು 19 ಕಾರ್ಮಿಕರು ಜುಲೈ 5ರಿಂದ ನಾಪತ್ತೆಯಾಗಿದ್ದರು. ಅದರಲ್ಲಿ ಒಬ್ಬಾತನ ಮೃತದೇಹ ಅಲ್ಲೇ ಸಮೀಪದಲ್ಲಿರುವ ಫುರಾಕ್ ಎಂಬ ಸಣ್ಣದಾದ ನದಿಯೊಂದರಲ್ಲಿ ಪತ್ತೆಯಾಗಿದೆ ಎಂದು ಕುರುಂಗ್ ಕುಮೆ ಜಿಲ್ಲೆಯ ಜಿಲ್ಲಾಧಿಕಾರಿ ಬೆಂಗಿಯಾ ನಿಘೀ ತಿಳಿಸಿದ್ದಾರೆ.
ಹೀಗೆ ನಾಪತ್ತೆಯಾದವರಲ್ಲಿ ಬಹುತೇಕರು ಮುಸ್ಲಿಮರೇ ಆಗಿದ್ದಾರೆ. ಜುಲೈ 5 ರಂದು ಈದ್ ಹಬ್ಬಕ್ಕಾಗಿ ಅವರು ಕಾಮಗಾರಿ ಸ್ಥಳದಿಂದ ತೆರಳಿರುವ ಸಾಧ್ಯತೆ ಇದೆ. ಅವರು ಮನೆಗೂ ಹೋಗಿಲ್ಲ, ವಾಪಸ್ ಕೆಲಸಕ್ಕೂ ಬಂದಿಲ್ಲ ಎಂದು ರಸ್ತೆ ನಿರ್ಮಾಣ ಯೋಜನೆ ಗುತ್ತಿಗೆದಾರ ದೂರು ದಾಖಲಿಸಿದ್ದಾರೆ. ಪೊಲೀಸ್ ತಂಡ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ, ಸಂಬಂಧಪಟ್ಟವರ ವಿಚಾರಣೆ ನಡೆಸುತ್ತಿದೆ ಎಂದೂ ನಿಘೀ ಮಾಹಿತಿ ನೀಡಿದ್ದಾರೆ.
ರಜಾ ಕೊಟ್ಟಿರಲಿಲ್ಲ
ಗಡಿ ಭಾಗದಲ್ಲಿ ರಸ್ತೆ ಕಾಮಗಾರಿ ನಡೆಸುತ್ತಿದ್ದವರಲ್ಲಿ ಅನೇಕರು ಮುಸ್ಲಿಮರೇ ಇದ್ದರು ಮತ್ತು ಅವರೆಲ್ಲ ಅಸ್ಸಾಂನವೇ ಆಗಿದ್ದರು. ಇವರೆಲ್ಲ ಈದ್ ಹಬ್ಬಕ್ಕೆ (ಜು.10) ರಜೆ ಬೇಕು, ನಾವು ಊರಿಗೆ ಹೋಗಿ ಹಬ್ಬ ಮಾಡಬೇಕು ಎಂದು ಕೇಳಿದ್ದರು. ಆದರೆ ಮೇಲಧಿಕಾರಿಗಳು ರಜೆ ಕೊಟ್ಟಿರಲಿಲ್ಲ. ಇದೇ ಬೇಸರಕ್ಕೆ ಯಾರಿಗೂ ಹೇಳದೆ ಕೆಲಸ ಬಿಟ್ಟು ತಮ್ಮೂರಿಗೆ ಹೊರಟಿದ್ದರು ಎಂದು ಹೇಳಲಾಗಿದೆ.
ಇದನ್ನೂ ಓದಿ: ಮತ್ತೆ ಕಾಲು ಕೆದರಿ ಕಿರಿಕ್ ಮಾಡಿದ ಚೀನಾ: ಲಡಾಕ್ ಗಡಿ ಭಾಗದಲ್ಲಿ ಹಾರಾಡಿದ ವಿಮಾನ