ತೆಲಂಗಾಣ: 18 ವರ್ಷದ ಯುವತಿಯನ್ನು ಆಕೆಯ ತಂದೆಯ ಎದುರಲ್ಲೇ ಅಪಹರಣ ಮಾಡಿದ ಶಾಕಿಂಗ್ ಘಟನೆ ತೆಲಂಗಾಣದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯಿಂದ ವರದಿಯಾಗಿದೆ. ಯುವತಿಯನ್ನು ನಾಲ್ವರು ದುಷ್ಕರ್ಮಿಗಳು ಎಳೆದು, ಕಾರಿನಲ್ಲಿ ಹಾಕಿಕೊಂಡು ಕಿಡ್ನ್ಯಾಪ್ ಮಾಡಿದ ವಿಡಿಯೊ ವೈರಲ್ ಆಗಿದೆ.
ಬಿಳಿ ಬಣ್ಣದ ಕಾರೊಂದು ಮನೆಯೊಂದರ ಮುಂದೆ ಬಂದು ನಿಲ್ಲುತ್ತದೆ. ಆಗ ಆ ಮನೆಯಿಂದ ಯುವತಿಯೊಬ್ಬಳು ಹೊರಗೆ ಓಡಲು ಪ್ರಯತ್ನಿಸುತ್ತಾಳೆ. ಅಷ್ಟರಲ್ಲಿ ಒಬ್ಬಾತ ಆಕೆಯನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತಾನೆ. ಹಾಗೇ ಇನ್ನೊಬ್ಬಾತ ಅವಳ ತಂದೆಯನ್ನು ಹಿಡಿದಿದ್ದ. ಆತ ಹುಡುಗಿಯನ್ನು ಬಲವಂತವಾಗಿ ಕಾರಿಗೆ ನೂಕಿ, ಬಾಗಿಲು ಹಾಕುತ್ತಾನೆ. ಅಷ್ಟರಲ್ಲಿ ತಂದೆಯನ್ನು ಹಿಡಿದುಕೊಂಡವನೂ ಆತನನ್ನು ಬಿಟ್ಟು ಬಂದು ಕಾರಿನಲ್ಲಿ ಕುಳಿತುಕೊಳ್ಳುತ್ತಾನೆ. ಕಾರು ಅಲ್ಲಿಂದ ಹೊರಡುತ್ತದೆ. ತಂದೆ ಅಸಾಹಯಕನಂತೆ ಓಡಿಬಂದು ನಿಲ್ಲುತ್ತಾರೆ. ಅಷ್ಟೇ ಅಲ್ಲ, ‘ಆ ನಾಲ್ವರು ನನಗೆ ಹೊಡೆದಿದ್ದಾರೆ’ ಎಂದೂ ಆ ಅಪ್ಪ ಹೇಳಿಕೊಂಡಿದ್ದಾರೆ.
ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯ ಮೂಡೆಪಲ್ಲೆ ಎಂಬ ಗ್ರಾಮದಲ್ಲಿ ಮುಂಜಾನ 5.30ರ ಹೊತ್ತಿಗೆ ನಡೆದ ಘಟನೆಯಿದು. ಈ ಹುಡುಗಿ ಕಾಲೇಜು ವಿದ್ಯಾರ್ಥಿನಿಯಾಗಿದ್ದು, ಅಪ್ಪ ದೇವಸ್ಥಾನವೊಂದರಲ್ಲಿ ಕೆಲಸ ಮಾಡಿಕೊಂಡು ಇದ್ದಾರೆ. ಇದೀಗ ಅವರು ಪೊಲೀಸರಿಗೆ ದೂರು ನೀಡಿದ್ದು, ‘ಈ ನಾಲ್ವರಲ್ಲಿ ಒಬ್ಬಾತ ನಮ್ಮ ಹಳ್ಳಿಯವನೇ’ ಎಂದು ತಿಳಿಸಿದ್ದಾರೆ.
ಇನ್ನು ಘಟನೆ ಬಗ್ಗೆ ಮಾಹಿತಿ ನೀಡಿರುವ ವೇಮುಲವಾಡ ಡಿಎಸ್ಪಿ ನಾಗೇಂದ್ರಾಚಾರಿ, ನಾವು ಕೇಸ್ ದಾಖಲು ಮಾಡಿಕೊಂಡಿದ್ದೇವೆ. ಆರೋಪಿಗಳನ್ನು ಟ್ರೇಸ್ ಮಾಡಲು ಪ್ರಯತ್ನ ಮಾಡುತ್ತಿದ್ದೇವೆ. ಈ ಹುಡುಗಿ ಕೆಲವು ತಿಂಗಳುಗಳ ಹಿಂದೆ ಒಬ್ಬ ಹುಡುಗನನ್ನು ಪ್ರೀತಿಸಿ, ಅವನೊಂದಿಗೆ ಓಡಿಹೋಗಿದ್ದಳು. ಆಗಿನ್ನು ಅಪ್ರಾಪ್ತ ವಯಸ್ಸಿನವಳಾಗಿದ್ದಳು. ಮತ್ತೆ ಮನೆಗೆ ವಾಪಸ್ ಕರೆದುಕೊಂಡು ಬರಲಾಯ್ತು. ಈಗ ಆಕೆಗೆ 18 ವರ್ಷ ತುಂಬಿದ್ದು, ಇನ್ನೊಬ್ಬಾತನೊಂದಿಗೆ ಮದುವೆ ಫಿಕ್ಸ್ ಆಗಿದೆ. ಈ ವಿಷಯ ಗೊತ್ತಾಗಿ ಆ ಹುಡುಗನೇ ಕಿಡ್ನ್ಯಾಪ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆರೋಪಿಗಳ ಪತ್ತೆಗೆ ನಾವು ಮೂರು ತಂಡಗಳನ್ನು ರಚಿಸಿದ್ದು, ಶೀಘ್ರವೇ ಅವರನ್ನೆಲ್ಲ ಬಂಧಿಸುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: Viral Video| ಮನೆಗೇ ನುಗ್ಗಿ ಯುವತಿಯನ್ನು ಅಪಹರಿಸಿಕೊಂಡು ಹೋದ 100 ಮಂದಿ ಯುವಕರು; ಅಡ್ಡಬಂದವರಿಗೆಲ್ಲ ಥಳಿತ